ನಮ್ಮತನದ ಕಲೆ, ಸಂಸ್ಕೃತಿ ಮರುಕಳಿಸಲಿ...

Janapada
Published on

ಪುತ್ತಿಗೆ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯ

ರಾಜ್ಯ ಮಟ್ಟದ ಜನಪದ ವೈಭವ ಸ್ಪರ್ಧೆ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಜನಪದವು ನಮ್ಮ ನಾಡಿನ ಸಹಜ ಸಂಸ್ಕೃತಿಯಾಗಿದ್ದು ಅತ್ಯಂತ ಶ್ರೇಷ್ಠವಾದ ಕಲೆಯಾಗಿದೆ. ಆದರೆ, ಆಧುನಿಕ ಕಲೆಯ ಭರಾಟೆಗಳ ನಡುವೆ ಜನಪದ ಕಲೆ ಹಾಗೂ ವೈಭವ ನಶಿಸುತ್ತಿದೆ. ಇಂದಿನ ಯುವ ಸಮುದಾಯಕ್ಕೆ ನಾಡಿನ ಪರಂಪರೆ, ಕಲೆಗಳ ಬಗ್ಗೆ ಮಾಹಿತಿಯೇ ಇಲ್ಲ. ಎಲ್ಲ ಬಗೆಯ ಗ್ರಾಮೀಣ ಕ್ರೀಡೆಗಳು ಅಪರಿಚಿತವಾಗುತ್ತಿದೆ. ಹೀಗಾಗಿ ನಮ್ಮತನ ಹೊಂದಿರುವ ಜನಪದ ಕಲೆಯ ವೈಭವವನ್ನು ನಾಡಿಗೆ ಮತ್ತೆ ಪರಿಚಯಿಸುವ ಅತ್ಯಗತ್ಯತೆ ಇಂದು ಹೆಚ್ಚಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

Shree
ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ನಾಥಪಂಥ ಅಲೆಮಾರಿ ಜೋಗಿ ಮಹಿಳಾ ವೇದಿಕೆ (ರಿ.) ನೇತೃತ್ವದಲ್ಲಿ ಜುಲೈ 13ರಂದು ಆಯೋಜಿಸಿದ್ದ (ಪುತ್ತಿಗೆ ಮಠದ 1 ಸಾವಿರದ ಕಾರ್ಯಕ್ರಮ) ರಾಜ್ಯಮಟ್ಟದ ಸಾಮೂಹಿಕ ಜನಪದ ನೃತ್ಯ ಸ್ಪರ್ಧೆ ಜನಪದ ವೈಭವ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಮೊಬೈಲ್​ ಆಘಾತ

ಪರ್ಯಾಯ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಮಾತನಾಡಿ, ನಮ್ಮ ಜನಪದ ಕಲೆ, ಸಂಸ್ಕೃತಿಯ ಸಂಭ್ರಮವನ್ನು ಮೊಬೈಲ್​ ನುಂಗತೊಡಗಿದೆ. ಕರೊನಾದ ಬಳಿಕ ಆನ್​ಲೈನ್​ ಬಳಕೆ ಹೆಚ್ಚಾಗಿದ್ದರಿಂದ ಎಲ್ಲವೂ ಮೊಬೈಲೀಕರಣ ಆಗಿದೆ. ಮಕ್ಕಳು ಮೊಬೈಲ್​ನೊಂದಿಗೇ ದಿನ ಕಳೆಯುತ್ತಿದ್ದಾರೆ. ಕ್ರೂರವಾದ ಹಾಗೂ ಮಾನಸಿಕ ಖಿನ್ನತೆಗೆ ಒಳಗಾಗುವ ಗೇಮ್​ನತ್ತ ಆಕರ್ಷಿತರಾಗುತ್ತಿದ್ದಾರೆ. ಇದು ಸಮಾಜದ ಮೇಲೂ ದುಷ್ಪರಿಣಾಮ ಬೀರುತ್ತದೆ ಎಂದರು.

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಜನಪದ ಕಲೆ ಉಳಿಸುವ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿ, ಸ್ಪರ್ಧಾಳುಗಳಿಗೆ ಶುಭ ಹಾರೈಸಿದರು.

ನಾಥಪಂತ ಅಲೆಮಾರಿ ಜೋಗಿ ಮಹಿಳಾ ವೇದಿಕೆಯ ಅಧ್ಯಕ್ಷೆ ರಜಿನಿ ಜೋಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಗೌರವಾಧ್ಯಕ್ಷೆ ಭಾರತಿ ಡಿ. ಜೋಗಿ, ಉಡುಪಿ ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಅಖಿಲ ಕರ್ನಾಟಕ ಜೋಗಿ ಸಮಾಜ ಅಭಿವೃದ್ಧಿ ಮಹಾಮಂಡಳಿ ಹುಬ್ಬಳ್ಳಿಯ ಅಧ್ಯಕ್ಷ ಶಿವಾಜಿ ಡಿ. ಮಧೂರಕರ್​, ಜೋಗಿ ಸಮಾಜ ಸೇವಾ ಸಮಿತಿ ಕಾರ್ಕಳ ಘಟಕದ ಅಧ್ಯಕ್ಷ ಗೋವಿಂದ ಜೋಗಿ, ಜೋಗಿ ವಿವಿಧೋದ್ದೇಶ ಸಹಕಾರಿ ಸಂಘ ಉಡುಪಿಯ ಅಧ್ಯಕ್ಷ ವಸಂತ ಜೋಗಿ, ಅಖಿಲ ಕರ್ನಾಟಕ ನಾಥಪಂಥ ಜೋಗಿ ಸಮಾಜದ ಕುಂದಾಪುರ ಅಧ್ಯಕ್ಷ ದೇವರಾಜ ಕೆ. ಬಳೆಗಾರ್​, ಹರಿಶ್ಚಂದ್ರ ಜೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಬಿ. ಹಾದಿಮನಿ, ಶ್ರೀಮಠದ ರಮೇಶ ಭಟ್​ ಉಪಸ್ಥಿತರಿದ್ದರು.

ರಮೇಶ ಎಚ್​.ಎಸ್​. ವಿರಚಿತ ನಾನು ಭಾರತೀಯ ಪುಸ್ತಕ ಬಿಡುಗಡೆ ಮಾಡಲಾಯಿತು. ಐಶ್ವರ್ಯಾ ಜೋಗಿ ಪ್ರಾರ್ಥಿಸಿದರು. ಯೋಗಿನಿ ಜೋಗಿ ಸ್ವಾಗತಿಸಿದರು. ಸುಗುಣಾ ಜೋಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಪಮಾ ಜೋಗಿ ವಂದಿಸಿದರು. ಅರುಣಕುಮಾರ್​ ಜೋಗಿ ಬೈದಬೆಟ್ಟು ಹಾಗೂ ಸುಜಾತಾ ಬಾಯರಿ ಕೋಟ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಬಳಿಕ ರಾಜ್ಯದ ಆಯ್ದ 12 ತಂಡಗಳಿಂದ ಜಾನಪದ ಸಾಂಸ್ಕೃತಿಕ ಸ್ಪರ್ಧೆ ಜರುಗಿತು.

ಹಿಂದಿನ ಕಾಲದಲ್ಲಿ ಜೋಗಿ ಸಮಾಜದವರು ಮನೆಮನೆಗೆ ತೆರಳಿ ಬಳೆಗಳನ್ನು ಮಾರುತ್ತಿದ್ದರು. ಭಾಗ್ಯದ ಬಳೆಗಾರ ಹೋಗಿ ಬಾ ನನ್ನ ತವರಿಗೆ ಎಂಬ ಜನಪದ ಹಾಡು ಅವರ ಶ್ರೇಷ್ಠತೆ ತಿಳಿಸುತ್ತದೆ. ಶುಭ ಕಾರ್ಯಕ್ರಮಗಳಲ್ಲಿ ಬಳೆಯ ಮೂಲಕ ಅವರು ಭಾಗ್ಯ ತಂದುಕೊಡುವವರು. ಈ ಸಮಾಜದವರು ಸುಶಿಕ್ಷಿತರಾಗುತ್ತಿದ್ದು ಮುನ್ನೆಲೆಗೆ ಬರುತ್ತಿರುವುದು ಸಂತಸದ ವಿಚಾರ. | ಪೂರ್ಣಿಮಾ. ಸಹಾಯಕ ನಿರ್ದೇಶಕಿ. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net