ಊರಿನ ನೆಮ್ಮದಿ ಕೆಡಿಸುವ ದ್ವೇಷ ರಾಜಕಾರಣ, ಗಲಾಟೆಗಳಿಂದ ದೂರವಿರಿ

29CBP5
Published on

ಚಿಕ್ಕಬಳ್ಳಾಪುರ: ಊರಿನ ನೆಮ್ಮದಿ ಕೆಡಿಸುವ ದ್ವೇಷ ರಾಜಕಾರಣ, ಗಲಾಟೆಗಳಿಂದ ದೂರವಿರಬೇಕು ಎಂದು ಶಾಸಕ ಪ್ರದೀಪ್ ಈಶ್ವರ್ ಕ್ಷೇತ್ರದ ಜನರಿಗೆ ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ತಾಲೂಕಿನ ಅರೂರಿನಲ್ಲಿ ಕೈಗೊಂಡಿದ್ದ ಜನಸ್ಪಂದನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಮಾಜಿ ಸಚಿವ ಡಾ ಕೆ.ಸುಧಾಕರ್ ದ್ವೇಷ ರಾಜಕಾರಣದಿಂದ ನನ್ನಂತಹ ಯುವ ನಾಯಕರು ಹುಟ್ಟಿಕೊಳ್ಳುತ್ತಾರೆ. ಹಿಂದೆ ಹಲವು ಕೇಸ್‌ಗಳನ್ನು ಹಾಕಿಸಿ, ಕೋರ್ಟಿನ ಕಟೆಕಟೆಯಲ್ಲಿ ನಿಲ್ಲಿಸಲಾಯಿತು. ಇದರಿಂದ ಹಲವು ಬಾರಿ ಕಣ್ಣೀರು ಸುರಿಸಿ, ನೋವು ಅನುಭವಿಸಬೇಕಾಯಿತು ಎಂದು ಬೇಸರಿಸಿದರು.

ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿರಲಿ, ಯಾರೇ ನಾಯಕರ ಬೆಂಬಲಿಗರಾಗಿರಲಿ ದ್ವೇಷ ಕಟ್ಟಿಕೊಳ್ಳುವುದು ಬೇಡ. ಯುವ ಜನರು ಗಲಾಟೆಯಿಂದ ಮೊದಲು ದೂರವಿರಬೇಕು. ಪರಸ್ಪರ ಸೌಹಾರ್ದತೆಯಿಂದ ಊರಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ಸಂವಿಧಾನ ಶಿಲ್ಪಿ ಅಂಬೇಡ್ಕರ್ ಕೊಡುಗೆ ಹಿನ್ನೆಲೆಯಲ್ಲಿ ಸಾಮಾನ್ಯ ವ್ಯಕ್ತಿಗಳು ಜನಪ್ರತಿನಿಧಿಗಳಾಗಿ ಆಯ್ಕೆಯಾಗಲು ಸಾಧ್ಯವಾಗಿದೆ. ಯಾವುದೇ ಜಾತಿ ಮತಭೇದವಿಲ್ಲದೇ ಎಲ್ಲರಿಗೂ ಅಧಿಕಾರ ಸಿಗುವಂತಾಗಿದೆ. ಇಂತಹ ಸಂದರ್ಭದಲ್ಲಿ ಭಿನ್ನಾಭಿಪ್ರಾಯಗಳ ಗಲಾಟೆಯಿಂದ ನೆಮ್ಮದಿಯನ್ನು ಹಾಳು ಮಾಡಿಕೊಳ್ಳಬಾರದು ಎಂದರು.

ಪೆರೇಸಂದ್ರದಲ್ಲಿ ದಲಿತರಿಗೆ ಮೀಸಲಿರಿಸಿದ ಸ್ಮಶಾನಕ್ಕಾಗಿ ಒಂದೂ ವರೆ ಎಕರೆ ಜಮೀನನ್ನು ಮಂಜೂರು ಮಾಡಲಾಗುವುದು. ಇದಕ್ಕೂ ಸ್ಥಳೀಯ ಗ್ರಾ.ಪಂ.ಸ್ಪಂದಿಸುತ್ತಿಲ್ಲ. ಆದರೂ ಜನಪರ ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಸರಿಯಬಾರದು ಎಂದರು.

ಈ ಸಂದರ್ಭದಲ್ಲಿ ತಾ.ಪಂ.ಇಒ ಮಂಜುನಾಥ್, ಆರೋಗ್ಯಾಧಿಕಾರಿ ಮಂಜುಳಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್, ಮುಖಂಡರಾದ ಎಂ.ವಿ.ವೆಂಕಟೇಶ್, ರಾಮಕೃಷ್ಣಪ್ಪ ಮತ್ತಿತರರು ಇದ್ದರು.

*ಹಿರಿಯರಿಗೆ ಪಾದಪೂಜೆ

ಪೆರೇಸಂದ್ರ ಊರು ರಚನೆಯಾಗಿ ೬೫೨ ವರ್ಷವಾದ ನೆನಪಿನಲ್ಲಿ ಮುಂಬರುವ ಅಕ್ಟೋಬರ್‌ನಲ್ಲಿ ಗ್ರಾಮದ ಹಿರಿಯರಿಗೆ ಪಾದಪೂಜೆ ಕಾರ್ಯಕ್ರಮವನ್ನು ಕೈಗೊಳ್ಳಲಾಗುವುದು.

ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ಈ ಭಾಗದಲ್ಲಿ ಅಧಿಕಾರವನ್ನು ವೀರಬುಕ್ಕಣ್ಣ ಒಡೆಯರ್ ಹೊಂದಿದ್ದರು. ಇದರ ನಡುವೆ ಇಲ್ಲಿನ ಕೋಚೆ ನಾಯಕನ ಪುತ್ರರಾದ ದೊಡ್ಡ ಜಿಲ್ಲೆ ಮತ್ತು ಚಿಕ್ಕ ಜಿಲ್ಲೆ ನಾಯಕರು ತಾಯಿ ಪೆರಿಯವ್ವ ಹೆಸರಿನಲ್ಲಿ ಕೆರೆಯನ್ನು ಕಟ್ಟಿಸಿದರು. ಇದರಿಂದ ಈ ಊರಿಗೆ ಪೆರೇಸಂದ್ರ ಹೆಸರನ್ನಿಟ್ಟು, ಚಂದ್ರಗ್ರಹಣ ದಿನದಂದು ದಾನ ಧರ್ಮದೊಂದಿಗೆ ಪ್ರಾರಂಭಿಸಲಾಯಿತು. ಇದಕ್ಕೆ ಅ.24 ರಂದು ಕಾರ್ಯಕ್ರಮವನ್ನು ಕೈಗೊಂಡು ಹಿರಿಯರನ್ನು ಸನ್ಮಾನಿಸಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net