

ಕೊಪ್ಪಳ: ಸಕ್ರಿಯ ರಾಜಕೀಯಕ್ಕೆ ಮರಳಲು ಯತ್ನಿಸುತ್ತಿರುವ ಮಾಜಿಸಚಿವ ಜನಾರ್ದನ ರೆಡ್ಡಿ, ಹೊಸ ಪಕ್ಷ ಕಟ್ಟುವ ಮುನ್ಸೂಚನೆ ನೀಡಿದ್ದಾರೆ. ಇವೆಲ್ಲ ಬೆಳವಣಿಗೆಗಳ ನಡುವೆ ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಬುಧವಾರ ತಮ್ಮ ಗಂಗಾವತಿ ನಿವಾಸದ ಗೃಹ ಪ್ರವೇಶ ನೆರವೇರಿಸಿದ್ದಾರೆ.
ಇತ್ತೀಚೆಗಷ್ಟೇ ಗಂಗಾವತಿಯಲ್ಲಿಮನೆ ಖರೀದಿಸಿರುವ ಜನಾರ್ದನ ರೆಡ್ಡಿ ಡಿ.18ರಂದು ಗೃಹ ಪ್ರವೇಶ ನೆರವೇರಿಸಿ ಮುಂದಿನ ರಾಜಕೀಯ ನಿಲುವು ತಿಳಿಸುವುದಾಗಿ ಹೇಳಿದ್ದರು. ಆದರೆ ಇಂದು ರೆಡ್ಡಿ ಪತ್ನಿ ಅರುಣಾ ಲಕ್ಷ್ಮೀ ಸದ್ದಿಲ್ಲದೇ ಗೃಹ ಪ್ರವೇಶ ನೆರವೇರಿಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ ಪತ್ನಿ, ಜನಾರ್ದನರೆಡ್ಡಿ ಜನರ ನಡುವೆ ಇರಬೇಕೆಂದು ಬಯಸಿದ್ದಾರೆ. ರಾಜಕೀಯ ನಡರ ಬಗ್ಗೆ ಮುಂದಿನ ವಾರ ರೆಡ್ಡಿಯವರೇ ಅಧಿಕೃತ ಮಾಹಿತಿ ನೀಡಲಿದ್ದಾರೆ. ದೇವಾನುದೇವತೆಗಳಿಗೆ ವನವಾಸ ತಪ್ಪಿಲ್ಲ.ನಾವು ಮನುಷ್ಯರು. ರೆಡ್ಡಿ 12 ವರ್ಷ ವನವಾಸ ಅನುಭವಿಸಿದ್ದಾರೆ.
ಇದೀಗ ಮತ್ತೆ ಸಕ್ರಿಯ ರಾಜಕೀಯಕ್ಕೆ ಬರಲು ಮನಸ್ಸು ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆ ಮಾಡಿದರೆ ದೂರ ಆಗಲಿದೆ. ಹೀಗಾಗಿ ಗಂಗಾವತಿಯಲ್ಲಿ ಮನೆ ಮಾಡಿದ್ದೇವೆ ಎಂದರು. ರಾಜಕೀಯ ಬಗ್ಗೆ ಮಾತನಾಡಲು ನಿರಾಕರಿಸುವ ಮೂಲಕ ರೆಡ್ಡಿ ರಾಜಕೀಯ ನಡೆ ಬಗ್ಗೆ ಗುಟ್ಟು ಬಿಟ್ಟುಕೊಡಲಿಲ್ಲ.