ಅಲೆದಾಟ ತಪ್ಪಿಸಲು ಜನತಾದರ್ಶನ ಆಯೋಜನೆ: ಶಾಸಕ ರವಿಕುಮಾರ್ ಗಣಿಗ ಹೇಳಿಕೆ

Janatadarshan Mandya
Published on

ಮಂಡ್ಯ: ಸಾರ್ವಜನಿಕರು ತಮ್ಮ ಬಗೆಹರಿಸಿಕೊಳ್ಳಲು ಸರ್ಕಾರಿ ಹಾಗೂ ಶಾಸಕರ ಕಚೇರಿಗೆ ಅಲೆಯಬಾರದೆನ್ನುವ ಕಾರಣ ಮತ್ತು ರೈತರ ಮನೆಯ ಬಾಗಿಲಿಗೆ ಹೋಗಿ ಸಮಸ್ಯೆ ಆಲಿಸಬೇಕೆಂಬ ಸದುದ್ದೇಶದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನತಾದರ್ಶನ ಮಾಡಲಾಗುತ್ತಿದೆ ಎಂದು ಶಾಸಕ ರವಿಕುಮಾರ್ ಗಣಿಗ ಹೇಳಿದರು.

ತಾಲೂಕಿನ ಕೆರಗೊಡು ಹೋಬಳಿಯ ಹೊಡಾಘಟ್ಟ ಗ್ರಾಮದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಜನತಾದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ಸೇವೆಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕನಸು. ಅದರಂತೆ ಜನತಾದರ್ಶನದ ಮೂಲಕ ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸಲಾಗುತ್ತಿದೆ ಎಂದರು.

ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗುವುದು. ಅಥವಾ 30 ದಿನದೊಳಗೆ ಕುಂದು ಕೊರತೆಗಳನ್ನು ನಿವಾರಿಸಲಾಗುವುದು. ಬಹುದಿನಗಳಿಂದ ಬೇಡಿಕೆಯಾಗಿದ್ದ ಡಣಾನಾಯಕನಪುರ ಮತ್ತು ಈಚಗೆರೆ ರಸ್ತೆ ನಿರ್ಮಾಣಕ್ಕೆ 4.5 ಕೋಟಿ ರೂ ಅನುದಾನ ನೀಡಲಾಗಿದೆ. ಮುಂದಿನ ವಾರದಲ್ಲಿ ಭೂಮಿ ಪೂಜೆ ಸಲ್ಲಿಸಿ ಕಾಮಗಾರಿ ಪ್ರಾರಂಭ ಮಾಡಲಾಗುವುದು. ಅಂತೆಯೇ ಹೊನ್ನಾನಾಯಕಹಳ್ಳಿ ಮತ್ತು ದೊಡ್ಡಬಾಣಸವಾಡಿ, ಚಿಕ್ಕಬಾಣಸವಾಡಿ ರಸ್ತೆ ಅಭಿವೃದ್ಧಿಗೆ 2 ಕೋಟಿ ರೂ ಬಿಡುಗಡೆ ಮಾಡಲಾಗಿದ್ದು, ಶೀಘ್ರದಲ್ಲೇ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.

ಸ್ಥಳೀಯರ ಆಸೆಯಂತೆ ದೊಡ್ಡಬಾಣಸವಾಡಿ ಬ್ರಿಡ್ಜ್ ಮತ್ತು ಗೆದ್ದೆ ಬಯಲಿನ ರಸ್ತೆ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು 5 ಕೋಟಿ ರೂ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಕಾಮಗಾರಿಯೂ ಶೀಘ್ರವಾಗಿ ಚಾಲನೆಗೊಳ್ಳಲಿದೆ ಎಂದು ಹೇಳಿದರು.

ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಮಾತನಾಡಿ, ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನತಾ ದರ್ಶನ ಕಾರ್ಯಕ್ರಮ ಆಯೋಜಿಸಲಾಗುವುದು. ಈಗಾಗಲೇ ಹಲವು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. 15 ದಿನಕ್ಕೊಮ್ಮೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗುವುದು. ಸಾರ್ವಜನಿಕರು ಈ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ತಾಲೂಕು ಪಂಚಾಯಿತಿ ಇಒ ವೀಣಾ, ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್, ಹೊಡಾಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಚ್.ಬಿ.ಆನಂದ್, ಸದಸ್ಯರಾದ ಗೌರಮ್ಮ, ಗಣೇಶ್, ನಾರಾಯಣಪ್ಪ ಇತರರಿದ್ದರು.

ಶಾಸಕ ರವಿಕುಮಾರ್ ಗಣಿಗ ಹೊಡಾಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ಅಂತೆಯೇ ಫಲಾನುಭವಿಗಳಗೆ ಇ-ಸ್ವತ್ತು ಪತ್ರ ವಿತರಣೆ ಮಾಡಿದರು. ಜನತಾ ದರ್ಶನ ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಆರೋಗ್ಯ ಉಚಿತ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಮಾಡಲಾಯಿತು. ಫಲಾನುಭವಿಗಳಿಗೆ ಪರೀಕ್ಷಿತಾ ಕನ್ನಡಕ ವಿತರಿಸಲಾಯಿತು.

ಕೃಷಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೇಷ್ಮೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಅನುಕೂಲವಾಗುವ ಮಾಹಿತಿ ನೀಡಲು ಮಳಿಗೆ ತೆರೆಯಲಾಗಿತ್ತು. ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆ ತಲುಪದವರು ಮಾಹಿತಿ ಪಡೆದು ಸರಿಪಡಿಸಿಕೊಳ್ಳಲು ಸಹಾಯ ಕೇಂದ್ರ ತೆರೆಯಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net