14ರಂದು ಪಾಂಡವಪುರದಲ್ಲಿ ಜನತಾ ನ್ಯಾಯಾಲಯ

3-pnp 3 R.MAHESH
ಆರ್.ಮಹೇಶ್
Published on

ಪಾಂಡವಪುರ: ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಸೆ.14ರಂದು ಬೃಹತ್ ಜನತಾ ನ್ಯಾಯಾಲಯ ಆಯೋಜಿಸಲಾಗಿದೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್.ಮಹೇಶ್ ತಿಳಿಸಿದರು.

ಲೋಕ್ ಅದಾಲತ್ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ವ್ಯಾಜ್ಯ ಪೂರ್ವ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಇತ್ಯಾರ್ಥ ಪಡಿಸಿಕೊಳ್ಳಬಹುದು. ಪ್ರಕರಣ ಇತ್ಯಾರ್ಥಪಡಿಸಿಕೊಳ್ಳಲು ಕಕ್ಷಿದಾರರು ಇಚ್ಛಿಸಿದಲ್ಲಿ ಮುಂಚಿತವಾಗಿ ಸಂಬಂಧಪಟ್ಟ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ತಾಲೂಕು ಕಾನೂನು ಸೇವೆಗಳ ಸಮಿತಿಗಳನ್ನು ಖುದ್ದಾಗಿ ಅಥವಾ ಆನ್‌ಲೈನ್, ವಿಡಿಯೋ ಕಾನ್ಫೆರೆನ್ಸ್, ಇ-ಮೇಲ್, ವಾಟ್ಸ್‌ಆ್ಯಪ್ ಹಾಗೂ ಎಲೆಕ್ಟ್ರಾನಿಕ್ ಮೋಡ್ ಮೂಲಕ ಸಂಪರ್ಕಿಸಬಹುದಾಗಿದೆ. ಹೀಗಾಗಿ, ಕಕ್ಷಿದಾರರು ರಾಜಿ ಸಂಧಾನಕ್ಕೆ ಯೋಗ್ಯವಾಗಿರುವ ಪ್ರಕರಣಗಳನ್ನು ಜನತಾ ನ್ಯಾಯಾಲಯದಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೋಕ್ ಅದಾಲತ್‌ಗೆ ಸಂಬಂಧಿಸಿದಂತೆ ಪಾಂಡವಪುರ ಪಟ್ಟಣದ ಎಲ್ಲ ನ್ಯಾಯಾಲಯಗಳಲ್ಲಿ ಪೂರ್ವಬಾವಿ ಬೈಠಕ್, ಪೀಠಗಳು ನಡೆಯಲಿದ್ದು, ನೀರಿನ ಬಿಲ್ ಪಾವತಿ, ಟೆಲಿಫೋನ್ ಬಿಲ್, ವಿದ್ಯುತ್ ಬಿಲ್ ಹಾಗೂ ಸಣ್ಣಪುಟ್ಟ ಬ್ಯಾಂಕ್ ಸಾಲ ಹಾಗೂ ನ್ಯಾಯಾಲಯದಲ್ಲಿ ಬಾಕಿ ಇರುವ ಸಿವಿಲ್ ವ್ಯಾಜ್ಯ, ಚೆಕ್‌ಬೌನ್ಸ್ ಪ್ರಕರಣಗಳು ರಾಜಿ ಸಂಧಾನದ ಮೂಲಕ ಬಗೆಹರಿಸಬಹುದಾಗಿದೆ. ನ್ಯಾಯಾಲಯ ನೀಡುವ ವಾರಂಟ್‌ಗಳನ್ನು ಸರಿಯಾಗಿ ಜಾರಿಗೊಳಿಸಬೇಕು. ಆದೇಶ ಸರಿಯಾಗಿ ಪಾಲನೆಯಾಗದಿದ್ದರೆ ನ್ಯಾಯಾಲಯದ ಸಮಯ ವ್ಯರ್ಥವಾಗುತ್ತದೆ. ಸುಲಲಿತ ನ್ಯಾಯಕ್ಕಾಗಿ ಎಲ್ಲರೂ ಸಹಕಾರ ನೀಡಬೇಕು. ಇದರಿಂದ ಪಕ್ರರಣಗಳನ್ನು ಶೀಘ್ರ ಇತ್ಯರ್ಥಪಡಿಸಬಹುದು ಎಂದರು.

ತಾಲೂಕಿನಲ್ಲಿ ಆ.1ಕ್ಕೆ ಅನ್ವಯವಾಗುವಂತೆ ಸೆ.14 ರಂದು ಲೋಕ್ ಅದಾಲತ್‌ಗೆ 150 ಎಂವಿಸಿ ಪ್ರಕರಣಗಳು, 9 ಎಂ.ಎಂ.ಆರ್.ಡಿ, 7 ಎಲ್.ಎ.ಸಿ, 100 ವಿಭಾಗದ ದಾವೆ ಪ್ರಕರಣಗಳು, 145 ಇತರ ಸಿವಿಲ್ ಪ್ರಕರಣಗಳು, 150 ನಿರ್ದಿಷ್ಟ ಪರಿಹಾರದ ದಾವೆ, 40 ಕ್ರಿಮಿನಲ್ ಪ್ರಕರಣಗಳು ಹಾಗೂ 330 ಎನ್‌ಐ ಆ್ಯಕ್ಟ್ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಸೆ.14ರ ಲೋಕ್ ಆದಾಲತ್‌ನಲ್ಲಿ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪಾರ್ವತಮ್ಮ, ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಾಬು, ಎಂ.ಪದ್ಮ ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಕಾಳೇಗೌಡ, ಕಾರ್ಯದರ್ಶಿ ಕನಗನಮರಡಿ ನಾಗರಾಜು, ನ್ಯಾಯಾಲಯದ ಸಿಬ್ಬಂದಿ ಮಂಚಯ್ಯ, ಮನು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net