

ಮಂಡ್ಯ: ಸಾಹಿತ್ಯದ ಬೆಳೆವಣಿಗೆಗೆ ಜಾನಪದವೇ ಮೂಲ ನೆಲೆಯಾಗಿದೆ ಎಂದು ಕಸಾಪ ಮಾಜಿ ಅಧ್ಯಕ್ಷೆ ಮೀರಾಶಿವಲಿಂಗಯ್ಯ ಹೇಳಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಜಾನಪದ ಪರಿಷತ್ ಜಿಲ್ಲಾ ಮತ್ತು ಮಂಡ್ಯ ತಾಲೂಕು ಘಟಕದಿಂದ ಸೋಮವಾರ ವಿಶ್ವ ಜಾನಪದ ದಿನಾಚರಣೆ ಮತ್ತು ಪದಗ್ರಹಣ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಪ್ರೌಢಶಾಲಾ ವಿದ್ಯಾರ್ಥಿಗೆ ಸಮೂಹ ಜಾನಪದ ಗೀತಾ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಜಾನಪದ ನಮ್ಮ ಬದುಕಿನಲ್ಲಿ ಹಾಸುಹೊಕ್ಕಿದೆ. ಜನರಿಲ್ಲದೆ ಜಾನಪದವಿಲ್ಲ, ಜಾನಪದವಿಲ್ಲದೆ ಜನಸಮೂಹವಿಲ್ಲ. ಕಲೆ, ಸಾಹಿತ್ಯ ಸಂಸ್ಕೃತಿ, ಸಂಸ್ಕಾರ ಬೆಳೆಯಲು ಜಾನಪದವೇ ಮೂಲವಾಗುತ್ತದೆ. ಮಂಡ್ಯ ಜಿಲ್ಲೆಯನ್ನು ಜಾನಪದ ಕಣಜ ಎಂದು ಕರೆಸಿಕೊಳ್ಳುವಂತೆ ಮಾಡಿದ ಎಚ್.ಎಲ್.ನಾಗೇಗೌಡ ಸೇರಿದಂತೆ ಹಲವರನ್ನು ಸ್ಮರಿಸಿಕೊಳ್ಳುವುದು ಅವಶ್ಯ. ಈ ನೆಲದ ಸೊಗಡು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇತ್ತೀಚಿನ ದಿನಗಳಲ್ಲಿ ಮಂಡ್ಯ ಭಾಷೆ, ಸೊಗಡು, ಕಲೆ, ಸಾಹಿತ್ಯವನ್ನು ಸಿನಿಮಾ ಕ್ಷೇತ್ರಗಳಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಪರಿಷತ್ ಜಿಲ್ಲಾಧ್ಯಕ್ಷ ಡಿ.ಪಿ.ಸ್ವಾಮಿ, ರಂಗಭೂಮಿ ಕಲಾವಿದ ಸಂಪಹಳ್ಳಿ ಬಸವರಾಜು, ಪಿಡಿಒ ಸದಾಶಿವಮೂರ್ತಿ, ತಾಲೂಕು ಅಧ್ಯಕ್ಷ ಕಾರಸವಾಡಿ ಮಹದೇವು, ದೇವರಾಜ್ ಕೊಪ್ಪ, ಶೇಖರ್, ಉಮಾಪತಿ, ಸರ್ವಮಂಗಳಾ ಇತರರಿದ್ದರು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.