

ವಿಜಯವಾಣಿ ಸುದ್ದಿಜಾಲ ಧಾರವಾಡ
ಜನರ ದೂರು, ಅಹವಾಲುಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳದಲ್ಲೇ ಪರಿಹಾರ ನೀಡುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಜೂ.24 ರಿಂದ 29ರ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಜಿಲ್ಲಾಧಿಕಾರಿ ಜನಸ್ಪಂದನ ಕಾರ್ಯಕ್ರಮ ಜರುಗಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜೂ. 24ರಂದು ಬೆಳಗ್ಗೆ 11 ಗಂಟೆಗೆ ಕುಂದಗೋಳ ಪಟ್ಟಣದ ಸವಾಯಿ ಗಂಧರ್ವ ಸಭಾಭವನದಲ್ಲಿ ಕುಂದಗೋಳ ತಾಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮ ಜರುಗಲಿದೆ. ಜೂ. 26ರಂದು ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನ ನಡೆಯಲಿದ್ದು, ಸಚಿವರು ಭಾಗವಹಿಸಲಿದ್ದಾರೆ.
ಜೂ. 27ರಂದು ನವಲಗುಂದ ಪಟ್ಟಣದಲ್ಲಿ, ಜೂ. 28ರಂದು ಅಣ್ಣಿಗೇರಿ ಪಟ್ಟಣದಲ್ಲಿ, ಜೂ. 29ರಂದು ಕಲಘಟಗಿ ಮತ್ತು ಅಳ್ನಾವರ ತಾಲೂಕು ಮಟ್ಟದ ಜನಸ್ಪಂದನ ನಡೆಯಲಿವೆ. ಜನರ ಕುಂದು-ಕೊರತೆಗಳನ್ನು ಶ್ರೀ ಪರಿಹರಿಸಲು ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಜಂಟಿಯಾಗಿ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.