

ಮುಂಡಗೋಡ: ತಾಲೂಕು ಸರ್ಕಾರಿ ಆಸ್ಪತ್ರೆ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಖಾಸಗಿ ಸಂಸ್ಥೆಯ ಔಷಧ ಮಾರಾಟ ಮಾಡುತ್ತಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಆಡಳಿತ ವೈದ್ಯಾಧಿಕಾರಿ ಡಾ. ಸ್ವರೂಪರಾಣಿ ಪಾಟೀಲ ಅವರ ನೇತೃತ್ವದ ತಂಡ ಜನೌಷಧ ಕೇಂದ್ರಕ್ಕೆ ಬೀಗ ಹಾಕಿದ ಘಟನೆ ಶನಿವಾರ ಜರುಗಿದೆ.
ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ಜು. 30ರಂದು ಆಸ್ಪತ್ರೆ ಆವರಣದಲ್ಲಿರುವ ಕ್ಯಾಂಟೀನ್ ಹಾಗೂ ಜನೌಷಧ ಕೇಂದ್ರದ ಮೇಲೆ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳ ತಂಡ ದಾಳಿ ನಡೆಸಿತ್ತು. ಈ ವೇಳೆ ಜನೌಷಧ ಕೇಂದ್ರದಲ್ಲಿ ಇತರೆ ಖಾಸಗಿ ಕಂಪನಿಯ ಔಷಧ ಮಾರಾಟ ಮಾಡುತ್ತಿರುವುದು ಕಂಡುಬಂದ ಹಿನ್ನೆಲೆ ನೋಟಿಸ್ ನೀಡಿ ಮೇಲಧಿಕಾರಿಗಳಿಗೆ ವರದಿ ಕಳಿಸಲಾಗಿತ್ತು.
ವರದಿ ಪರಿಶೀಲಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ನೀರಜ ಬಿ.ವಿ. ಜನೌಷಧ ಕೇಂದ್ರದಲ್ಲಿ ಲೋಪದೋಷಗಳು ಕಂಡುಬಂದ ಹಿನ್ನೆಲೆಯಲ್ಲಿ ಜನೌಷಧ ಕೇಂದ್ರ ಸ್ಥಗಿತಗೊಳಿಸಲು ಆದೇಶಿಸಿದ್ದು, ಅದರಂತೆ ಆಡಳಿತ ವೈದ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ನಂತರ ಮಾತನಾಡಿದ ಆಡಳಿತ ವೈದ್ಯಾಧಿಕಾರಿ ಡಾ.ಸ್ವರೂಪರಾಣಿ ಪಾಟೀಲ, ಕ್ಯಾಂಟೀನ್ ಹಾಗೂ ಜನೌಷಧ ಕೇಂದ್ರ ಮೇಲೆ ದಾಳಿ ನಡೆಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗಿತ್ತು. ಈ ಸಂಬಂಧ ಜಿಲ್ಲಾ ಆರೋಗ್ಯಾಧಿಕಾರಿಗಳು ಜನೌಷಧ ಕೇಂದ್ರ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. ಅಲ್ಲದೆ, ಕ್ಯಾಂಟೀನ್ ಟೆಂಡರ್ ಷರತ್ತುಗಳನ್ನು ಪರಶೀಲಿಸಿ ಒಂದು ವಾರದಲ್ಲಿ ಕ್ರಮಕೈಗೊಳ್ಳುವ ಕುರಿತು ಆದೇಶಿಸಲಿದ್ದಾರೆ ಎಂದು ತಿಳಿಸಿದರು.