

ಬೆಂಗಳೂರು: ಕರ್ನಾಟಕ ಜಾನಪದ ಪರಿಷತ್ತು ಭಾನುವಾರ (ಫೆ.16) ರಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಜಾನಪದ ಲೋಕ ಬೆಳ್ಳಿಹಬ್ಬ ಉದ್ಘಾಟನೆ ಸಮಾರಂಭ ನಡೆಯಲಿದೆ.
ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ‘ಜಾನಪದ ಜಗತ್ತು’ ಬೆಳ್ಳಿ ಹಬ್ಬ ಸಂಚಿಕೆ ಮತ್ತು ಕೃತಿಗಳ ಬಿಡುಗಡೆ ಗೊಳಿಸಲಿದ್ದಾರೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಾನಪದ ಮೆರವಣಿಗೆ ಉದ್ಘಾಟನೆಯನ್ನು ಮೇಯರ್ ಗೌತಮ್ುಮಾರ್ ನೆರವೇರಿಸಲಿದ್ದಾರೆ. ಶಾಸಕ ಉದಯ್ ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ಫೆ.17 ಮತ್ತು 18ರಂದು ಬೆಳಗ್ಗೆ 10ರಿಂದ ರಾತ್ರಿ 9 ಗಂಟೆವರೆಗೆ ರಾಮನಗರದಲ್ಲಿರುವ ಜಾನಪದ ಲೋಕದಲ್ಲಿ ವೈವಿಧ್ಯಮಯ ಜನಪದ ನೃತ್ಯ ಹಾಗೂ ಗೀತಗಾಯನ ಕರಕುಶಲ ಮೇಳದ ಪ್ರಾತ್ಯಕ್ಷಿಕೆ ಪ್ರದರ್ಶನ ಹಾಗೂ ಮಾರಾಟ ನಡೆಯಲಿವೆ. ಜನಪದ ಕಲಾತಂಡಗಳಿಂದ ಮೆರವಣಿಗೆ ಹಾಗೂ ಮೂಲ ಜನಪದ ಕಲಾವಿದರಿಂದ ಜನಪದ ಗೀತೆ ಜೊತೆಗೆ ವಾದ್ಯ, ಕೊಂಬು, ಕಹಳೆ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿ ವಿವಿದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ತಿಮ್ಮೇಗೌಡ ಹೇಳಿದರು.
ಮ್ಯಾನೇಜಿಂಗ್ ಟ್ರಸ್ಟಿ ಆದಿತ್ಯ ನಂಜರಾಜ್, ಕಲಾವಿದ ಜೋಗಿನ್ರಾಜ್ ಸಿದ್ದರಾಜ್ ಮತ್ತಿತರರು ಉಪಸ್ಥಿತರಿದ್ದರು.
ಕಲಾವಿದರಿಗೆ ಲೋಕಶ್ರೀ ಸನ್ಮಾನ: ಜಾನಪದ ಕ್ಷೇತ್ರದಲ್ಲಿ ದುಡಿದ ಹಿರಿಯ ಜಾನಪದ ಕಲಾವಿದರು, ವಿದ್ವಾಂಸರುಗಳಾದ ಗೊ.ರು.ಚನ್ನಬಸಪ್ಪ, ಡಾ.ಸಿದ್ಧಲಿಂಗಯ್ಯ, ಡಾ.ಅಂಬಳಿಕೆ ಹಿರಿಯಣ್ಣ ಸೇರಿ 25 ಕಲಾವಿದರಿಗೆ ಮುಖ್ಯಮಂತ್ರಿಗಳು ಲೋಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ.