20 ದಿನದಲ್ಲಿ 1,500 ಸಮಸ್ಯೆಗೆ ಪರಿಹಾರ: ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾಹಿತಿ

Janatadarshan in Dudda village Mandya
Published on

ಮಂಡ್ಯ: ದುದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 20 ದಿನ ನಡೆದ ‘ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮದಲ್ಲಿ 1500ಕ್ಕೂ ಹೆಚ್ಚು ಸಮಸ್ಯೆಗೆ ಪರಿಹಾರ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ ಎಂದು ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ತಾಲೂಕಿನ ದುದ್ದ ಗ್ರಾಮದಲ್ಲಿ ಆಯೋಜಿಸಿದ್ದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತಾಲೂಕು ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಶ್ರಮ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳು, ವಿವಿಧ ಕಾರ್ಯಕರ್ತರು, ರೈತ ಸಂಘ ಹಾಗೂ ಸ್ಥಳೀಯ ಮುಖಂಡರ ನೆರವಿನಿಂದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದರು.

ದುದ್ದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರ್ವೇಯಿಂದ ಮಹತ್ವದ ಸಂಗತಿಗಳು ಗಮನಕ್ಕೆ ಬಂದಿವೆ. ಶೇ.40ಕ್ಕೂ ಹೆಚ್ಚು ಜನರಿಗೆ ಡಯಾಬಿಟಿಸ್ ಇದೆ. ಇದರ ಆಧಾರದ ಮೇಲೆ ಜೀವನ ಶೈಲಿ ಏನು ಬದಲಾವಣೆಯಾಗಬೇಕು. ಆರೋಗ್ಯ ಸುಧಾರಣೆ ಹೇಗೆ ಆಗಬೇಕು ಎಂಬ ಬಗ್ಗೆ ಗಮನಹರಿಸಲು ಸೂಕ್ತ ಕ್ರಮಕೈಗೊಳ್ಳಲು ಸಾಧ್ಯವಾಗುತ್ತದೆ. ಮಾತ್ರವಲ್ಲದೆ ಈ ಸರ್ವೇಯಿಂದ ಪಂಚಾಯಿತಿಯ ಎಲ್ಲ ಗ್ರಾಮಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲು ಸಾಧ್ಯವಾಯಿತು ಎಂದು ಹೇಳಿದರು.

ದಿನನಿತ್ಯ ಕಚೇರಿಗೆ ಕ್ಷೇತ್ರದ ಜನ ಸಮಸ್ಯೆಗಳೊಂದಿಗೆ ಕಚೇರಿಗೆ ಆಗಮಿಸುತ್ತಿದ್ದರು. ಜಮೀನಿಗೆ ಹೋಗಲು ಜಾಗ ಇಲ್ಲ. ಆರ್‌ಟಿಸಿ ಸಿಗುತ್ತಿಲ್ಲ. ಪಿಂಚಣಿ ಮಾಡಿಸಿಕೊಡಿ ಹೀಗೆ ಅಹವಾಲು ಬರುತ್ತಿದ್ದವು. ಐದು ವರ್ಷದ ಅವಧಿಯಲ್ಲಿ ಹೀಗೆ ಸಮಸ್ಯೆಯೊಂದಿಗೆ ಬರುವವರಲ್ಲಿ ಎಷ್ಟು ಜನರಿಗೆ ಸೇವೆ ಸೌಲಭ್ಯಗಳನ್ನು ತಲುಪಿಸಬಹುದು ಎಂಬ ಪ್ರಶ್ನೆ ಕಾಡುತ್ತಿತ್ತು. ಈ ರೀತಿಯಾಗಿ ಗರಿಷ್ಟ 5000 ಜನರಿಗೆ ಸರ್ಕಾರಿ ಸೌಲಭ್ಯ ತಲುಪಿಸಬಹುದಿತ್ತು. ಆದರೆ ಕ್ಷೇತ್ರದಲ್ಲಿರುವ ಮೂರು ಲಕ್ಷ ಜನರಿಗೆ ಸರ್ಕಾರದ ಸೇವೆ ತಲುಪಿಸಬಹುದು ಹೇಗೆ? ಎಂಬ ಪ್ರಶ್ನೆಗೆ ಕಂಡುಕೊಂಡ ಉತ್ತರ, ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ಕಾರ್ಯಕ್ರಮ ಎಂದು ದರ್ಶನ ಪುಟ್ಟಣ್ಣಯ್ಯ ವಿವರಿಸಿದರು.

ಹಲವು ಕಡೆ ಆಸ್ತಿ ತೆರವು ಮಾಡಿಸಿದ್ದು ಜನರಿಗೆ ಬೇಸರ ಉಂಟುಮಾಡಿರಬಹುದು. ಆದರೆ ಗ್ರಾಮಕ್ಕೆ ಅನಾನೂಕೂಲವಾಗುತ್ತಿದ್ದರಿಂದ ತೆರವು ಮಾಡಿಸಿ ಸಾರ್ವಜನಿರಿಗೆ ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿದೆ. ರಸ್ತೆ, ಸ್ಮಶಾನ ಸೇರಿದಂತೆ ವಿವಿಧ ಸೌಲಭ್ಯಗಳು ಈ ತೆರವು ಕಾರ್ಯಗಳಿಂದ ಸಾಧ್ಯವಾಗಿದೆ. ದುದ್ದ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಾಣ ಪ್ರಗತಿಯಲ್ಲಿದೆ. ಸಾರ್ವಜನಿಕ ಸಂತೆಗೆ ಜಾಗ ಗುರುತಿಸಲಾಗಿದ್ದು, ಶೀಘ್ರದಲ್ಲೇ ಸಂತೆಗೆ ಅಗತ್ಯವಾದ ವ್ಯವಸ್ಥೆಗಳನ್ನು ಮಾಡಿಕೊಡಲಾಗುತ್ತದೆ ಎಂದು ಹೇಳಿದರು.

ಮಂಡ್ಯ ತಹಸೀಲ್ದಾರ್ ವಿಶ್ವನಾಥ್ ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪರಿಕಲ್ಪನೆಯಾದ ’ಸರ್ಕಾರಿ ಸೇವೆ ಮನೆ ಬಾಗಿಲಿಗೆ’ ರಾಜ್ಯದಲ್ಲೇ ಒಂದು ವಿಶೇಷವಾದ ಕಾರ್ಯಕ್ರಮ. ಇದು ಸರ್ಕಾರದ ಸೇವೆ-ಸೌಲಭ್ಯಗಳನ್ನು ಜನರಿಗೆ ತಲುಪಿಸಲು ನೆರವಾಗುತ್ತಿದೆ. ಸರ್ಕಾರಿ ಸೇವೆಯಲ್ಲಿ ವಿವಿಧ ಕಾರಣಗಳಿಗೆ ಅಂಕುಡೊಂಕುಗಳಿವೆ. ಆದರೆ ಈ ವಿನೂತನ ಕಾರ್ಯಕ್ರಮ ನಮ್ಮ ಕೆಲಸಗಳನ್ನು ಸರಳಗೊಳಿಸಿ ಸೇವೆ-ಸೌಕರ್ಯಗಳನ್ನು ಜನರಿಗೆ ತಲುಪಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.

20 ದಿನದಲ್ಲಿ ಕಂದಾಯ ಇಲಾಖೆಗೆ ಕಾರ್ಯಕ್ರಮದ ಮೂಲಕ 666 ಅರ್ಜಿ ಬಂದಿದ್ದವು. ಈ ಪೈಕಿ 621 ಅರ್ಜಿಯನ್ನು ಪುರಸ್ಕರಿಸಲಾಗಿದ್ದು, ಉಳಿದವನ್ನು ತಿರಸ್ಕೃತವಾಗಿವೆ. ಕಂದಾಯ ಇಲಾಖೆಗಳ ಸೇವೆಗಳನ್ನು ಅರ್ಜಿ ಸಲ್ಲಿಸಿ ಪಡೆಯುವ ಪದ್ಧತಿಯ ಬದಲು ನೇರ ಜನರ ಬಳಿಗೆ ಹೋಗಿ ಅವರಿಗೆ ಸೇವೆ ತಲುಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ಈ ಕಾರ್ಯಕ್ರಮ ಉಳಿದ ಪಂಚಾಯಿತಿಗಳಲ್ಲೂ ನಡೆಯಬೇಕು. ಉಳಿದ ತಾಲೂಕುಗಳಿಗೂ ವಿಸ್ತರಣೆಯಾಗಲಿ ಎಂದು ಆಶಿಸಿದರು.

ಮಂಡ್ಯ ತಾಲೂಕು ಪಂಚಾಯಿತಿ ಇಒ ಲೋಕೇಶ್‌ಮೂರ್ತಿ ಮಾತನಾಡಿ, ಸಾಮಾನ್ಯವಾಗಿ ಇ ಸ್ವತ್ತು ವಿತರಣೆಗೆ 40 ದಿನಗಳು ಬೇಕಾಗುತ್ತದೆ. ಆದರೆ 20 ದಿನಗಳ ಈ ಕಾರ್ಯಕ್ರಮದ ಭಾಗವಾಗಿ ದುದ್ದ ಗ್ರಾಮ ಪಂಚಾಯಿತಿಯಲ್ಲಿ 103 ಆಸ್ತಿದಾರರು ಇ-ಸ್ವತ್ತಿಗೆ ಅರ್ಜಿ ಸಲ್ಲಿಸಿದ್ದರು. ಈ ಪೈಕಿ 76 ಇ-ಸ್ವತ್ತು ವಿತರಣೆ ಮಾಡಲಾಗಿದೆ. ಇಷ್ಟು ಕಡಿಮೆ ಅವಧಿಯಲ್ಲಿ ಇ-ಸ್ವತ್ತು ವಿತರಣೆಯಾಗಿದ್ದು ನಿಜಕ್ಕೂ ಅಪರೂಪ. ಬಂದ ಅರ್ಜಿಗಳ ಪೈಕಿ ಶೇ.70ರಷ್ಟು ಅರ್ಜಿಯನ್ನು ಸ್ಥಳದಲ್ಲೆ ಇತ್ಯರ್ಥ ಮಾಡಲಾಗಿದೆ. ಉಳಿದ ಶೇ.30ರಷ್ಟು ಅರ್ಜಿಗೆ ಅಗತ್ಯ ಪ್ರಕ್ರಿಯೆ ಮೂಲಕ ಬಗೆಹರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಪುಟ್ಟಣ್ಣಯ್ಯ ಫೌಂಡೇಷನ್‌ನ ರಣಜಿತ್ ನಾಗರಾಜೇಗೌಡ, ಉಪ ತಹಸೀಲ್ದಾರ್ ಯೋಗಾನಂದ, ಸಿಡಿಪಿಒ ಕುಮಾರಸ್ವಾಮಿ, ಚೆಸ್ಕಾಂ ಎಡಬ್ಲುೃ ಆನಂದ, ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸುನೀತಾ, ಕಂದಾಯ ಪರಿವೀಕ್ಷಕ ನಾಗರಾಜ್, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿಜಯೇಂದ್ರ, ಟಿಎಚ್‌ಒ ಜವರೇಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಶಿವರಾಂ, ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲೆ ವೀಣಾ, ಪೊಲೀಸ್ ವೃತ್ತ ನಿರೀಕ್ಷಕ ಮಹೇಶ್ ಇತರರಿದ್ದರು. ಇದೇ ವೇಳೆ ವಿವಿಧ ಫಲಾನುಭವಿಗಳಿಗೆ ಕನ್ನಡಕ, ತ್ರಿಚಕ್ರ ವಾಹನ, ತ್ರಿಚಕ್ರ ಸೈಕಲ್, ಮೇವು ಕತ್ತರಿಸುವ ಯಂತ್ರ, ಬಿತ್ತನೆ ಬೀಜ, ಸಸಿಗಳ ವಿತರಣೆ ಮಾಡಲಾಯಿತು. ಅಂತೆಯೇ ಪುಟ್ಟಣ್ಣಯ್ಯ ಫೌಂಡೇಷನ್ ಮತ್ತು ಸೆಲ್ಕೊ ಫೌಂಡೇಷನ್‌ನಿಂದ ಸೌರಚಾಲಿತ ಹಾಲು ಕರೆಯುವ ಯಂತ್ರ, ಕೋಳಿ ಸಾಕಾಣಿಕೆ ಗೂಡು ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net