

ನಾಪೋಕ್ಲು: ಗ್ರಾಮೀಣ ಭಾಗದ ಜನರು ಆಚರಿಸಿಕೊಂಡು ಬಂದಿರುವ ಜಾನಪದ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಮರೆಯಾಗುತ್ತಿರುವ ಹಿನ್ನೆಲೆಯಲ್ಲಿ ‘ಜಾನಪದ ಸಿರಿ’ಯಂತಹ ಕಾರ್ಯಕ್ರಮ ಅನಿವಾರ್ಯವಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು.
ಸಮೀಪದ ನೆಬ್ಬೂರು ಗ್ರಾಮದಲ್ಲಿ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ನೆಬ್ಬೂರು ಗೌಡ ಸಂಘ ಬಲಮುರಿ ಸಯುಕ್ತಾಶ್ರಯದಲ್ಲಿ ಮಂಗಳವಾರ ಆಯೋಜಿಸಿದ್ದ ‘ಜಾನಪದ ಸಿರಿ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾನಪದ ಸೊಗಡು ಚಿಗುರಬೇಕಾದರೆ ಮಕ್ಕಳಿಗೆ ಇಂತಹ ಜಾನಪದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಅಂತಹ ಕೆಲಸವನ್ನು ನೆಬ್ಬೂರು ಗೌಡ ಸಂಘ ಅರ್ಥಪೂರ್ಣವಾಗಿ ಮಾಡಿದೆ ಎಂದು ಮೆಚ್ಚುಗೆವ್ಯಕ್ತಪಡಿಸಿದರು.
ಸಾಹಿತ್ಯ ಕ್ಷೇತ್ರದಲ್ಲಿ ಕಟ್ಟರತನ ಲಲಿತಾ ಅಯ್ಯಣ್ಣ, ಶಿಕ್ಷಣ ಕ್ಷೇತ್ರದಲ್ಲಿ ಕೊಟ್ಟಕೇರಿಯನ ಶ್ರೀಜಾ ದಯಾನಂದ, ಪೊನ್ನಚನ ತ್ರಿನೇಶ್ ಅಪ್ಪಯ್ಯ, ಕೊಟ್ಟಕೇರಿಯ ಚಂದ್ರಿಕಾ ಧರ್ಮೇಂದ್ರ, ಆರೋಗ್ಯ ಕ್ಷೇತ್ರದಲ್ಲಿ ಕೊಟ್ಟಕೇರಿಯನ ಸುಲೋಚನಾ ಬಾಲಕೃಷ್ಣ, ಕಟ್ರತನ ಪ್ರೇಮಾ ಮಧುರಾಜ್, ಕತ್ರತನ ಕುಸುಮಾ ಸುಲೋಚನಾ, ಕ್ರೀಡಾ ಕ್ಷೇತ್ರದಲ್ಲಿ ಪೊನ್ನಚನ ಬೃಂದಾ ದಿನೇಶ್, ಸೇನಾ ಕ್ಷೇತ್ರದಲ್ಲಿ ಪೊನ್ನಚನ ಪ್ರಶಾಂತ್ ಪೂಣಚ್ಚ, ಪೊನ್ನಚನ ಹಿತನ್ ಕರುಂಬಯ್ಯ ಅವರನ್ನು ಸನ್ಮಾನಿಸಲಾಯಿತು.
ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ನೆಬ್ಬೂರು ಗೌಡ ಸಂಘದ ಅಧ್ಯಕ್ಷ ಕೊಟ್ಟಕೇರಿಯನ ಬಿ. ಲೋಕನಾಥ ಅವರು ಪರೆಗೆ ಭತ್ತ ತುಂಬಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಡಿಕೇರಿ ವಕೀಲರ ಸಂಘದ ಮಾಜಿ ಅಧ್ಯಕ್ಷ ಕೊಟ್ಟಕೇರಿಯನ ದಯಾನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಬಲಮುರಿ ದೇವನೂರು ಗೌಡ ಒಕ್ಕೂಟದ ಅಧ್ಯಕ್ಷರಾದ ಪೊನ್ನಚನ ಜಯ, ಜಿಲ್ಲಾ ಸಾಹಿತ್ಯ ಪರಿಷತ್ತಿನ ಸಮಿತಿ ಸದಸ್ಯೆ ರಮ್ಯಾ, ತಾಲೂಕು ಕಾರ್ಯದರ್ಶಿ ಪುದಿಯ ನೆರವನ ರಿಶಿತ್ ಮಾದಯ್ಯ, ಬಾಳೆಯಡ ದಿವ್ಯಾ ಮಂದಪ್ಪ, ಸಂಘಟನಾ ಕಾರ್ಯದರ್ಶಿಗಳಾದ ಚೊಕ್ಕಡಿ ಪ್ರೇಮಾ ರಾಘವಯ್ಯ ಇತರರಿದ್ದರು.