ಜನಾರ್ದನ ಸ್ವಾಮಿ ದೇಗುಲ ಜಾತ್ರೆ : 15ರಂದು ಉಳ್ಳಾಲ್ತಿ, ಪೊಸಲ್ತಾಯಿ, ಕುಮಾರಸ್ವಾಮಿ ದೈವಗಳಿಗೆ ನೇಮ

New Project (2)
Published on

ಬೆಳ್ತಂಗಡಿ : ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ ಜ.14ರ ಮಕರ ಸಂಕ್ರಮಣದಿಂದ 23ರವರೆಗೆ ವಿವಿಧ ಧಾರ್ಮಿಕ, ವೈದಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

14ರಂದು ರಾತ್ರಿ ಧ್ವಜಾರೋಹಣ-ಭಂಡಾರ ಏರುವುದು, 15ರಂದು ರಾತ್ರಿ ಬದಿ ಮೇಲೆ ಉಳ್ಳಾಲ್ತಿ, ಪೊಸಲ್ತಾಯಿ, ಕುಮಾರಸ್ವಾಮಿ ದೈವಗಳಿಗೆ ನೇಮ, 16ರಂದು ಸಂಜೆ ಬದಿ ಮೇಲೆ ನೆತ್ತರಮುಗುಳಿ ದೈವದ ನೇಮ, ರಾತ್ರಿ ಭಂಡಾರ ಇಳಿದು ದೇವಸ್ಥಾನದಲ್ಲಿ ಶ್ರೀ ಕೃಷ್ಣ ಮಂಟಪ ಉತ್ಸವ, 17ರಂದು ರಾತ್ರಿ ಅಶ್ವತ್ಥಕಟ್ಟೆ ಉತ್ಸವ, 18ರಂದು ಪುಷ್ಕರಣಿ ಕಟ್ಟೆ ಉತ್ಸವ, 19ರಂದು ಪೇಟೆ ಸವಾರಿ ಉತ್ಸವ, 20ರಂದು ರಥಬೀದಿಯಲ್ಲಿ ಚಂದ್ರಮಂಡಲ ಉತ್ಸವ, 21ರಂದು ಬೆಳಗ್ಗೆ ಶ್ರೀ ದೇವರ ದರ್ಶನ ಬಲಿ, ಮಧ್ಯಾಹ್ನ ಉಜಿರೆ ವಿದ್ಯಾನಗರ ಪ್ರವೀಣ್ ಕುಮಾರ್ ಇಂದ್ರ ಅವರ ಸೇವಾರ್ಥ ಸಾರ್ವಜನಿಕ ಅನ್ನಸಂತರ್ಪಣೆ, ರಾತ್ರಿ ಮಹಾರಥೋತ್ಸವ, ಶ್ರೀ ಭೂತಬಲಿ, ಶಯನೋತ್ಸವ, 22 ರಂದು ಬೆಳಗ್ಗೆ ಕವಾಟೋದ್ಘಾಟನೆ, ಸಂಜೆ ಅವಭೃಥೋತ್ಸವ, ರಾತ್ರಿ ಧ್ವಜಾವರೋಹಣ, ಜ.23ರಂದು ಬೆಳಗ್ಗೆ ಕಲಶಾಭಿಷೇಕ, ಸಂಪ್ರೋಕ್ಷಣೆಯೊಂದಿಗೆ ವರ್ಷಾವಧಿ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ಶ್ರೀ ಶಾರದಾ ಮಂಟಪದಲ್ಲಿ 19ರಿಂದ 22 ರವರೆಗೆ ಸಂಜೆ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. 14ರಿಂದ 20ರವರೆಗೆ ಪ್ರತಿದಿನ ಬೆಳಗ್ಗೆ 9.30ರಿಂದ ಉಜಿರೆಯ ಶಮನ ಕ್ಲಿನಿಕ್‌ನ ಚಕ್ರಪಾಣಿ ಸರಳಾಯ ಪ್ರಾಯೋಜಕತ್ವದಲ್ಲಿ ಉಡುಪಿಯ ಮದ್ವೇಶ ಆಚಾರ್ಯ ಮಠದ ಅವರಿಂದ ಭಾಗವತ ಪಾತ್ರ ಪ್ರಪಂಚ-ನೀತಿ ಕಥೆಗಳು ಕುರಿತಾಗಿ ಧಾರ್ಮಿಕ ಪ್ರವಚನ ನಡೆಯಲಿದೆ ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net