ಜಾನಪದ ಬಿಟ್ಟು ಬದುಕು ಅಸಾಧ್ಯ: ಚುಂಚಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಮತ

09_12_Mdy_02(A(Janapada Samelana)
Published on

ಮಂಡ್ಯ: ವಿಜ್ಞಾನ ಬೆಳೆದಂತೆ ಎಲ್ಲವೂ ಮರೆಯಾಗುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ ಜಾನಪದ, ನೆಲ, ಸಂಸ್ಕೃತಿ ಬಿಟ್ಟು ಬದುಕು ಅಸಾಧ್ಯ. ಜಾನಪದ ಸಾಹಿತ್ಯ ಎಂದಿಗೂ ಮೂಲಗುಂಪಾಗುವುದಿಲ್ಲ. ಮತ್ತೆ ಮತ್ತೆ ಸಂವೇಧನಾಶೀಲವಾಗುತ್ತದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಿರುವ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿ, ಆಧುನಿಕ ಪ್ರಗತಿಯ ದುರಂತಗಳನ್ನು ಜಾನಪದದ ಕಡೆಗೆ ಹೋದಾಗ ಮಾತ್ರ ತಪ್ಪಿಸಲು ಸಾಧ್ಯ. ನೆಲಮೂಲ ಸಂಸ್ಕೃತಿಯನ್ನು ಬಿಟ್ಟು ಮನುಷ್ಯ ಬದುಕಲಾರ. ಭೂಮಿಯ ಜನಪದ ಬೇರುಗಳು ಕಿತ್ತು ಬೆಳೆಯುತ್ತೇನೆಂದರೆ ಅಸಾಧ್ಯ. ಮನುಷ್ಯನ ಜ್ಞಾನದಿಂದಾಗಿ ತಾಂತ್ರಿಕತೆ ಬೆಳೆದಿದೆ. ಆದರೆ ಅದು ವಿಕೋಪಕ್ಕೆ ತಿರುಗಿ ಯುದ್ಧದಂತಹ ವಿಪ್ಲವಗಳು ನಡೆದಲ್ಲಿ ಇಡೀ ಭೂಮಿಯೇ ನಾಶವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.

ಆಧುನಿಕತೆಯ ಜತೆಗೆ ಜಾನಪದವನ್ನೂ ಮುಂದುವರಿಸಿಕೊಂಡು ಹೋಗಬೇಕಿದೆ. ಪುಸ್ತಕ ಸಂಸ್ಕೃತಿಯನ್ನೂ ಬೆಳೆಸಬೇಕು. ಪುಸ್ತಕ ಕೊಂಡು ಓದುವ ಸಂಖ್ಯೆ ಹೆಚ್ಚಾಗಬೇಕು. ಓದುವ ಸಂಸ್ಕೃತಿ ಬೆಳೆಸಿದಲ್ಲಿ ಸಮಾಜ ಸಂವೇಧನೆಗೊಳಗಾಗುತ್ತದೆ. ಶಿಷ್ಟ ಸಾಹಿತ್ಯ ಬರುವ ಮುನ್ನವೇ ಜನಪದರು ಸೊಗಡಿನ ಸಾಹಿತ್ಯವನ್ನು ಕಟ್ಟಿಕೊಟ್ಟಿದ್ದಾರೆ. ಜನಪದರು ತಮ್ಮ ಕಾಯಕದೊಂದಿಗೆ ಭೂತಾಯಿಗೆ ನಮಿಸುತ್ತಿದ್ದರು. ಶಿಷ್ಟ ಸಾಹಿತ್ಯದಲ್ಲು ಭೂತಾಯಿಯನ್ನು ನಮಿಸುತ್ತೇವೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಜನಪದ ಕಲೆ ಉಳಿಸಲು ಡಾ.ಎಚ್.ಎಲ್. ನಾಗೇಗೌಡ ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದರು. ಜಾನಪದ ಲೋಕವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವಂತಹ ಪ್ರಯತ್ನವನ್ನು ಇಂದು ಈ ಕಾರ್ಯಕ್ರಮ ಮಾಡುತ್ತಿದೆ. ಜಾನಪದ ಸಂಸ್ಕೃತಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಪಸರಿಸಬೇಕು. ಇದಕ್ಕೆ ಬೇಕಾದ ಸಹಕಾರವನ್ನು ಸರ್ಕಾರದ ವತಿಯಿಂದ ನೀಡುತ್ತೇವೆ ಎಂದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿ, ಜಾನಪದ ಕಲೆಯನ್ನು ಉಳಿಸಲು ಇಂದಿನ ದಿನಗಳಲ್ಲಿ ಗಂಭೀರ ಚಿಂತನೆ ನಡೆಯಬೇಕಿದೆ. ಪೂಜಾ ಕುಣಿತ, ಡೊಳ್ಳುಕುಣಿತ, ಇತರ ಕಲೆಗಳನ್ನು ಶಾಲೆಗಳಲ್ಲಿ ಅಭ್ಯಾಸ ಮಾಡಿಸಿ ಆಧುನಿಕ ಕಾಲದಲ್ಲಿ ಜಾನಪದ ಕಲೆಗಳು ಉಳಿಯುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಮುಂದಿನ ಪೀಳಿಗೆಗೂ ಜನಪದದ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನಾಧ್ಯಕ್ಷ ಡಾ.ರಾಗೌ, ಶಾಸಕ ಎಂ.ಶ್ರೀನಿವಾಸ್, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀಪುರುಷೋತ್ತಮಾನಂದನಾಥ ಸ್ವಾಮೀಜಿ, ಜಾನಪದ ಪರಿಷತ್‌ನ ಅಧ್ಯಕ್ಷ ಡಾ.ಹಿ.ಶಿ.ರಾಮಚಂದ್ರೇಗೌಡ, ಡಾ.ಎಚ್.ಎಲ್. ನಾಗೇಗೌಡ ಅವರ ಮೊಮ್ಮಗ ಆದಿತ್ಯ ನಂಜರಾಜ್, ಮಾಜಿ ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶ್‌ಗೌಡ, ಸಂಸ್ಕೃತಿ ಚಿಂತಕ ಪ್ರೊ.ಕೃಷ್ಣೇಗೌಡ, ಕಸಾಪ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ನಗರಸಭಾಧ್ಯಕ್ಷ ಎಚ್.ಎಸ್.ಮಂಜು, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಎಸ್ಪಿ ಎನ್.ಯತೀಶ್, ಜಿಪಂ ಸಿಇಒ ಶಾಂತಾ ಎಲ್.ಹುಲ್ಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net