

ಚಿಟಗುಪ್ಪ:ಕೆಲಸ ಕಾರ್ಯಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಸಾರ್ವಜನಿಕರ ಸಮಸ್ಯೆಗಳಿಗೆ ನಿಯಮಾನುಸಾರ ತ್ವರಿತ ಗತಿಯಲ್ಲಿ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಪುರಸಭೆ ಸಭಾಗಂಣದಲ್ಲಿ ಸೋಮವಾರ ಏರ್ಪಡಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆಯಾ ಇಲಾಖೆ ಅಧಿಕಾರಿಗಳು ಕಾನೂನಿನಡಿ ಸೂಕ್ತ ಮಾಹಿತಿಯೊಂದಿಗೆ ಹತ್ತು ದಿನದೊಳಗೆ ವಿಲೇವಾರಿ ಮಾಡಬೇಕು. ಎಲ್ಲ ಇಲಾಖೆಗಳಿಂದ ತಹಸೀಲ್ದಾರ್‌ಗೆ ಅರ್ಜಿಗಳ ಸ್ಥಿತಿಗತಿ ಬಗ್ಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಿದರು.
ಪಟ್ಟಣ ಸೇರಿ ವಿವಿಧ ಗ್ರಾಮಗಳ ಜನರಿಂದ ಪಂಚಾಯತ್ ರಾಜ್, ಅರಣ್ಯ, ತಾಲೂಕು ಪಂಚಾಯಿತಿ, ಜೆಸ್ಕಾಂ, ಕಂದಾಯ ಇಲಾಖೆ ಸೇರಿ ೪೩ ಅರ್ಜಿ ಸಲ್ಲಿಕೆಯಾಗಿವೆ. ಚಿಟಗುಪ್ಪ ತಾಲೂಕು ಕೇಂದ್ರವಾದರೂ ರಾತ್ರಿ ವೇಳೆ ಸೂಕ್ತ ಬಸ್ ವ್ಯವಸ್ಥೆ ಇಲ್ಲದೆ ಪಟ್ಟಣದ ನಿವಾಸಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದ್ದು, ತಕ್ಷಣ ಸಾರಿಗೆ ಸೌಕರ್ಯ ಕಲ್ಪಿಸಬೇಕು. ಪಟ್ಟಣದಲ್ಲಿ ಕೆಟ್ಟಿರುವ ಸಿಸಿ ಕ್ಯಾಮರಾಗಳ ದುರಸ್ತಿ ಮಾಡಿ ಅಗತ್ಯವಿದ್ದ ಕಡೆ ಹೊಸದಾಗಿ ಅಳವಡಿಸಬೇಕು. ಮಂಗಲಗಿ ಗ್ರಾಮ ಪಂಚಾಯಿತಿ ಅವ್ಯವಹಾರ ಸೇರಿ ವಿವಿಧ ಸಮಸ್ಯೆಗಳ ಕುರಿತು ಹಳ್ಳಿಗರು ಮನವಿಪತ್ರ ಸಲ್ಲಿಸಿದರು.
ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಸಹಾಯಕ ಆಯುಕ್ತ ಮುಕುಲ್ ಜೈನ್, ತಹಸೀಲ್ದಾರ್ ಮಂಜುನಾಥ ಪಂಚಾಳ, ಹೆಚ್ಚುವರಿ ಎಸ್‌ಪಿ ಮಹೇಶ ಮೇಘಣ್ಣನವರ್, ಜಿಪಂನ ಕಿಶೋರ ದುಬೆ, ವೃತ್ತ ನಿರೀಕ್ಷಕ ಶ್ರೀನಿವಾಸ ಅಲ್ಲಾಪುರ, ಪುರಸಭೆ ಮುಖ್ಯಾಧಿಕಾರಿ ಹುಸಾಮೋದ್ದಿನ್ ಬಾಬಾ, ಪಿಎಸ್‌ಐ ಬಾಶುಮಿಯಾ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಕೆಗೆ ಮನವಿ: ಚಿಟಗುಪ್ಪದ ಒಂದೇ ಮಾರುಕಟ್ಟೆಯಲ್ಲಿ ಎಲ್ಲ ವಹಿವಾಟು ನಡೆಯುತ್ತಿರುವ ಕಾರಣ ಜನದಟ್ಟಣೆ ಆಗುತ್ತಿರುವುದನ್ನು ತಪ್ಪಿಸಬೇಕು. ಮಿನಿ ವಿಧಾನಸೌಧ, ಕ್ರೀಡಾಂಗಣ, ೧೦೦ ಹಾಸಿಗೆ ತಾಲೂಕು ಆಸ್ಪತ್ರೆ, ತರಕಾರಿ ಮತ್ತು ಮಾಂಸ ಮಾರುಕಟ್ಟೆಗೆ ಬೇರೆ ಕಡೆ ಸ್ಥಳ ನಿಗದಿಪಡಿಸಬೇಕು. ಮಂಗ ಮತ್ತು ನಾಯಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ಪುರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಪಾಟೀಲ್ ನೇತೃತ್ವದ ನಿಯೋಗ ಡಿಸಿಗೆ ಮನವಿಪತ್ರ ಸಲ್ಲಿಸಿತು.