

ಉಡುಪಿ: ದೊಡ್ಡಬಳ್ಳಾಪುರದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿದೆ. ಸುಮಾರು 3 ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಮುಂದಿನ ದಿನಗಳಲ್ಲಿ ಎಲ್ಲಾ ವಿಭಾಗ ಮಟ್ಟದ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ ಕುಮಾರ್ ಹೇಳಿದರು.
ಉಡುಪಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರ ಒಂದು ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಸರಕಾರದ ಜನೋಪಯೋಗಿ ಕಾರ್ಯಕ್ರಮಗಳನ್ನು ಜನರ ಮನಸ್ಸಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ದೇಶವನ್ನು ಇಬ್ಬಾಗ ಮಾಡಿದ ಕಾಂಗ್ರೆಸ್ಸಿಗೆ ಭಾರತ ಜೋಡೊ ಯಾತ್ರೆ ಮಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ನಾಯಕರೇ ಉತ್ತರಭಾರತದಲ್ಲಿ ಕಾಂಗ್ರೆಸ್ ಛೋಡೋ ಎನ್ನುತ್ತಿದ್ದಾರೆ. ಈ ಯಾತ್ರೆ ದಕ್ಷಿಣದಿಂದ ಉತ್ತರಕ್ಕೆ ತಲುಪುವ ಹೊತ್ತಿಗೆ ಬೆರಳೆಣಿಕೆಯ ನಾಯಕರಷ್ಟೇ ಉಳಿದುಕೊಳ್ಳಲಿದ್ದಾರೆ. ಹೀಗಾಗಿ ಯಾತ್ರೆ ಮಾಡುವ ಬದಲು ಕಾಂಗ್ರೆಸ್ ಉಳಿಸುವ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡಲಿ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಲ್ಲ ಮಹಾಪುರುಷರ ಜಯಂತಿ ಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿ ಆಯೋಜಿಸಲು ನಿರ್ಧರಿಸಿದೆ. ಯಾವುದೇ ಮಹಾಪುರುಷರು ಅಥವಾ ದಾರ್ಶನಿಕರನ್ನು ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತ ಮಾಡಬಾರದು. ಇದರಿಂದ ಅವರ ಆದರ್ಶ ಹಾಗೂ ಸಂದೇಶಗಳು ಕೆಲವಷ್ಟು ಮಂದಿಗೆ ಮಾತ್ರ ಲಭ್ಯವಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.