ಜಾನಪದ ಕಲೆಯಲ್ಲಿದೆ ಸಂಸ್ಕೃತಿಯ ಸಹಜತೆ..

UDP-27-1-JaanapadaHabba
ಉಡುಪಿಯ ರಾಜಾಂಗಣದಲ್ಲಿ ಆಯೋಜಿಸಿದ್ದ ಜಾನಪದ ಹಬ್ಬವನ್ನು ಸುಗುಣೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಡಾ.ತಲ್ಲೂರು ಶಿವರಾಂ ಶೆಟ್ಟಿ, ನಿವೃತ್ತ ನ್ಯಾಯಾಧೀಶ ಸಂತೋಷ್​ ಹೆಗ್ಡೆ, ವರುಣ್​ ರಾಮದಾಸ್​ ನಾಯಕ್​ ಗುಜ್ಜಾಡಿ, ಮುರಳಿ ಕಡೆಕಾರ್, ಬಿ.ಅರುಣಕುಮಾರ್​ ಹೆಗ್ಡೆ, ಗಿರಿಜಾ ಶೆಟ್ಟಿ, ಸುನೀಲ್​ಕುಮಾರ್​ ಶೆಟ್ಟಿ, ರವಿರಾಜ್​ ನಾಯಕ್​, ಪ್ರಶಾಂತ ಭಂಡಾರಿ ಇದ್ದರು.
Published on

ಸುಗುಣೇಂದ್ರ ತೀರ್ಥ ಶ್ರೀಪಾದರ ಆಶೀರ್ವಚನ

ಜಾನಪದ ಹಬ್ಬ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮನುಷ್ಯನ ಸಹಜವಾದ ಪ್ರವೃತ್ತಿ, ಭಾವನೆ ಹಾಗೂ ಒಳ್ಳೆಯ ಸಂದೇಶ ನೀಡುವ ಶ್ರೇಷ್ಠವಾದ ಕಲೆ ಜಾನಪದವಾಗಿದೆ. ಈ ಕಲೆಯಲ್ಲಿ ನಮ್ಮ ಸಂಸ್ಕೃತಿಯ ಸಹಜತೆ ಕಾಣಬಹುದಾಗಿದೆ ಎಂದು ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಉಡುಪಿಯ ರಾಜಾಂಗಣದಲ್ಲಿ ಪರ್ಯಾಯ ಪುತ್ತಿಗೆ ಶ್ರೀಕೃಷ್ಣ ಮಠ, ಕರ್ನಾಟಕ ಜಾನಪದ ಪರಿಷತ್​ (ರಿ.) ಉಡುಪಿ, ತಲ್ಲೂರು ಫ್ಯಾಮಿಲಿ ಟ್ರಸ್ಟ್​ (ರಿ.) ಹಾಗೂ ಜಾನಪದ ಸಾಹಿತ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಡುಪಿ ವತಿಯಿಂದ ಭಾನುವಾರ ಆಯೋಜಿಸಿದ್ದ ಜಾನಪದ ಹಬ್ಬ-2024 ಉದ್ಘಾಟಿಸಿ ಆಶೀರ್ವಚನ ನೀಡಿದರು.

ಪ್ರಾಚೀನ ಸಂಸ್ಕೃತಿಯ ಜ್ಞಾನಪ್ರದ ಕಲೆ

ಆಧುನಿಕ ಕಲೆಗಳ ಮೂಲಕ ನಾವುಗಳೇ ಕೃತ್ರಿಮತೆ ನಿರ್ಮಿಸುತ್ತಿದ್ದೇವೆ. ಆದರೂ ಪ್ರಾಚೀನ ಜಾನಪದ ಕಲೆಯ ಮೂಲಕ ಮತ್ತೆ ಸಹಜತೆ ತರುತ್ತಿರುವುದು ಅಭಿನಂದನೀಯ. ಇದು ಜಾನಪದ ಕಲೆಯಷ್ಟೇ ಅಲ್ಲ, ಜ್ಞಾನಪ್ರದ ಕಲೆಯೂ ಆಗಿದೆ. ನಮ್ಮ ಪ್ರಾಚೀನ ಸಂಸ್ಕೃತಿಯ ಬಗ್ಗೆ ಒಳ್ಳೆಯ ಜ್ಞಾನ ನೀಡುವ ವಿಶಿಷ್ಟ ಕಲೆಯಾಗಿದೆ ಎಂದು ಶ್ರೀಗಳು ಬಣ್ಣಿಸಿದರು.

ಸುಗುಣೇಂದ್ರ ಶ್ರೀಗಳಿಗೆ ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾ ಅಧ್ಯಕ್ಷ ಡಾ.ತಲ್ಲೂರು ಶಿವರಾಂ ಶೆಟ್ಟಿ ಫಲ-ಪುಷ್ಪ ಸಮರ್ಪಿಸಿದರು. ಅದಾನಿ ಸಮೂಹ ಸಂಸ್ಥೆ ಬೆಂಗಳೂರಿನ ಅಧ್ಯಕ್ಷ ಹಾಗೂ ಕಾರ್ಯ ನಿರ್ವಾಹಕ ನಿರ್ದೇಶಕ ಕಿಶೋರ್​ ಆಳ್ವ ಅಧ್ಯಕ್ಷತೆ ವಹಿಸಿದ್ದರು.

ಸ್ವರ್ಣ ಜುವೆಲರ್ಸ್​ನ ಮುಖ್ಯ ಹಣಕಾಸು ಅಧಿಕಾರಿ ವರುಣ್​ ರಾಮದಾಸ್​ ನಾಯಕ್​ ಗುಜ್ಜಾಡಿ, ಯಕ್ಷಗಾನ ಕಲಾರಂಗದ ಪ್ರ.ಕಾರ್ಯದರ್ಶಿ ಮುರಳಿ ಕಡೆಕಾರ್, ಕರ್ನಾಟಕ ಜಾನಪದ ಪರಿಷತ್​ ಜಿಲ್ಲಾ ಕಾರ್ಯದರ್ಶಿ ಬಿ.ಅರುಣಕುಮಾರ್​ ಹೆಗ್ಡೆ, ತಲ್ಲೂರು ಫ್ಯಾಮಿಲಿ ಟ್ರಸ್ಟ್​ನ ಗಿರಿಜಾ ಶೆಟ್ಟಿ ಉಪಸ್ಥಿತರಿದ್ದರು.

ಪರಿಷತ್​ನ ಜಿಲ್ಲಾ ಕಾರ್ಯದರ್ಶಿ ಸುನೀಲ್​ಕುಮಾರ್​ ಶೆಟ್ಟಿ ಸ್ವಾಗತಿಸಿದರು. ಪರಿಷತ್​ನ ಜಿಲ್ಲಾ ಕಾರ್ಯದರ್ಶಿ ರವಿರಾಜ್​ ನಾಯಕ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಿಷತ್​ನ ಜಿಲ್ಲಾ ಖಜಾಂಚಿ ಪ್ರಶಾಂತ ಭಂಡಾರಿ ವಂದಿಸಿದರು. ಅಮಿತಾಂಜಲಿ ಕಿರಣ್​ ಕಾರ್ಯಕ್ರಮ ನಿರೂಪಿಸಿದರು.

ವೈವಿಧ್ಯಮಯ ಜಾನಪದ ನೃತ್ಯ

ಸಭಾ ಕಾರ್ಯಕ್ರಮದ ಬಳಿಕ ಶಂಕರದಾಸ್​ ನೇತೃತ್ವದಲ್ಲಿ ಮಂಜನಾಥೇಶ್ವರ ಭಜನಾ ಮಂಡಳಿ ತೊಟ್ಟಂ, ನಿಡಿಯೂರಿನ ಪಂಢರೀನಾಥ ಭಜನಾ ಮಂಡಳಿಯಿಂದ ಕುಣಿತ ಭಜನೆ, ನೀಲಾವರದ ಶ್ರೀದೇವಿ ಮರಾಠಿ ಜನಪರ ಮತ್ತು ಸಂಸ್ಕೃತಿ ಕಲಾಸಂಘ ಕೆಳಕುಂಜು ತಂಡದಿಂದ ಹೋಳಿ ಕುಣಿತ, ಮಂಚಿಯ ದಯಾ ನಾಯಕ್​ ಬಳಗದಿಂದ ಗೋಂದೋಳು ನೃತ್ಯ, ಕಲಾಮಯ ಉಡುಪಿ ತಂಡದಿಂದ ನಡೆದ ವೈವಿಧ್ಯಮಯ ಜಾನಪದ ನೃತ್ಯ ಗಮನ ಸೆಳೆಯಿತು.

ಕಾನೂನು ಪಾಲನೆ, ಮೌಲ್ಯ ವರ್ಧನೆ ಅಗತ್ಯ

ನಿವೃತ್ತ ನ್ಯಾಯಾಧೀಶ ಸಂತೋಷ್​ ಹೆಗ್ಡೆ ಮಾತನಾಡಿ, ನಾನು ಲೋಕಾಯುಕ್ತನಾಗಿ ಕರ್ನಾಟಕಕ್ಕೆ ಬಂದಾಗ ಬಹಳ ಅನ್ಯಾಯಗಳನ್ನು ಕಂಡೆ. ಇದು ವ್ಯಕ್ತಿಗಳ ತಪ್ಪಲ್ಲ, ಸಮಾಜದ ತಪ್ಪು. ಈ ಹಿಂದಿನ ಸಮಾಜವು ಒಳ್ಳೆಯ ಕೆಲಸ ಮಾಡಿದವರನ್ನು ಗುರುತಿಸಿ ಸನ್ಮಾನಿಸುತ್ತಿತ್ತು. ತಪ್ಪು ಮಾಡಿದವರನ್ನು ಶಿಸಿ, ಬಹಿಷ್ಕರಿಸುತ್ತಿತ್ತು. ಆದರೆ, ಅದೇ ಸಮಾಜ ಇಂದು ಬಹಳ ಬದಲಾವಣೆ ಕಂಡಿದೆ. ಕೇವಲ ಅಧಿಕಾರ ಮತ್ತು ಶ್ರೀಮಂತಿಕೆ ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ದೊಡ್ಡ ಹುದ್ದೆಗೇರಲು, ಶ್ರೀಮಂತರಾಗಲು ಪೈಪೋಟಿ ನಡೆಯುತ್ತಿದೆ. ಶ್ರೀಮಂತರಾಗುವುದು ತಪ್ಪಲ್ಲ. ಆದರೆ, ಇನ್ನೊಬ್ಬರ ಜೇಬಿಗೆ ಕೈ ಹಾಕದೆ, ಇನ್ನೊಬ್ಬರ ಹೊಟ್ಟೆಗೆ ಕಲ್ಲು ಹಾಕದೆ ಕಾನೂನು ಚೌಕಟ್ಟಿನಲ್ಲಿ ಶ್ರೀಮಂತರಾಗಿ. ನಮ್ಮ ಹಿರಿಯರು ಕಟ್ಟಿದ ಮಾನವೀಯ ಮೌಲ್ಯ ಅಳವಡಿಸಿಕೊಂಡು ಜೀವನ ನಡೆಸಿದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ನೆಲೆಸುತ್ತದೆ ಎಂದರು.

ನಾಡೋಜ ಎಚ್​.ಎಲ್​. ನಾಗೇಗೌಡ ಅವರು 1970ರಲ್ಲಿ ಕರ್ನಾಟಕ ಜಾನಪದ ಪರಿಷತ್​ ಸ್ಥಾಪಿಸಿದ್ದಾರೆ. ಆಧುನಿಕತೆಯ ನಡುವೆ ಮರೆಯಾಗುತ್ತಿರುವ ನಾಡಿನ ಜಾನಪದ ಕಲೆ ಹಾಗೂ ಸಂಸ್ಕೃತಿಯ ರಕ್ಷಣೆಗಾಗಿ ಈ ಪರಿಷತ್​ ಕಾರ್ಯ ನಿರ್ವಹಿಸುತ್ತಿದೆ. ಉಡುಪಿ ಜಿಲ್ಲೆಯಲ್ಲೂ ಸಹ ಈ ಕಲೆಯ ರಕ್ಷಣೆಗಾಗಿ ಜಾನಪದ ಹಬ್ಬ ಆಯೋಜಿಸಲಾಗುತ್ತಿದೆ. | ಡಾ.ತಲ್ಲೂರು ಶಿವರಾಂ ಶೆಟ್ಟಿ. ಜಿಲ್ಲಾಧ್ಯಕ್ಷ, ಕ.ಜಾ.ಪ. ಉಡುಪಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net