ಲೊಕ್ಕನಹಳ್ಳಿಯಲ್ಲಿ ಡಿಸಿ ಅಧ್ಯಕ್ಷತೆಯಲ್ಲಿ ಜನಸ್ಪಂದನ ಕಾರ್ಯಕ್ರಮ

ಲೊಕ್ಕನಹಳ್ಳಿಯಲ್ಲಿ ಆಯೋಜಿಸಿದ್ಧ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕಾರಿಗಳ ಮುಂದೆ ಸಮಸ್ಯೆ ಹೇಳಿಕೊಂಡರು. ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಎಸ್ಪಿ ಡಾ. ಟಿ.ಬಿ ಕವಿತಾ, ಸಿಇಒ ಮೋನಾ ರೋತ್, ಎಸಿ ಮಹೇಶ್ ಇತರರು ಇದ್ದರು.
ಲೊಕ್ಕನಹಳ್ಳಿಯಲ್ಲಿ ಆಯೋಜಿಸಿದ್ಧ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅಧಿಕಾರಿಗಳ ಮುಂದೆ ಸಮಸ್ಯೆ ಹೇಳಿಕೊಂಡರು. ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಎಸ್ಪಿ ಡಾ. ಟಿ.ಬಿ ಕವಿತಾ, ಸಿಇಒ ಮೋನಾ ರೋತ್, ಎಸಿ ಮಹೇಶ್ ಇತರರು ಇದ್ದರು.
Published on

ಹನೂರು: ಕಾಡಾನೆಗಳ ಹಾವಳಿ ವೀಪರೀತವಾಗಿದ್ದು ಫಸಲು ನಾಶವಾಗುತ್ತಿದೆ…ಜಮೀನಿಗೆ ತೆರಳುವ ಬಂಡಿ ದಾರಿ ಒತ್ತುವರಿಯಾಗಿದೆ… ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ… ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ…ರಸ್ತೆಗಳು ಹಾಳಾಗಿವೆ… ಸಮರ್ಪಕ ಸಾರಿಗೆ ಸೇವೆ ದೊರಕುತ್ತಿಲ್ಲ…

ಇದು ತಾಲೂಕಿನ ಲೊಕ್ಕನಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಕೇಳಿ ಬಂದ ಪ್ರಮುಖ ಸಮಸ್ಯೆಗಳು.

ಲೊಕ್ಕನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು, ಗ್ರಾಮಸ್ಥರು ಹಾಗೂ ವಿವಿಧ ರೈತಪರ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಜನರು ಸಮಸ್ಯೆಗಳನ್ನು ಬಗೆಹರಿಸುವಂತೆ ಹಾಗೂ ಸವಲತ್ತುಗಳನ್ನು ಕಲ್ಪಿಸಿ ಕೊಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡಿದರು. ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಸಮಸ್ಯೆಗೆ ಅಗತ್ಯ ಕ್ರಮವಹಿಸುವಂತೆ ಆಯಾ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗೆ ಸಂಬಂಧಿಸಿದಂತೆ ಒಟ್ಟು 141 ಅರ್ಜಿಗಳು ಸ್ವೀಕೃತವಾದವು.

ಮಂಗಲ ಗ್ರಾಮದ ವಸಂತಕುಮಾರ್ ಮಾತನಾಡಿ, ಬೆಂಗಳೂರು ಕಡೆಗೆ ಸಂಚರಿಸುವ ಸಾರಿಗೆ ಬಸ್‌ಗಳು ಗ್ರಾಮದಲ್ಲಿ ನಿಲುಗಡೆಯಾಗುತ್ತಿಲ್ಲ. ಗ್ರಾಮಕ್ಕೆ ಉಪ ಆರೋಗ್ಯ ಕೇಂದ್ರ ಸ್ಥಾಪನೆಯಾಗುವುದರ ಜತೆಗೆ ಎಟಿಎಂ ಕೇಂದ್ರ ತೆರೆಯುವಂತೆ ಕಳೆದ ಬಾರಿಯ ಕಾರ್ಯಕ್ರಮದಲ್ಲಿ ಮನವಿ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಯಾವುದೇ ಕ್ರಮವಾಗಿಲ್ಲ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪಾನಾಗ್, ಗ್ರಾಮಕ್ಕೆ ಆರೋಗ್ಯ ಉಪ ಕೇಂದ್ರ ಮಂಜೂರಾಗಿದೆ ಎಂದು ತಿಳಿಸಿದರಲ್ಲದೆ, ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಸುರೇಖಾ ಅವರಿಗೆ ಎಟಿಎಂ ಕೇಂದ್ರ ತೆರೆಯುವಂತೆ ಹಾಗೂ ಬಸ್ ನಿಲುಗಡೆ ಸಂಬಂಧ ಅಗತ್ಯ ಕ್ರಮಕೈಗೊಳ್ಳುವಂತೆ ಸಾರಿಗೆ ಅಧಿಕಾರಿ ವೆಂಕಟರಮಣಸ್ವಾಮಿ ಅವರಿಗೆ ಸೂಚಿಸಿದರು.

ಹೆಚ್ಚಾದ ಕಾಡಾನೆಗಳ ಹಾವಳಿ: ಒಡೆಯರಪಾಳ್ಯ ಗ್ರಾಮದ ಹರೀಶ್ ಮಾತನಾಡಿ, ಈ ಭಾಗದಲ್ಲಿ ಆನೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ಜಮೀನಿಗೆ ಲಗ್ಗೆ ಇಟ್ಟು ಫಸಲನ್ನು ನಾಶಪಡಿಸುತ್ತಿವೆ. ಇತ್ತ ಫಸಲು ನಷ್ಟಕ್ಕೆ ಪರಿಹಾರ ದೊರಕಿಲ್ಲ. ಕೆಲವು ಕಡೆಗಳಲ್ಲಿ ಸೋಲಾರ್ ಬೇಲಿ ಹಾಳಾಗಿದೆ. ಇನ್ನು ಟ್ರಾನ್ಸ್‌ಫಾರ್ಮರ್ ಅಳವಡಿಕೆ ಸಂಬಂಧ ಸೆಸ್ಕ್‌ಗೆ ಹಣ ಪಾವತಿಸಿ 2 ವರ್ಷವಾಗಿದೆ. ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜನರಲ್ಲಿ ಜೀವಭಯ ಉಂಟು ಮಾಡಿದೆ. ಈ ಬಗ್ಗೆ ಕ್ರಮಕೈಗೊಳ್ಳುವಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ನಿರ್ಲಕ್ಷೃ ವಹಿಸಿದ್ದಾರೆ. ಜತೆಗೆ ರೈತರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಲೊಕ್ಕನಹಳ್ಳಿ ರೈತ ಸಂಘಟನೆ ಪದಾಧಿಕಾರಿಗಳು ಮನವಿ ಮಾಡಿದರು.

ಮಧ್ಯವರ್ತಿಗಳ ಹಾವಳಿ: ಇನ್ನು ಕೊಂಗರಹಳ್ಳಿಯ ಪರಶಿವಮೂರ್ತಿ ಮಾತನಾಡಿ, ಜಮೀನಿಗೆ ತೆರಳುವ ಸರ್ಕಾರಿ ಜಾಗ ಕೆಲವರಿಂದ ಒತ್ತುವರಿಯಾಗಿದೆ. ಜತೆಗೆ ಗುಂಡಾಲ್ ಜಲಾನಯದ ಪ್ರದೇಶದ ಬಲದಂಡೆ ನಾಲೆಯೂ ಮುಚ್ಚಿಹೋಗಿದ್ದು, ರೈತರಿಗೆ ಸಮಸ್ಯೆಯಾಗಿದೆ ಎಂದು ದೂರಿದರೆ, ಮೈಸೂರಪ್ಪನ ದೊಡ್ಡಿಯ ಅಪ್ಪಾಜಿ, ಲೊಕ್ಕನಹಳ್ಳಿ ನಾಡ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇಲ್ಲಿನ ಅಧಿಕಾರಿಗಳು ಹಾಗೂ ನೌಕರರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಸಾರ್ವಜನಿಕರಿಗೆ ತುಂಬಾ ಸಮಸ್ಯೆಯಾಗಿದೆ ಎಂದು ದೂರಿದರು.

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ಮಧ್ಯವರ್ತಿಗಳಿಗೆ ಪ್ರವೇಶವಿಲ್ಲ ಎಂಬ ನಾಮಫಲಕವನ್ನು ಅಳವಡಿಸಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಉಪ ವಿಭಾಗಾಧಿಕಾರಿ ಮಹೇಶ್ ಹಾಗೂ ತಹಸೀಲ್ದಾರ್ ವೈ.ಕೆ. ಗುರುಪ್ರಸಾದ್ ಅವರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಆಸ್ಪತ್ರೆಯಲ್ಲಿ ಹಣ ವಸೂಲಿ: ಲೊಕ್ಕನಹಳ್ಳಿ ಗ್ರಾಮದ ಮಾದೇಶ್ ಮಾತನಾಡಿ, ಈ ಭಾಗದಲ್ಲಿ ತುರ್ತು ವಾಹನ ಸೌಕರ್ಯವಿಲ್ಲ. ರಾತ್ರಿ ವೇಳೆ ತುರ್ತು ಸಂದರ್ಭ ಹಾಗೂ ಹೆರಿಗೆಗಾಗಿ ಲೊಕ್ಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಆಗಮಿಸಿದರೆ ನರ್ಸ್ ಇರುವುದಿಲ್ಲ. ಚಿಕಿತ್ಸೆಗಾಗಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್, ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದ್ದು, ಸರಿಪಡಿಸಲಾಗುವುದು ಎಂದು ತಿಳಿಸಿದರಲ್ಲದೆ, ಹಣ ವಸೂಲಿ ಸಂಬಂಧ ಲಿಖಿತವಾಗಿ ದೂರು ನೀಡಿದರೆ ಸಂಬಂಧಪಟ್ಟವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.

ಗ್ರಾಮದಿಂದ ಉಯಿಲನತ್ತ, ಜೋರೇದೊಡ್ಡಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣ ಹಾಳಾಗಿದೆ. ಜತೆಗೆ ಸಮರ್ಪಕ ಬಸ್ ಸೌಕರ್ಯವಿಲ್ಲ ಎಂದು ಪಿ.ಜಿ ಪಾಳ್ಯ ಗ್ರಾಮದ ಪ್ರಭುಸ್ವಾಮಿ ದೂರಿದರೆ, ಒಡೆಯರ ಪಾಳ್ಯದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಹಾಳಾಗಿದೆ ಎಂದು ಪರಶಿವ ಅಧಿಕಾರಗಳ ಗಮನ ಸೆಳೆದರು.

15 ದಿನಗಳೊಳಗೆ ಸಮಸ್ಯೆ ಪರಿಹಾರಕ್ಕೆ ಕ್ರಮ: ಸಮಸ್ಯೆಯನ್ನು ಆಲಿಸಿದ ಮಾತನಾಡಿದ ಜಿಲ್ಲಾಧಿಕಾರಿ ಸಿ.ಟಿ ಶಿಲ್ಪನಾಗ್, ಸರ್ಕಾರದ ಯೋಜನೆಗಳು ಜನರ ಮನ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಹಾಗೂ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಸಂಬಂಧ ಹೋಬಳಿ ಮಟ್ಟದಲ್ಲಿ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. ಜಮೀನಿನ ದಾರಿ ತೆರವುಗೊಳಿಸುವ ಸಂಬಂಧ ಶೇ.40ರಷ್ಟು ದೂರುಗಳಿವೆ. ಜತೆಗೆ ಅರಣ್ಯ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳಿವೆ. ಈ ಸಂಬಂಧ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆದ್ದರಿಂದ 15 ದಿನಗಳೊಳಗೆ ಬಗೆಹರಿಸಬಹುದಾದ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಾಗುವುದು.

ಇನ್ನುಳಿದವುಗಳಿಗೆ ಕಾಲಾವಕಾಶ ಅಗತ್ಯವಿದೆ. ಆದ್ದರಿಂದ ಅಧಿಕಾರಿಗಳು ಈ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಗ್ರಾಮಮಟ್ಟದಲ್ಲೇ ಸಮಸ್ಯೆ ಬಗೆಹರಿಸಬೇಕು. ಆ ಮೂಲಕ ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿ, ವಿಭಾಗಾಧಿಕಾರಿ ಹಾಗೂ ತಹಸಿಲ್ದಾರ್‌ಕಚೇರಿಗೆ ಜನರು ಅಲೆಯದಂತೆ ಕ್ರಮವಹಿಸಬೇಕು ಎಂದು ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಟಿ.ಬಿ ಕವಿತಾ, ಜಿಪಂ ಸಿಇಒ ಮೋನಾ ರೋತ್, ಹಾಗೂ ಜಿಲ್ಲಾ, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net