ಜನತಾ ಕರ್ಫ್ಯೂ ಕರೆಗೆ ಸ್ಪಂದಿಸಿದ ಕರಾವಳಿ

pumpwell new
Published on

ಮಂಗಳೂರು/ಉಡುಪಿ: ಕರೊನಾ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ನೀಡಿದ್ದ ಜನತಾ ಕರ್ಫ್ಯೂ ಕರೆಗೆ ಕರಾವಳಿ ಜನತೆ ಪೂರ್ಣ ಸ್ಪಂದನೆ ನೀಡಿದ್ದಾರೆ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಾದ್ಯಂತ ಅಂಗಡಿಗಳು, ಹೋಟೆಲ್, ಬಸ್, ಆಟೊ, ಟ್ಯಾಕ್ಸಿ ಸೇರಿದಂತೆ ಬಹುತೇಕ ಎಲ್ಲ ವ್ಯವಸ್ಥೆಗಳೂ ಭಾನುವಾರ ಬಂದ್ ಆಗಿದ್ದು, ಅಭೂತಪೂರ್ವ ರೀತಿಯಲ್ಲಿ ಪ್ರತಿಕ್ರಿಯೆ ಸಿಕ್ಕಿದೆ. ಸದಾ ಬ್ಯುಝಿ ಇರುವ ರಾಷ್ಟ್ರೀಯ ಹೆದ್ದಾರಿ 73, 66, 169, 234 ಖಾಲಿಯಿದ್ದವು. ಬೆರಳೆಣಿಕೆ ಸಂಖ್ಯೆಯಲ್ಲಿ ಟ್ರಕ್, ಕಾರು ಕಂಡು ಬಂತು.

ಮಂಗಳೂರು ಇಡೀ ನಗರ ಇದೇ ಮೊದಲ ಬಾರಿಗೆ ಈ ರೀತಿಯಲ್ಲಿ ಬಂದ್ ಆಗುತ್ತಿದೆ. ಇದಕ್ಕೆ ಮೊದಲು ಎಷ್ಟೋ ಬಾರಿ ಬಂದ್ ಆಗಿದ್ದರೂ, ಕರ್ಫ್ಯೂ ಸಂದರ್ಭದಲ್ಲೂ ಇಷ್ಟರ ಮಟ್ಟಿಗೆ ಲಾಕ್ ಡೌನ್ ಆಗಿರಲಿಲ್ಲ. ಸ್ವಯಂಪ್ರೇರಿತರಾಗಿ ಸರ್ಕಾರದ ಕರೆಗೆ ಓಗೊಟ್ಟ ನಾಗರಿಕರೂ ಮನೆಯೊಳಗಿದ್ದು ಸಹಕಾರವಿತ್ತರು.

ಪುತ್ತೂರು, ಬೆಳ್ತಂಗಡಿ, ಬಂಟ್ವಾಳ, ಬಿ.ಸಿ.ರೋಡ್, ಉಪ್ಪಿನಂಗಡಿ ಮೂಡುಬಿದಿರೆ, ಉಳ್ಳಾಲ, ಸುಳ್ಯ, ಕಡಬ ಸಹಿತ ಪ್ರಮುಖ ಪಟ್ಟಣಗಳಲ್ಲೂ ಜನತಾ ಕರ್ಫ್ಯೂ ಪೂರ್ಣವಾಗಿ ಅನುಷ್ಠಾನಗೊಂಡಿತು. ಆದರೆ ಕೆಲವೆಡೆ ಒಳಭಾಗದಲ್ಲಿ ಕೆಲವೊಂದು ಅಂಗಡಿಗಳು ತೆರೆದಿರುವುದು, ಜನರು ಓಡಾಡುತ್ತಿರುವ ಬಗ್ಗೆ ವರದಿಗಳು ಬಂದಿವೆ.

ಮಂಗಳೂರಿನಲ್ಲಿ ಕೆಎಸ್ಸಾರ್ಟಿಸಿ ಬಸ್‌ಗಳು, ಖಾಸಗಿ ಬಸ್‌ಗಳೂ ರಸ್ತೆಗಿಳಿಯಲಿಲ್ಲ. ಸ್ಟೇಟ್‌ಬ್ಯಾಂಕ್ ಹಾಗೂ ಕೆಎಸಾರ್ಟಿಸಿ ಬಿಜೈ ಬಸ್‌ನಿಲ್ದಾಣಗಳಲ್ಲಿ ಬೇರೆ ಕಡೆಯಿಂದ ಆಗಮಿಸಿದ ಬೆರಳೆಣಿಕೆಯಷ್ಟು ಪ್ರಯಾಣಿಕರಿದ್ದರು, ಅವರನ್ನು ಪೊಲೀಸರು ಅಲ್ಲಿಂದ ತೆರಳುವಂತೆ ಸೂಚಿಸಿದರು.

ನಗರವಿಡೀ ಸ್ತಬ್ಧಗೊಂಡಿತ್ತು, ಬೆರಳೆಣಿಕೆ ಸಂಖ್ಯೆಯಲ್ಲಿ ಜನ ಸಂಚಾರ, ಕೆಲವೇ ಕೆಲವು ದ್ವಿಚಕ್ರವಾಹನ, ಕಾರು, ಆಟೊ ಸಂಚಾರ ಕಂಡು ಬಂತು, ಮಧ್ಯಾಹ್ನ ನಂತರ ಅದು ಕೂಡಾ ಕಡಿಮೆಯಾಯಿತು. ಸೋಂಕು ತಡೆಯುವ ನಿಟ್ಟಿನಲ್ಲಿ , ರೋಗ ಹಬ್ಬುವ ಕೊಂಡಿಯನ್ನು ಮುರಿಯುವುದಕ್ಕಾಗಿ ಪಕ್ಷಭೇದ ಮರೆತು ಕರ್ಫ್ಯೂಗೆ ಬೆಂಬಲ ಪ್ರಕಟವಾಯಿತು.

ರೈಲು ಬಂದ್: ಎಷ್ಟೋ ಬಂದ್, ಕರ್ಫ್ಯೂ ಕಂಡಿರುವ ಮಂಗಳೂರಿಗೆ ರೈಲ್ವೆ ಬಂದ್ ಮಾತ್ರ ಹೊಸದು. ಈ ಬಾರಿ ಕರೊನಾ ಕಾರಣದಿಂದ ದೇಶಾದ್ಯಂತ ರೈಲು ಸಂಚಾರ ಬಂದ್ ಆಗಿತ್ತು. ಅದರ ಪರಿಣಾಮವಾಗಿ ಮಂಗಳೂರು ನಿಲ್ದಾಣಕ್ಕೂ ಶನಿವಾರ ರಾತ್ರಿ 10ರ ಬಳಿಕ ಯಾವ ರೈಲೂ ಬಂದಿಲ್ಲ, ಇಲ್ಲಿಂದಲೂ ತೆರಳಿಲ್ಲ. ಯಾವಾಗಲೂ ಬಿಜಿ ಇರುವ ಮಂಗಳೂರು ಸೆಂಟ್ರಲ್, ಜಂಕ್ಷನ್ ರೈಲು ನಿಲ್ದಾಣಗಳು ಭಾನುವಾರ ಕಳಾಹೀನವಾಗಿದ್ದವು.

ಹಾಗಿದ್ದರೂ ಅಲ್ಲಿಗೆ ಬರುವ ಬೆರಳೆಣಿಕೆ ಪ್ರಯಾಣಿಕರ ಟೆಂಪರೇಚರ್ ಪರೀಕ್ಷೆ ನಡೆಸುವ ಆರೋಗ್ಯ ಇಲಾಖೆ ಸಿಬ್ಬಂದಿ ಎಂದಿನಂತೆ ಕೆಲಸ ನಿರ್ವಹಿಸಿದರು, ರೈಲ್ವೇ ಪೊಲೀಸರು ಪ್ರಯಾಣಿಕರನ್ನು ಹಿಂದಕ್ಕೆ ಕಳುಹಿಸಿದರು. ವಿವಿಧ ರೈಲುಗಳಲ್ಲಿ ಬಂದ ಒಂದಷ್ಟು ಭಿಕ್ಷುಕರು, ಕೂಲಿಯವರು ಅನಾಥವಾಗಿ ನಿಲ್ದಾಣದ ಹೊರಗೆ ಕುಳಿತಿದ್ದರು. ಕೆಲವೇ ಪೆಟ್ರೋಲ್ ಬಂಕ್ ಹಾಗೂ ಮೆಡಿಕಲ್ಸ್‌ಗಳು ತೆರೆದಿದ್ದರೂ ಜನ ತೀರಾ ಕಡಿಮೆ ಇದ್ದರು.

ಜಿಲ್ಲೆಯಲ್ಲಿ ಬಹುತೇಕ ಎಲ್ಲಾ ದೇವಸ್ಥಾನ, ಚರ್ಚ್, ಮಸೀದಿಗಳೂ ಮುಚ್ಚಿದ್ದವು. ದೇವಾಲಯಗಳಲ್ಲಿ ಬಾಗಿಲು ಮುಚ್ಚಿದ್ದು, ಪುರೋಹಿತರು ಒಳಗೆಯಿದ್ದು ಪೂಜೆ ಪ್ರಾರ್ಥನೆ ನೆರವೇರಿಸಿದರು.

ಉಚಿತ ಊಟ

ಜನತಾ ಕರ್ಫ್ಯೂನಿಂದಾಗಿ ನಗರದ ಸ್ಟೇಟ್‌ಬ್ಯಾಂಕ್, ಬಿಜೈ ಬಸ್ ನಿಲ್ದಾಣಗಳಲ್ಲಿ ಪರದಾಡುತ್ತಾ ಊಟಕ್ಕೂ ವ್ಯವಸ್ಥೆಯಿಲ್ಲದಿದ್ದ ಪ್ರಯಾಣಿಕರಿಗೆ ನಗರದ ರೋಟರಿ ಕ್ಲಬ್ ಸದಸ್ಯರು ಊಟದ ಪ್ಯಾಕೆಟ್ ವಿತರಿಸಿ ಮಾನವೀಯತೆ ಮೆರೆದರು. ಅಲ್ಲದೆ ಕರ್ತವ್ಯ ನಿರತ ಪೊಲೀಸರಿಗೂ ಊಟ ನೀಡಿ ಮಾದರಿಯಾದರು.

ಶುಚಿತ್ವ ಕೆಲಸಗಾರರಿಗೆ ಬಂದ್ ಇಲ್ಲ

ನಗರದ ಹಲವೆಡೆ ಬಿದ್ದಿರುವ ರಾಶಿ ರಾಶಿ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಾ ನೈರ್ಮಲ್ಯ ಕೆಲಸಗಾರರು ತಮ್ಮ ಕೆಲಸವನ್ನು ಭಾನುವಾರವೂ ಮುಂದುವರಿಸಿದರು. ಹಂಪನಕಟ್ಟೆ, ಸೆಂಟ್ರಲ್ ಮಾರ್ಕೆಟ್, ಮೀನು ಮಾರ್ಕೆಟ್, ಬಸ್ ನಿಲ್ದಾಣ ಮುಂತಾದೆಡೆ ನೈರ್ಮಲ್ಯ ಕೆಲಸ ನಡೆಸುವುದು ಕಂಡು ಬಂತು.

ಮೀನುಗಾರಿಕೆ ಅತಂತ್ರ

ಭಾನುವಾರದ ಕರ್ಫ್ಯೂಗೆ ಮಂಗಳೂರು ಮೀನುಗಾರಿಕಾ ಬಂದರು ಕೂಡಾ ಪೂರ್ಣ ಸ್ತಬ್ಧಗೊಂಡಿತು. ಯಾವುದೇ ವಾಣಿಜ್ಯ ಚಟುವಟಿಕೆಗಳು ನಡೆಯಲಿಲ್ಲ. ಆದರೆ ಈಗಾಗಲೇ ಮೀನುಗಾರಿಕೆಗೆಂದು ತೆರಳಿರುವ ಬೋಟ್‌ಗಳು ಒಂದೊಂದಾಗಿ ಆಗಮಿಸತೊಡಗಿವೆ. ಅದರಲ್ಲಿ ಮೀನುಗಾರರು ಹಿಡಿದು ತಂದಿರುವ ಮೀನನ್ನು ಏನು ಮಾಡಬೇಕು, ಮುಂದಿನ ಪರಿಸ್ಥಿತಿ ಹೇಗೆ ಎನ್ನುವ ಬಗ್ಗೆ ಮೀನುಗಾರ ಮುಖಂಡರು ಮಾ.23ರಂದು ಸಭೆ ನಡೆಸಲಿದ್ದಾರೆ.

ಭಾನುವಾರ ಮನೆಯಲ್ಲೇ!

ಮಾರ್ಕೆಟ್, ಪಾರ್ಕ್, ಮಾಲ್, ಸಿನಿಮಾ ಥಿಯೇಟರ್ ಹೀಗೆ ರಜಾದಿನದಂದು ಶಾಪಿಂಗ್, ಈಟೌಟ್‌ನಲ್ಲೇ ಬಿಜಿಯಿರುತ್ತಿದ್ದ ಮಂಗಳೂರಿನ ಜನತೆ ಭಾನುವಾರವನ್ನು ಈ ರೀತಿಯ ವಿಭಿನ್ನ ಹಾಗೂ ಸವಾಲಿನ ಪರಿಸ್ಥಿತಿಯಲ್ಲಿ ಕಳೆಯುವಂತಾಯಿತು. ಎಲ್ಲಾ ಮನೆ ಸದಸ್ಯರೂ ಮನೆಯಲ್ಲೇ ಇದ್ದು ಭಾನುವಾರವನ್ನು ಮನೆಕೆಲಸ ಮಾಡುತ್ತಾ, ಮನೆಯ ಅಡುಗೆಯೊಂದಿಗೆ ಟಿವಿ ಮುಂದೆ ಕಳೆಯುವಂತಾಯಿತು. ಬೆಳಗ್ಗಿನಿಂದಲೇ ಇಡೀ ನಗರದಲ್ಲಿ ಒಂದು ರೀತಿಯ ಮೌನವಿದ್ದರೆ ಒಂದು ರೀತಿಯ ಜೀವ ಬಂದಂತಾಗಿದ್ದು ಸಂಜೆ 5ರ ವೇಳೆಗೆ, ಎಲ್ಲೆಡೆಯಿಂದ ಚಪ್ಪಾಳೆ, ಜಾಗಟೆ, ಶಂಖನಾದ ಕೇಳಿಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net