

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ಮೊದಲ ಬಾರಿಗೆ ಬಹುನಿರೀಕ್ಷೆಯೊಂದಿಗೆ ದೊಡ್ಡಬಳ್ಳಾಪುರದಲ್ಲಿ ಜನತಾದರ್ಶನ ಅವ್ಯವಸ್ಥೆಯ ದರ್ಶನ ಮಾಡಿಸಿತು.
ವೇದಿಕೆಯಲ್ಲಿ ರಾಜಕಾರಣಿಗಳ ಬೆಂಬಲಿಗರಿಗೇ ಕಿಕ್ಕಿರಿದು ತುಂಬಿದ್ದರೆ, ಸಾರ್ವಜನಿಕರು ಗಂಟೆಗಟ್ಟಲೆ ಕಾದು ಬಸವಳಿದರು. ಬೆಳಗ್ಗೆ 9 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಬರೋಬ್ಬರಿ 3 ಗಂಟೆ ತಡವಾಗಿ ಆರಂಭವಾಯಿತು. ಅನೇಕರು ಉಸ್ತುವಾರಿ ಸಚಿವರ ಆಗಮನ ಕಾದು ಸಾಕಾಗಿ ಹೊರನಡೆದರು.
ತಾಲೂಕಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್ ಮುನಿಯಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಜನತಾದರ್ಶನ ಈ ಹಿಂದಿನ ಡಿಸಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದ ತದ್ರೂಪಿನಂತೆ ಕಂಡುಬಂತು. ನಿಗದಿತ ಸಮಯಕ್ಕೆ ಕಾರ್ಯಕ್ರಮ ಆರಂಭವಾಗದ ಹಿನ್ನೆಲೆಯಲ್ಲಿ ಸಮಸ್ಯೆಗಳನ್ನು ಹೊತ್ತು ಬಂದಿದ್ದ ಅನೇಕರು ಬೇಸರದಿಂದಲೇ ಕಾರ್ಯಕ್ರಮದಿಂದ ನಿರ್ಗಮಿಸಿದ ದೃಶ್ಯ ಕಂಡುಂಬಂತು. ಅಹವಾಲುಗಳ ಜತೆ ಬಂದಿದ್ದ ಸಾರ್ವಜನಿಕರು ಸಮಯಪಾಲನೆ ಮಾಡದ ಜನಪ್ರತಿನಿಧಿಗಳು, ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕಿ ವಾಪಸ್ ತೆರಳಿದರು. ಸಮಸ್ಯೆ ಹೇಳಿಕೊಳ್ಳಲು ಆಗಮಿಸಿದ್ದ ಸಾರ್ವಜನಿಕರಿಗೆ ಕುರ್ಚಿಗಳು ಇಲ್ಲದೆ ಗಂಟೆಗಟ್ಟಲೆ ನಿಂತು ಬಸವಳಿದರು. ಬಳಿಕ ಪೊಲೀಸರು ಕುರ್ಚಿಗಳ ವ್ಯವಸ್ಥೆ ಮಾಡಿದರೂ ಅಷ್ಟೋತ್ತಿಗಾಗಲೆ ನೂರಾರು ಮಂದಿ ಕಾಲ್ಕಿತ್ತಿದ್ದರು.
ಜನರನ್ನು ಕೂರಿಸಲು ಡಿಸಿ ಕಸರತ್ತು: ಸಚಿವರು ತಡವಾಗಿ ಆಗಮಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ತೆರಳುವುದನ್ನು ಗಮನಿಸಿದ ಜಿಲ್ಲಾಧಿಕಾರಿ ಪ್ರಾಸ್ತಾವಿಕವಾಗಿ ಮಾತನಾಡಿ, ಅರ್ಜಿಗಳ ಸ್ವೀಕಾರಕ್ಕೆ ಚಾಲನೆ ನೀಡಿದರು. ಮೈಕ್ ಹಿಡಿದು ಸಾರ್ವಜನಿಕರನ್ನು ಕೂರಿಸುವ ಕಸರತ್ತು ನಡೆಸಿದರು. ಸರ್ಕಾರಿ ಕಚೇರಿಗಳಲ್ಲಿ ನ್ಯಾಯ ಸಿಗದೆ ನೊಂದವರಿಗಾಗಿ ಜನತಾದರ್ಶನ ಏರ್ಪಡಿಸಲಾಗಿತ್ತು, ಆದರೆ ಇಲ್ಲಿಯೂ ಸಚಿವರಿದ್ದ ಸಮಯದಲ್ಲಿ ಶಾಸಕ, ಸಚಿವರ ಬೆಂಬಲಿಗರೇ ವೇದಿಕೆ ಏರಿ ಮಾತನಾಡಿದರು. ಸಾರ್ವಜನಿಕರಿಗೊಂದು ನ್ಯಾಯ, ರಾಜಕಾರಣಿಗಳಿಗೊಂದು ನ್ಯಾಯ ಎಂದು ಜನತೆ ಬೇಸರ ವ್ಯಕ್ತಪಡಿಸಿದರು.
ಒಂದೇ ತಿಂಗಳಲ್ಲಿ ಅರ್ಜಿಗಳು ವಿಲೇವಾರಿ
ಜನರ ಕುಂದುಕೊರತೆ ಆಲಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಂಡಿದೆ. ಅರ್ಜಿ ಸಲ್ಲಿಕೆಯಾದ ತಿಂಗಳಲ್ಲಿ ವಿಲೇವಾರಿ ಮಾಡಲು ಕ್ರಮವಹಿಸಲಾಗಿದೆ. ಕೋರ್ಟ್‌ಗಳ ಅರ್ಜಿ ಹೊರತುಪಡಿಸಿ ಇನ್ನಿತರ ಅರ್ಜಿಗಳ ವಿಲೇವಾರಿ ಮಾಡಲಾಗುವುದು. ಈ ಬಗ್ಗೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಸಚಿವ ಕೆ.ಎಚ್ ಮುನಿಯಪ್ಪ ತಿಳಿಸಿದರು.
ಇತ್ಯರ್ಥವಾಗದಿರುವ ಜಿಲ್ಲಾಕೇಂದ್ರ ಘೋಷಣೆ ತೀರ್ಮಾನವನ್ನು ಸಿಎಂ, ಡಿಸಿಎಂ ಬಳಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ಅರ್ಕಾವದಿ ನದಿ ಪಾತ್ರಗಳ ಕೆರೆಗಳು ಕಲುಷಿತಗೊಂಡಿರುವ ಬಗ್ಗೆ ಮುಂದಿನ 3 ತಿಂಗಳಲ್ಲಿ ಕ್ರಮಕೈಗೊಳ್ಳಲಾಗುವುದು, ಅದೇ ಸಮಯದಲ್ಲಿ ಶುದ್ಧ ನೀರು ಪೂರೈಕೆಗೆ ಕ್ರಮ ಜರುಗಿಸಲಾಗುವುದು ಎಂದರು. ತಾಲೂಕಿಗೆ ಮಂಜೂರಾಗಿರುವ ಜಿಲ್ಲಾಸ್ಪತ್ರೆಗೆ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಆರೋಗ್ಯ ಸಚಿವರ ಬಳಿ ಮಾತನಾಡಿ ಹಣ ಬಿಡುಗಡೆಗೆ ಶ್ರಮಿಸಲಾಗುವುದು ಎಂದರು.
ನೂರಾರು ಮನವಿಗಳ ಸಲ್ಲಿಕೆ ಕಸಬಾ ಹೋಬಳಿಯ ಲಿಂಗನಹಳ್ಳಿ, ಕೊನಘಟ್ಟ ಗ್ರಾಮಗಳ ವ್ಯಾಪ್ತಿಯಲ್ಲಿ ಕೈಗಾರಿಕೆ ವಶಕ್ಕೆ ಪಡೆಯುತ್ತಿರುವ ಜಮೀನಿನ ಹಣ ಬಿಡುಗಡೆಗೆ ಅಧಿಕಾರಿಗಳೆ ಹಿಂಬಾಲಕರನ್ನು ಇಟ್ಟುಕೊಂಡಿದ್ದಾರೆ. ದಲ್ಲಾಳಿಗಳಿಗೆ ಕಡಿವಾಣ ಹಾಕಬೇಕು ಎಂದು ಕೊನಘಟ್ಟ ಲಕ್ಷ್ಮೀಪತಿ ಮನವಿ ಮಾಡಿದರು.
ಎಸ್.ಎಂ. ಕೃಷ್ಣ ಸರ್ಕಾರದಲ್ಲಿ ಮಂಜೂರಾಗಿದ್ದ ಮನೆಗಳ ನಿರ್ಮಾಣ ಕಾಮಗಾರಿ ಇದುವರೆಗೆ ಕಾರ್ಯರಂಭ ಮಾಡಿಲ್ಲ ಎಂದು ರಾಜಘಟ್ಟ ಕೋಡಿ ನರಸಿಂಹಮೂರ್ತಿ ಹೇಳಿದರು. ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ, ಅರ್ಧಕ್ಕೆ ನಿಂತಿರುವ ಕೆಲಸಗಳಿಗೆ ಚಾಲನೆ ನೀಡಿ, ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ವಸತಿ ಯೋಜನೆಗಳನ್ನು ಸಮಪರ್ಕವಾಗಿ ಜಾರಿಗೆ ತರಬೇಕು ಎಂದು ಮನವಿ ಸಲ್ಲಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯನ್ನು ತಾಲೂಕಿನಲ್ಲಿಯೇ ತೆರೆಯಲು ಯುವ ಸಂಚಲನದ ಚಿದಾನಂದ್ ಹಾಗೂ ಗಿರೀಶ್ ಮನವಿ ಮಾಡಿದರು.