

ಮಂಡ್ಯ: ಮಂಡ್ಯ ನಗರದಲ್ಲಿ ಡಿ.9 ಮತ್ತು 10ರಂದು ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಮ್ಮೇಳನ ಸ್ವಾಗತ ಸಮಿತಿಯ ಅಧ್ಯಕ್ಷರೂ ಆದ ಶಾಸಕ ಎಂ.ಶ್ರೀನಿವಾಸ್ ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಸ್ವಾಗತ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರ್ನಾಟಕ ಜಾನಪದ ಪರಿಷತ್ ಸಹಯೋಗದಲ್ಲಿ ಪ್ರಥಮ ಬಾರಿಗೆ ಸಮ್ಮೇಳನ ಮಾಡಲಾಗುತ್ತಿದೆ. ಈ ಹಿಂದೆ ನನ್ನ ಅಧ್ಯಕ್ಷತೆಯಲ್ಲಿ ಹಲವು ಸಾಹಿತ್ಯ ಸಮ್ಮೇಳನಗಳು, ಯುವಜನ ಮೇಳಗಳು ಬಹಳ ಅದ್ದೂರಿಯಾಗಿ ನಡೆದಿದ್ದವು. ನಾಲ್ಕೈದು ವರ್ಷದಿಂದ ಕಾರಣಾಂತರಗಳಿಂದ ಯಾವುದೇ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲಾಗಿಲ್ಲ ಎಂಬ ಕೊರಗು ನನ್ನನ್ನು ಕಾಡುತ್ತಿತ್ತು. ಈಗ ಈ ಸಮ್ಮೇಳನದ ಮೂಲಕ ಜಾನಪದ ಕಲಾವಿದರನ್ನು ಗೌರವಿಸುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸಮ್ಮೇಳನ ಅಚ್ಚುಕಟ್ಟು ಹಾಗೂ ಅದ್ದೂರಿಯಾಗಿ ನಡೆಯಬೇಕು. ಕ್ರೀಡಾಂಗಣ ರಿಪೇರಿಯಾಗುತ್ತಿರುವುದರಿಂದ ಮಂಡ್ಯ ವಿಶ್ವವಿದ್ಯಾಲಯದ ಆವರಣ ಅಥವಾ ಕಲ್ಲುಕಟ್ಟಡ ಕಾಲೇಜಿನ ಆವರಣದಲ್ಲಿ ಆಯೋಜಿಸಲು ಚಿಂತಿಸಲಾಗಿದೆ. ಮಳೆಯ ವಾತಾವರಣ ನೋಡಿಕೊಂಡು ಶೀಘ್ರವೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಭಾಗವಹಿಸುವ ಕಲಾವಿದರು, ವಿದ್ವಾಂಸರು ಸೇರಿದಂತೆ ಯಾರೊಬ್ಬರಿಗೂ ಯಾವುದರಲ್ಲಿಯೂ ಕೊರತೆಯಾಗದಂತೆ ನೋಡಿಕೊಳ್ಳಬೇಕು. ಒಟ್ಟಾರೆ ಪಕ್ಷಾತೀತವಾಗಿ ಎಲ್ಲರನ್ನು ಒಳಗೊಂಡಂತೆ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ ಎಂದು ವಿವರಿಸಿದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಂ ರಾಯಪುರ ಮಾತನಾಡಿ, ನೆಲಮೂಲ ಸಂಸ್ಕೃತಿಯ ಹರಿಕಾರರಾದ ಜಾನಪದ ಕಲಾವಿದರು ಈ ನಾಡಿನ ಸಾಂಸ್ಕೃತಿಕ ರಾಯಭಾರಿಗಳು. ಜಾನಪದ ಎಲ್ಲ ಸಾಹಿತ್ಯದ ತಾಯಿಬೇರು. ಅಂತಹ ಜಾನಪದ ಕಲೆ, ಕಲಾವಿದ, ಸಾಹಿತ್ಯದ ವಿಚಾರ ಮಂಥನಗಳು ಈ ಸಮ್ಮೇಳನದಲ್ಲಿ ಮೇಳೈಸುವಂತಾಗಲಿ. ರಾಜ್ಯದ ಎಲ್ಲ ಜಿಲ್ಲೆಯ ವಿದ್ವಾಂಸರು, ಚಿಂತಕರು, ಜಾನಪದ ಸಂಘಟಕರು, ಕಲಾವಿದರನ್ನು ಈ ಸಮ್ಮೇಳನ ಒಳಗೊಳ್ಳುವಂತಾಗಲಿ. ನಾನು ಈ ಸಮ್ಮೇಳನದ ಪೋಷಕನಾಗಿ ಸಕಲ ರೀತಿಯಲ್ಲಿಯೂ ಸಹಕರಿಸುತ್ತೇನೆ ಎಂದು ಭರವಸೆ ನೀಡಿದರು.
ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಈ ಹಿಂದೆ ನಡೆದ ಜಾನಪದ ಕಲಾಮೇಳಗಳಿಗಿಂತ ಈ ಸಮ್ಮೇಳನ ವಿಭಿನ್ನವಾಗಿರುತ್ತದೆ. ಸಾಹಿತ್ಯ, ಸಾಂಸ್ಕೃತಿಕ, ರಾಜಕೀಯ, ಹೋರಾಟ ಕ್ಷೇತ್ರದಲ್ಲಿ ಹಲವು ಪ್ರಥಮಗಳಿಗೆ ಮುನ್ನುಡಿ ಬರೆದಿರುವ ಮಂಡ್ಯ ಈ ಸಮ್ಮೇಳನದ ಮೂಲಕ ಜಾನಪದ ಕ್ಷೇತ್ರದಲ್ಲಿಯೂ ಮುನ್ನುಡಿ ಬರೆಯಲಿದೆ ಎಂದು ಹೇಳಿದರು.
ಸ್ವಾಗತ ಸಮಿತಿ ಉಪಾಧ್ಯಕ್ಷೆ ಮೀರಾ ಶಿವಲಿಂಗಯ್ಯ ಮಾತನಾಡಿ, ಸಮ್ಮೇಳನಕ್ಕೆ ಬರುವ ಕಲಾವಿದರಿಗೆ ನಾನು ವಸತಿ ಕಲ್ಪಿಸುತ್ತೇನೆ. ಜತೆಗೆ, ಸಮ್ಮೇಳನದ ಯಶಸ್ಸಿಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಸ್ವಾಗತ ಸಮಿತಿಯ ಸಂಘಟನಾ ಕಾರ್ಯದರ್ಶಿ ಕೆ.ಎಂ.ಕೃಷ್ಣೇಗೌಡ ಕೀಲಾರ ಅವರು ಎರಡು ದಿನಗಳ ಸಮ್ಮೇಳನದ ಸ್ವರೂಪವನ್ನು ತಿಳಿಸಿದರು. ನೇಗಿಲಯೋಗಿ ಬಳಗದ ಅಧ್ಯಕ್ಷ ಎ.ಸಿ.ರಮೇಶ್, ಖಜಾಂಚಿ ಎಚ್.ಎಂ.ರಾಮಚಂದ್ರು, ಆಹಾರ ಸಮಿತಿ ಅಧ್ಯಕ್ಷ ಡಿ.ಶಿವರಾಜು ಕೀಲಾರ, ಸ್ಮರಣ ಸಂಚಿಕೆ ಸಮಿತಿಯ ಡಾ.ಆರ್.ಪಿ.ಛಾಯಾ, ಪದಾಧಿಕಾರಿಗಳಾದ ಕೋ.ಪು.ಗುಣಶೇಖರ್, ಸಿದ್ದಲಿಂಗು ಶ್ರೀರಂಗಪಟ್ಟಣ, ಮಂಜೇಶ್ ಚನ್ನಾಪುರ, ಕತ್ತರಘಟ್ಟ ವಾಸು, ಮಂಜು ಚಾಮನಹಳ್ಳಿ ಇದ್ದರು.
ಇದೇ ವೇಳೆ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಸಮ್ಮೇಳನಕ್ಕೆ 1 ಲಕ್ಷ ರೂ.ಗಳ ಚೆಕ್ಕನ್ನು ಸ್ವಾಗತ ಸಮಿತಿಯ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು.