

ಮೈಸೂರು: ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆದುಕೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಶುಕ್ರವಾರ ಜನತಾ ಗಣರಾಜ್ಯೋತ್ಸವ ಹಾಗೂ ಟ್ರಾೃಕ್ಟರ್ ಪರೇಡ್ ನಡೆಸಲಾಯಿತು.
ನಗರದ ಮಹಾರಾಜ ಕಾಲೇಜು ಮೈದಾನದಿಂದ ರಾಮಸ್ವಾಮಿ ವೃತ್ತ, ಚಾಮರಾಜ ಜೋಡಿ ರಸ್ತೆ, ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವೃತ್ತ, ಶ್ರೀಚಾಮರಾಜ ಒಡೆಯರ್ ವೃತ್ತ, ಆಲ್ಬರ್ಟ್ ವಿಕ್ಟರ್ ರಸ್ತೆ ಮೂಲಕ ಪುರಭವನ ಆವರಣ ತಲುಪಿತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರವಾದ, ಜನ ವಿರೋಧಿ ನೀತಿ ಜಾರಿಗೆ ತರುತ್ತಿದ್ದು, ಇವು ರೈತ ಹಾಗೂ ಕಾರ್ಮಿಕ ವಿರೋಧಿಯಾಗಿದೆ. ಧರ್ಮ ನಿರಪೇಕ್ಷ ಪ್ರಜಾಪ್ರಭುತ್ವ ಗಣತಂತ್ರದ ಸಂವಿಧಾನ ರಕ್ಷಣೆ ಮಾಡಬೇಕಿದೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತ, ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ, ಐತಿಹಾಸಿಕ ದೆಹಲಿ ರೈತ ಹೋರಾಟದ ಲಿಖಿತ ಭರವಸೆಗಳನ್ನು ಈಡೇರಿಕೆಗೆ ಆಗ್ರಹಿಸಿ, ರಾಜ್ಯದ ಭೀಕರ ಬರಗಾಲವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಸಾಲ ಮನ್ನಾ, ವೈಜ್ಞಾನಿಕ ಬೆಳೆ ಪರಿಹಾರ, ಆಹಾರ- ಉದ್ಯೋಗ- ಭೂಮಿ ಹಕ್ಕು ಖಾತರಿಗೆ ಹಾಗೂ ಜನ ವಿರೋಧಿ ನೀತಿಗಳನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿದರು.
10 ವರ್ಷಗಳಲ್ಲಿ ಸುಮಾರು 15 ಲಕ್ಷ ಕೋಟಿ ರೂ. ಕಾರ್ಪೊರೇಟ್ ಸಾಲಗಳನ್ನು ಮನ್ನಾ ಮಾಡಿರುವ ಕೇಂದ್ರ ಬಿಜೆಪಿ ಸರ್ಕಾರವು ರೈತರ ಸಾಲ ಮನ್ನಾಕ್ಕೆ ಮಾತ್ರ ಹಣ ಇಲ್ಲ ಎಂದು ಹೇಳುತ್ತಿದೆ. ಕಾರ್ಪೊರೇಟ್ ಪರವಾದ ತನ್ನ ನೀತಿಗಳನ್ನು ಮರೆ ಮಾಚಲು ರಾಮ ಮಂದಿರವನ್ನು ರಾಜಕೀಯ ಸಾಧನವಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ದೂರಿದರು.
ನಮ್ಮ ಸಮಾಜದ ಶಾಂತಿ, ಸೌಹಾರ್ದತೆ, ಸಾಮಾಜಿಕ ಸಾಮರಸ್ಯವನ್ನು ಹಾಳು ಮಾಡುವ ವಿಭಜನಕಾರಿ ಕೋಮುವಾದವನ್ನು ಹರಡುತ್ತಿದೆ. ದಲಿತರು, ಮಹಿಳೆಯರು, ಅಲ್ಪಸಂಖ್ಯಾತರನ್ನು ದಾಳಿ, ದಬ್ಬಾಳಿಕೆಗಳಿಗೆ ಗುರಿಪಡಿಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಬರಹಗಾರರು, ಬುದ್ಧಿಜೀವಿಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳ ಕಾರ್ಯಕರ್ತರನ್ನು ಸರ್ಕಾರವನ್ನು ಟೀಕಿಸಿದ ಕಾರಣಕ್ಕಾಗಿಯೇ ಇಡಿ, ಸಿಬಿಐ, ಎನ್‌ಐಎ ಅಂತಹ ವಿವಿಧ ತನಿಖಾ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ಯುಎಪಿಎ, ದೇಶದ್ರೋಹ ಮುಂತಾದ ಕರಾಳ ಕಾಯ್ದೆಗಳ ಮೂಲಕ ಹಿಂಸಿಸಲಾಗುತ್ತಿದೆ ಎಂದು ಅವರು ದೂರಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಪ್ರಸನ್ನ ಎನ್. ಗೌಡ, ಪಿ.ಮರಂಕಯ್ಯ, ಪ್ರಭಾಕರ್, ನೇತ್ರಾವತಿ, ಕೃಷ್ಣಪ್ಪ, ಮಾದೇವನಾಯಕ, ಮಂಡಕಳ್ಳಿ ಮಹೇಶ್, ಚಿಕ್ಕಣ್ಣ, ಕರೋಟಿ ಕುಮಾರಸ್ವಾಮಿ, ಸಿರಮಳ್ಳಿ ಸಿದ್ದಪ್ಪ, ಜಗದೀಶ್ ಸೂರ್ಯ ಇತರರು ಇದ್ದರು.