ಕೆರಗೋಡು ಹೋಬಳಿ ಸಮಗ್ರ ಅಭಿವೃದ್ಧಿ: ಶಾಸಕ ರವಿಕುಮಾರ್ ಗಣಿಗ ವಿಶ್ವಾಸ

Janata Darshan Keelara village mandya
Published on

ಮಂಡ್ಯ: ಕೆರಗೋಡು ಹೋಬಳಿಯನ್ನು ಮುಂದಿನ 4 ವರ್ಷದಲ್ಲಿ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಶಾಸಕ ರವಿಕುಮಾರ್ ಗಣಿಗ ವಿಶ್ವಾಸ ವ್ಯಕ್ತಪಡಿಸಿದರು.
ತಾಲೂಕಿನ ಕೀಲಾರ ಗ್ರಾಮದಲ್ಲಿ ಕೆರಗೋಡು ಹೋಬಳಿಯ ಜನರ ಸಮಸ್ಯೆ ಆಲಿಸಲು ಆಯೋಜಿಸಿದ್ದ ಜನತಾದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು. ಹೊಸ ಮೈಷುಗರ್ ಕಾರ್ಖಾನೆಯನ್ನು 500 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಲೋಕಸಭಾ ಚುನಾವಣೆ ಮುಗಿದ ನಂತರ ಚಾಲನೆ ನೀಡಲಾಗುವುದು ಎಂದರು.
ಜನರ ಮನೆ ಬಾಗಿಲಿಗೆ ಬಂದು ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ ಕೀಲಾರ ಗ್ರಾಮದಲ್ಲಿ ಮೊದಲ ಬಾರಿಗೆ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡಂತೆ ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲ ಜನರು ಪಡೆದುಕೊಳ್ಳಬೇಕು. ಸರ್ಕಾರದ ಹಲವಾರು ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದ ಅವರು, ಗ್ರಾಮದ ಶಂಕರಗೌಡ ಬೀದಿಯ ಅಭಿವೃದ್ಧಿಗಾಗಿ ಅನುದಾನ ನೀಡಲಾಗಿದೆ. ಇದಲ್ಲದೆ ಕಾವೇರಿ ನಿಗಮದಿಂದ 8 ಕೋಟಿ ರೂ ವೆಚ್ಚದಲ್ಲಿ ಸುತ್ತಮುತ್ತಲಿನ ಕೆರೆಕಟ್ಟೆ ಹಾಗೂ ಪಿಕಪ್ ನಾಲೆಗಳ ಅಭಿವೃದ್ಧಿಗೊಳಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಜನತಾದರ್ಶನದಲ್ಲಿ ಸಾರ್ವಜನಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಕಾನೂನಿನ ವ್ಯಾಪ್ತಿಯೊಳಗೆ ಪರಿಹರಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗವನ್ನು ಜನಸಾಮಾನ್ಯರು ಪಡೆದುಕೊಳ್ಳಬೇಕು. ಜನರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು, ಜಿಲ್ಲಾ ಕೇಂದ್ರದಲ್ಲಿ ಅಧಿಕಾರಿಗಳನ್ನು ಭೇಟಿ ಮಾಡಲು ಅಲೆಯುವುದನ್ನು ಹೋಗಲಾಡಿಸುವ ಸಲುವಾಗಿ ಜನತಾದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಆಡಳಿತ ವ್ಯವಸ್ಥೆಯ ಸುತ್ತ ಜನರು ಸುತ್ತಬಾರದು, ಜನರ ಸುತ್ತ ಆಡಳಿತ ವ್ಯವಸ್ಥೆ ಇರಬೇಕು ಎಂಬುದು ಉದ್ದೇಶವಾಗಿದೆ ಎಂದರು.
ಈ ಹಿಂದೆ ತಾಲೂಕು ಮಟ್ಟದಲ್ಲಿ 2 ಜನತಾದರ್ಶನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಒಟ್ಟು 3 ಜನತಾದರ್ಶನ ಕಾರ್ಯಕ್ರಮವನ್ನು ಶಾಸಕರು ಯಶಸ್ವಿಗೊಳಿಸಿದ್ದಾರೆ. ಜನರ ಸಮಸ್ಯೆಗಳನ್ನು ಆಲಿಸುವುದರ ಜತೆಗೆ ಸರ್ಕಾರದ ವಿವಿಧ ಯೋಜನೆಗಳ ಸವಲತ್ತನ್ನು ಕೂಡ ಈ ವೇದಿಕೆ ಮೂಲಕ ನೀಡಲಾಗುತ್ತಿದೆ. ಸಾರ್ವಜನಿಕರು ತಮ್ಮ ಸಮಸ್ಯೆಗಳ ದೂರು, ಅಹವಾಲುಗಳಿಗೆ ಲಿಖಿತ ಅರ್ಜಿ ನೀಡಬೇಕು. ಪರಿಶೀಲಿಸಿದ ನಂತರ ಸಂಬಂಧಪಟ್ಟ ಅಧಿಕಾರಿಗಳಿಗೆ ಕಳುಹಿಸಿ, ಕಂಪ್ಯೂಟರ್‌ನಲ್ಲಿ ದಾಖಲೀಕರಣ ಮಾಡಿ ಬಗೆಹರಿಸಲಾಗುವುದು. ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸಿ ಪರಿಹರಿಸಲಾಗುವುದು ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಜನರ ಬಗ್ಗೆ ಕಾಳಜಿ ವಹಿಸಿ, ಅವರ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಹಾಗೂ ಜನರ ಸಮಸ್ಯೆಗೆ ಧ್ವನಿಯಾಗಿ ನಿಲ್ಲುವ ಕಾರ್ಯವನ್ನು ಬಹಳ ಕ್ರಿಯಾಶೀಲತೆಯಿಂದ ಮಾಡುತ್ತಿರವ ಶಾಸಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಿದಾಗ ಮಾತ್ರ ಯೋಜನೆಯ ಸಾರ್ಥಕತೆ, ಸಫಲತೆ ದೊರೆಯುತ್ತದೆ. ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಈಗಾಗಲೇ ಜನಸಾಮಾನ್ಯರಿಗೆ ತಿಳಿದಿದ್ದು, ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ರೈತರು ಮೃತಪಟ್ಟ ನಂತರ ವಾರಸುದಾರರು ಖಾತೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ತಾಲೂಕು ಕಚೇರಿಗೆ ಅಲೆಯಬಾರದು ಎಂಬ ನಿಟ್ಟಿನಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಪೌತಿ ಖಾತೆ ಆಂದೋಲನವನ್ನು ಜಿಲ್ಲಾದ್ಯಂತ ಮಾಡಲಾಗುತ್ತಿದೆ. ಪೌತಿ ಖಾತಾ ಆಂದೋಲನವನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿರುವ ಎಲ್ಲ ತಾಲೂಕನ್ನು ಬರಪೀಡಿತವೆಂದು ಎಂದು ಪರಿಗಣಿಸಲಾಗಿದೆ. ರಾಜ್ಯ ಸರ್ಕಾರವು ಜಿಲ್ಲೆಯ 77,000 ರೈತರಿಗೆ 14 ಕೋಟಿ ರೂಗಳನ್ನು ಬೆಳೆ ಪರಿಹಾರವಾಗಿ ಮೊದಲ ಹಂತದಲ್ಲಿ ತಲಾ 2000 ರೂನಂತೆ ನೇರವಾಗಿ ಅವರ ಖಾತೆಗೆ ವರ್ಗಾವಣೆ ಮಾಡಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿಗಳಲ್ಲಿ ಈ ಸ್ವತ್ತು ನೀಡುವ ಅಭಿಯಾನವನ್ನು ಸಿಇಒ ಅವರು ವಿಶೇಷ ಆಸಕ್ತಿ ವಹಿಸಿ ಜಿಲ್ಲಾದ್ಯಂತ ಹಮ್ಮಿಕೊಂಡಿದ್ದಾರೆ. ಜನರು ಸಂಪೂರ್ಣವಾಗಿ ಯೋಜನೆಯ ಸಫಲತೆಯನ್ನು ಪಡೆದುಕೊಳ್ಳಬೇಕು. ಕಳೆದ ಆರು ತಿಂಗಳಲ್ಲಿ ತಹಸೀಲ್ದಾರ್ ನ್ಯಾಯಾಲಯದಲ್ಲಿರುವ 8000 ಪ್ರಕರಣಗಳನ್ನು ಇತ್ಯರ್ಥಪಡಿಸಿ ಕಂಪ್ಯೂಟರ್‌ನಲ್ಲಿ ದಾಖಲೀಕರಣ ಮಾಡಲಾಗಿದೆ. ಈ ಅಭಿಯಾನದಲ್ಲಿ ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಕಂದಾಯ ಇಲಾಖೆಯಲ್ಲಿ ಇನ್ನು ಸಾಕಷ್ಟು ಸಮಸ್ಯೆಗಳನ್ನು, ಜನರು ಹೊತ್ತು ತರುತ್ತಿದ್ದು ಶೀಘ್ರದಲ್ಲೇ ಅದನ್ನು ಇತ್ಯರ್ಥ ಪಡಿಸಲಾಗುವುದು ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net