ಶೀಘ್ರ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭ: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾಹಿತಿ

Janaspandana Sabe Mandya
Published on

ಮಂಡ್ಯ: ವಿ.ಸಿ ಫಾರ್ಮ್‌ನಲ್ಲಿ ಶೀಘ್ರವೇ ಕೃಷಿ ವಿಶ್ವವಿದ್ಯಾನಿಲಯ ಪ್ರಾರಂಭವಾಗಲಿದೆ. ಈ ಸಂಬಂಧ ಈಗಾಗಲೇ ಪ್ರಕ್ರಿಯೆ ನಡೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ತಾಲೂಕಿನ ಕೆರಗೋಡು ಗ್ರಾಮದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜಿಲ್ಲೆಯಲ್ಲಿ ಹೊಸ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ. ಅದರಂತೆ ಈ ಹಿಂದೆ ಘೋಷಣೆ ಮಾಡಿದಂತೆ ಕೃಷಿ ವಿವಿ ಸ್ಥಾಪನೆ ಸಂಬಂಧ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ. ಮಾತ್ರವಲ್ಲದೆ ಮೈಷುಗರ್ ಹೊಸ ಕಾರ್ಖಾನೆಯನ್ನು ಮಾಡಲಾಗುವುದು ಎಂದರು.
ಜಿಲ್ಲೆಯ ಜನರ ಹಿತ ನಮಗೆ ಮುಖ್ಯ. ನಾವು ಎಲ್ಲಿಯೇ ಹೋದರೂ ಮಂಡ್ಯದ ಅಭಿವೃದ್ಧಿ ಬಗ್ಗೆ ಯೋಚಿಸುತ್ತೇವೆ. ಅದರಂತೆ ಕಳೆದೊಂದು ವರ್ಷದಲ್ಲಿ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಹಾಗೂ ತಹಸೀಲ್ದಾರ್ ನ್ಯಾಯಾಲಯದಲ್ಲಿದ್ದ ಪ್ರಕರಣಗಳ ಪೈಕಿ ಸುಮಾರು 10,600 ಪ್ರಕರಣವನ್ನು ಇತ್ಯರ್ಥಪಡಿಸಲಾಗಿದೆ. ಇನ್ನು 1,200 ಪ್ರಕರಣ ಇರಬಹುದು. ಇದಲ್ಲದೆ ಗ್ರಾಮ ಪಂಚಾಯಿತಿಯಲ್ಲಿ ಸುಮಾರು 27 ಸಾವಿರ ಈ ಸ್ವತ್ತು ಪ್ರಕರಣಗಳನ್ನು ಇತ್ಯರ್ಥ ಮಾಡಲಾಗಿದೆ. ಇದರಲ್ಲಿ ನಾವು ಯಾವುದೇ ಪಕ್ಷದ ಕಾರ್ಯಕರ್ತ ಅಥವಾ ನಮಗೆ ಮತ ಹಾಕಿದ್ದಾರಾ ಎನ್ನುವುದನ್ನು ನೋಡಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ದೊರೆಗಳು. ನೀವು ಏನೇ ನಿರ್ಧಾರ ಮಾಡಿದರೂ ಅದನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ಇನ್ನು ಐದು ಗ್ಯಾರಂಟಿ ಯೋಜನೆಯಿಂದ ಪ್ರತಿ ಕುಟುಂಬಕ್ಕೆ ಸುಮಾರು 5 ಸಾವಿರ ರೂ ತಲುಪುತ್ತಿದೆ. ರಾಜ್ಯದಲ್ಲಿ ಬಹುತೇಕ ಫಲನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪಿದೆ. ಇದಲ್ಲದೆ ಕೃಷಿ ಇಲಾಖೆಯಿಂದ ನೀಡುವ ಸಬ್ಸಿಡಿಗಳು, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ವಿವಿಧ ಇಲಾಖೆಯಿಂದ ನೀಡಲಾಗುತ್ತಿರುವ ಸವಲತ್ತು ನಿಲ್ಲಿಸಿಲ್ಲ. ಬೆಳೆ ವಿಮೆ ಯೋಜನೆಯಡಿ ರೈತರಿಗೆ 1,700 ಕೋಟಿ ರೂ ಪರಿಹಾರ ಪಾವತಿಸಲಾಗಿದೆ. ಈ ವರ್ಷ ಮುಂಗಾರು ಬೆಳೆಗೆ ಯಾವುದೇ ತೊಂದರೆ ಇಲ್ಲದಂತೆ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರದ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಪ್ರತಿ ತಾಲೂಕಿನಲ್ಲಿರುವ ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಕೊರತೆ ಇಲ್ಲದಂತೆ ಸೌಲಭ್ಯ ನೀಡಲಾಗಿದೆ. ನಮ್ಮ ಸರ್ಕಾರ ಯಾವಾಗಲು ರೈತರ ಪರ ಇರುತ್ತದೆ ಎಂದು ಹೇಳಿದರು.
ಮಂಡ್ಯದ ಕೆರಗೋಡಿನಿಂದ ಕುಣಿಗಲ್ ಕಡೆ ಹೋಗುವ ರಸ್ತೆ ಹಾಗೂ ಚಿಕ್ಕಮಂಡ್ಯದ ಕಾರೆಮನೆ ಗೇಟ್ ಬಳಿ ರಸ್ತೆಯನ್ನು ಅಭಿವೃದ್ದಿ ಮಾಡಲಾಗಿದೆ. ಜಿಲ್ಲೆಯ ಕೊನೆಯ ಭಾಗದ ಬೆಳೆಗಳಿಗೂ ನೀರು ತಲುಪಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯ ನಾಲೆ ಆಧುನೀಕರಣ ಕಾಮಗಾರಿ ಕೈಗೊಳ್ಳಲಾಗಿದೆ. ಮಂಡ್ಯ ಶಾಸಕ ರವಿಕುಮಾರ್ ಕೇಂದ್ರ ಸ್ಥಾನದಲ್ಲಿದ್ದಾರೆ. ಕ್ಷೇತ್ರದಲ್ಲಿ ಉತ್ತಮ ಬದಲಾವಣೆಯನ್ನು ತರಲು ಶ್ರಮಿಸುತ್ತಿದ್ದಾರೆ. ಅವರಿಗೆ ನಿಮ್ಮೆಲ್ಲರ ಸಹಕಾರ, ಪ್ರೀತಿ, ವಿಶ್ವಾಸ ಮುಖ್ಯ ಎಂದರು.

ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಕೆರಗೋಡಿನಲ್ಲಿರುವ ಪಂಚಲಿಂಗೇಶ್ವರ ಸಮುದಾಯ ಭವನದ ನಿರ್ಮಾಣವೂ ಬಹಳ ವರ್ಷಗಳಿಂದ ಅರ್ಧಕ್ಕೆ ನಿಂತಿದ್ದು, ಶೀಘ್ರದಲ್ಲೇ ಅದನ್ನು ಪೂರ್ಣಗೊಳಿಸಲಾಗುವುದು. ಜತೆಗೆ ಅಂಬೇಡ್ಕರ್ ಭವನದ ನಿರ್ಮಾಣಕ್ಕೆ ಸರ್ಕಾರವು ಅನುದಾನ ನೀಡಲಿದ್ದು ಶೀಘ್ರದಲ್ಲೇ ನಿರ್ಮಿಸಲಾಗುವುದು ಎಂದರು.
5 ಕೋಟಿ ರೂ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಟೆಂಡರ್ ಪ್ರಕ್ರಿಯೆ ಮುಗಿದ ತಕ್ಷಣ ಕಾಮಗಾರಿ ಮಾಡಲಾಗುವುದು. ಕೆರಗೋಡಿನಲ್ಲಿ ಬಸ್ ನಿಲ್ದಾಣವನ್ನು ಕಟ್ಟಲು ಸ್ಥಳದ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಒಂದು ಎಕರೆ ಜಾಗಕ್ಕೆ ಹುಡುಕಾಟ ನಡೆಯುತ್ತಿದೆ. ವಸತಿರಹಿತರ ಅತೀ ಹೆಚ್ಚು ಅರ್ಜಿಗಳು ಸ್ವೀಕೃತವಾಗಿದ್ದು, 50 ನಿವೇಶನ ನೀಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 5 ಎಕರೆ ಸರ್ಕಾರಿ ಜಾಗವನ್ನು ಹುಡುಕಿ ಕೆರಗೋಡು ಗ್ರಾಪಂ ವ್ಯಾಪ್ತಿಯ ವಸತಿ ಹಾಗೂ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗುವುದು. ಈ ಹಿಂದೆ ಬಸರಾಳು ಮತ್ತು ಕೀಲಾರದಲ್ಲಿ ನಡೆದ ಜನಸ್ಪಂದನದಲ್ಲಿ ಬಂದಂತಹ ಅರ್ಜಿ ಪೈಕಿ ಶೇ.95ರಷ್ಟು 1 ತಿಂಗಳೊಳಗೆ ವಿಲೇವಾರಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ.ಮೋಹನ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ತಹಸೀಲ್ದಾರ್ ಶಿವಕುಮಾರ್ ಬಿರಾದರ್, ಮಾಜಿ ಶಾಸಕ ಎಚ್.ಬಿ.ರಾಮು, ತಾಪಂ ಮಾಜಿ ಅಧ್ಯಕ್ಷ ಸಿ.ತ್ಯಾಗರಾಜು, ಮುಡಾ ಸದಸ್ಯರಾದ ಎನ್.ಕೃಷ್ಣ, ದೊಡ್ಡಯ್ಯ, ಕೆಡಿಪಿ ನಾಮನಿರ್ದೇಶನ ಸದಸ್ಯ ಸಿ.ಎಂ.ದ್ಯಾವಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net