ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನಸಂಪರ್ಕ ಸಭೆ: ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಹೇಳಿಕೆ

DCT
Published on

ಮದ್ದೂರು: ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತಾಲೂಕಿನಾದ್ಯಂತ ಜನಸಂಪರ್ಕ ಸಭೆ ಆರಂಭಿಸಲಾಗಿದೆ ಎಂದು ಶಾಸಕ ಡಿ.ಸಿ.ತಮ್ಮಣ್ಣ ತಿಳಿಸಿದರು.

ತಾಲೂಕಿನ ಕೆಸ್ತೂರು ಬಳಿಯ ಗೊಲ್ಲರದೊಡ್ಡಿಯ ಶ್ರೀ ಕೃಷ್ಣ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಜನಸಂಪರ್ಕ ಸಭೆಗೆ ಚಾಲನೆ ನೀಡಿದರು. ಬಳಿಕ ಆತಗೂರು ಹೋಬಳಿ ಛತ್ರಲಿಂಗನದೊಡ್ಡಿ, ಮಲ್ಲನಕುಪ್ಪೆ, ಮಲ್ಲನಾಯನಹಳ್ಳಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಮುಖಂಡರು ಹಾಗೂ ಸ್ಥಳೀಯರ ಸಮಸ್ಯೆ ಆಲಿಸಿದರು.

ನನ್ನ ಅಧಿಕಾರಾವಧಿಯಲ್ಲಿ ತಾಲೂಕಿನ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಅದರಲ್ಲಿ ಆತಗೂರು ಹೋಬಳಿ ನೀರಾವರಿಯಿಂದ ವಂಚಿತವಾಗಿತ್ತು. ಬಳಿಕ ಶಿಂಷಾ ನದಿಯಿಂದ ಏತನೀರಾವರಿ ಯೋಜನೆ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಲಾಯಿತು ಎಂದರು.

ಆತಗೂರು ಹೋಬಳಿಯಲ್ಲಿ 4, ಚಿಕ್ಕರಸಿನಕೆರೆ ಹಾಗೂ ಕಸಬಾ ಹೋಬಳಿಯಲ್ಲಿ ಒಟ್ಟು 40 ದಿನ ಜನಸಂಪರ್ಕ ಸಭೆ ನಡೆಯಲಿದೆ ಎಂದರು.

ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚಾಮನಹಳ್ಳಿ ಸಿ.ಕೆ.ಸ್ವಾಮಿಗೌಡ, ಸಂಘಟನಾ ಕಾರ್ಯದರ್ಶಿ ಬಿಳಿಗೌಡ, ತಾಲೂಕು ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಜಗದೀಶ್, ಸ್ವಾಮಿ, ರವಿ, ಮಹೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net