

ಮಂಡ್ಯ: ಇಂದಿನ ದಿನಗಳಲ್ಲಿ ಮೂಲ ಜಾನಪದ ನಶಿಸಿ ಹೋಗುತ್ತಿದೆ. ಅದನ್ನು ಉಳಿಸಿ ಬೆಳೆಸಿ ಮತ್ತು ಬಳಸುವುದು ಯುವಜನತೆಯ ಆಸಕ್ತಿ ಮೇಲೆ ನಿಂತಿದೆ. ಆದ್ದರಿಂದ ಯುವ ಸಮೂಹ ಮೊಬೈಲ್‌ಗಳನ್ನು ಅಗತ್ಯತೆಗೆ ಮಾತ್ರ ಬಳಸಿ, ಅತಿಯಾಗಿ ಗೀಳಾಗಿ ಮಾಡಿಕೊಳ್ಳಬೇಡಿ. ಬದಲಿಗೆ ಜಾನಪದವನ್ನು ಕಲಿಯಿರಿ ಎಂದು ಖ್ಯಾತ ಜಾನಪದ ಗಾಯಕ ಮಳವಳ್ಳಿ ಡಾ.ಎಂ.ಮಹದೇವಸ್ವಾಮಿ ಕಿವಿಮಾತು ಹೇಳಿದರು.
ನಗರದ ಪಿಇಎಸ್ ರಂಗಮಂದಿರದಲ್ಲಿ ಜನತಾ ಶಿಕ್ಷಣ ಟ್ರಸ್ಟ್‌ನ ಪಿಇಎಸ್ ವಿಜ್ಞಾನ, ಕಲಾ ಮತ್ತು ವಾಣಿಜ್ಯ ಕಾಲೇಜು ವತಿಯಿಂದ ನಿತ್ಯಸಚಿವ ಕೆ.ವಿ.ಶಂಕರಗೌಡ ಅವರ 27ನೇ ವರ್ಷದ ಸ್ಮರಣಾರ್ಥ ಆಯೋಜಿಸಿದ್ದ ರಾಜ್ಯಮಟ್ಟದ ಜನಪದ ಗೀತೆ ಗಾಯನ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಜನಪದ ಗೀತೆಗಳನ್ನು ಮೂಲ ಜಾನಪದ ದಾಟಿಯಲ್ಲೇ ಹಾಡಿದರೆ ಕೇಳುಗರಿಗೆ ಸೊಗಸು ಎಂದರು.
ನಮ್ಮ ಜೀವನ ತುಂಬ ಕಷ್ಟರವಾಗಿತ್ತು. ಜೋಳಿಗೆ ಹಿಡಿದು ಹಳ್ಳಿ ಹಳ್ಳಿಗಳಲ್ಲಿ ಜಾನಪದ ಗೀತೆಗಳು, ಹಾಡು ಹೇಳಿಕೊಂಡು ಗುರುಗಳ ಸಮ್ಮುಖದಲ್ಲಿ ಮೂಲ ಜಾನಪದವನ್ನು ಕಲಿತು ಕೊಂಡೆವು. ಮಲೈ ಮಹದೇಶ್ವರ ಕಥೆಯನ್ನು ಹೇಳಿ ತಂಬೂರಿ ಮೀಟಿ ಜಾನಪದವನ್ನೇ ಬದುಕು ಮಾಡಿಕೊಂಡೆವು. ತಂದೆ, ತಾಯಿ ಅವರ ಮಾತುಗಳನ್ನು ಯಾರು ಕೇಳುತ್ತೇರೋ ಅವರು ಉದ್ದಾರವಾಗುತ್ತಾರೆ. ಆದ್ದರಿಂದ ಚೆನ್ನಾಗಿ ಓದುವುದರ ಜತೆಗೆ ನಿಮ್ಮ ಕ್ಷೇತ್ರದಲ್ಲಿ ಜಾನಪದ ಕಲೆ ಕಲಿಸುವ ಆಸಕ್ತಿ ಇದ್ದರೆ ಕಲಿಯಿರಿ. ನಗಾರಿ, ತಮಟೆ, ಕೋಲಾಟ ಸಾಕಷ್ಟು ಕಲೆಗಳು ಇವೆ. ಆದ್ದರಿಂದ ಕಲಿಯಿರಿ, ಸಮಾಜದಲ್ಲಿ ಕಳ್ಳರಾಗಬೇಡಿ, ಸುಳ್ಳರಾಗಬೇಡಿ. ಜಾನಪದ ಕಲೆಗಳ ಉಳಿವಿಗಾಗಿ ಮಳವಳ್ಳಿಯಲ್ಲಿ 4 ಎಕರೆ ಭೂಮಿ ನೀಡಿದರೆ ಶಾಲೆ ಕಟ್ಟಿ ಕಲೆಗಳನ್ನು ಇಂದಿನ ತಲೆಮಾರಿಗೆ ಕಲಿಸುವ ಹಂಬಲ ನಮ್ಮಲ್ಲಿದೆ. ಈ ಕಾರ್ಯವನ್ನು ಸರ್ಕಾರ ಮಾಡಬೇಕಿದೆ ಎಂದು ಒತ್ತಾಯಿಸಿದರು.
ಪ್ರಾಂಶುಪಾಲ ಡಾ.ಜೆ.ಮಹಾದೇವ ಮಾತನಾಡಿ, ಜೀವನ ಅನುಭವಗಳ ಆಗರವಾಗಿರುತ್ತದೆ. ಅನುಭವಗಳನ್ನು ಇತರರಿಗೆ ಹೇಳಿ ಮಾರ್ಗದರ್ಶನ ನೀಡುವ ಅಗತ್ಯವಿದೆ. ತಂದೆ, ತಾಯಿ ಅವರ ಆಶಯದಂತೆ ವಿದ್ಯಾರ್ಥಿಗಳು ಮುನ್ನೆಡೆದರೆ ಉತ್ತಮ ಭವಿಷ್ಯ ರೂಪುಗೊಳ್ಳುತ್ತದೆ. ಇಷ್ಟಪಟ್ಟು ಓದಿದರೆ, ಕಷ್ಟಪಟ್ಟು ದುಡಿದರೆ ಎಲ್ಲವೂ ಸುಲಭವಾಗುತ್ತದೆ. ಕಾಲೇಜುಗಳಲ್ಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಸಿಸಿ, ಎನ್.ಎಸ್.ಎಸ್ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಹೆತ್ತವರು, ಕಾಲೇಜಿಗೆ ಕೀರ್ತಿ ತರುವಂತಹ ಸಾಧನೆಗಳನ್ನು ಮಾಡುವ ಹಂಬಲ ನಿಮ್ಮದಾಗಿರಲಿ. ಭವಿಷ್ಯ ಉಜ್ವಲತೆಯಿಂದ ಪ್ರಜ್ವಲಿಸಲಿದೆ ಎಂದು ನುಡಿದರು.
ಪಿಇಟಿ ಜಂಟಿಕಾರ್ಯದರ್ಶಿ ಕೆ.ಆರ್.ದಯಾನಂದ, ಕನ್ನಡ ಪ್ರಾಧ್ಯಾಪಕ ಪ್ರೊ.ನಂದೀಶ್‌ಕುಮಾರ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾ.ಜಿ.ವಿ.ನರಸಿಂಹನ್, ಪ್ರೊ.ಡೇವಿಡ್, ಜಾನಪದ ತಜ್ಞ ಪ್ರೊ.ಮರಿಯಯ್ಯ, ಟ್ರಸ್ಟಿ ಮಹೇಶ್ ಇತರರಿದ್ದರು.
ಇದೇ ಸಂದರ್ಭದಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಗಾಯಕರು ವಿವಿಧ ಜಾನಪದ ಗೀತೆಗಳನ್ನು ಹಾಡಿದರು. ತೀರ್ಪುಗಾರರಾಗಿ ಜಾನಪದ ಗಾಯಕರಾದ ನರಸಿಂಹಮೂರ್ತಿ, ವೈರಮುಡಿ ಕಾರ್ಯನಿರ್ವಹಿಸಿದರು.