ತುಳುನಾಡಿನ ಪುರುಷರ ಕುಣಿತಕ್ಕೆ ಪ್ರಥಮ ಗೌರವ

siddha vesha new
Published on

ಮಂಗಳೂರು: ಬೆಳ್ತಂಗಡಿ-ಸುಳ್ಯ ಭಾಗದಲ್ಲಿ ಹೆಚ್ಚು ಪ್ರಚಲಿತವಾಗಿರುವ ಜಾನಪದ ಕಲೆ ಸಿದ್ಧವೇಷ/ಪುರುಷರ ಕುಣಿತಕ್ಕೆ ಇದೇ ಮೊದಲ ಬಾರಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಸುಮಾರು 60 ವರ್ಷ ಈ ಕಲಾ ಪ್ರಕಾರದಲ್ಲಿ ಸೇವೆ ಸಲ್ಲಿಸಿದ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ ಕೊಡಪೊಟ್ಯ ನೇರೊಲ್ದಡಿ ನಿವಾಸಿ 80 ವರ್ಷದ ರುಕ್ಮಯ್ಯ ಗೌಡ (ಬಾಬು) ಪ್ರಶಸ್ತಿಗೆ ಆಯ್ಕೆಯಾಗಿರುವವರು.

ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ‘ವಿಜಯವಾಣಿ’ ರುಕ್ಮಯ್ಯ ಗೌಡ ಅವರನ್ನು ಮಾತನಾಡಿಸಿದಾಗ, ‘ಮಕ್ಕಳಾಟದ ಸಮಯದಲ್ಲಿ ಅಜ್ಜನಿಂದ ಕಲಿತ ಸಿದ್ಧವೇಷವನ್ನು ಮೂರು ವರ್ಷದ ಹಿಂದಿನ ವರೆಗೂ ಮಾಡಿದ್ದೇನೆ. ಈ ಕಲಾ ಆಚರಣೆ ಇರುವುದು ವರ್ಷದಲ್ಲಿ ಕೆಲವೇ ದಿನ. ಸಿದ್ಧವೇಷ ಕಲೆಯಲ್ಲಿ ಪ್ರಮುಖ ಪಾತ್ರವಾದ ಸನ್ಯಾಸಿ ವೇಷವೇ ನನಗೆ ಅಚ್ಚುಮೆಚ್ಚು. ಈಗಲೂ ಪಾತ್ರ ಮಾಡಬೇಕೆನ್ನುವ ಉತ್ಸಾಹವಿದೆ, ಆದರೆ ದೇಹ ಕೇಳುತ್ತಿಲ್ಲ. ಇದರ ಹೊರತಾಗಿಯೂ ಮಕ್ಕಳೊಂದಿಗೆ ಒಂದು ಬಾರಿ ಹೋಗಿ ನೋಡಿ ಬರುತ್ತೇನೆ’ ಎಂದು ಪ್ರತಿಕ್ರಿಯಿಸಿದ್ದಾರೆ.

ಸಿದ್ಧವೇಷ: ಬೆಳ್ತಂಗಡಿ, ಪುತ್ತೂರು, ಸುಳ್ಯ ಭಾಗದಲ್ಲಿ ಊರವರು ಸುಗ್ಗಿ ಹುಣ್ಣಿಮೆ ಸಂದರ್ಭ ಸುಗ್ಗಿ ತಿಂಗಳಲ್ಲಿ ಕೃಷಿ ಚಟುವಟಿಕೆ ಮುಗಿದ ನಂತರ ಮೂರು ಅಥವಾ ಐದು ದಿನ ಮನೆಮನೆಗಳಿಗೆ ಹೋಗಿ ಕುಣಿತ ಸಹಿತ ಆಚರಿಸುವ ಜಾನಪದ ಕಲಾಪ್ರಕಾರವೇ ಸಿದ್ಧವೇಷ. ಸುಳ್ಯ ಭಾಗದಲ್ಲಿ ಇದನ್ನು ಸಿದ್ಧವೇಷ ಎಂದು ಕರೆದರೆ ಬೆಳ್ತಂಗಡಿ-ಪುತ್ತೂರು ಭಾಗದಲ್ಲಿ ಪುರುಷ ವೇಷ ಎನ್ನುತ್ತಾರೆ. ರಾತ್ರಿಯಿಂದ ಬೆಳಗ್ಗಿನವರೆಗೆ ನಡೆಯುವ ಈ ಕುಣಿತ ಆಚರಣಾತ್ಮಕವೂ, ಹೌದು ಮನೋರಂಜನೆಯೂ ಹೌದು. ನಾಥ ಪಂಥದ ಪ್ರಚಾರ ಇದರ ಹಿಂದಿನ ಉದ್ದೇಶ ಎನ್ನುವುದು ಐತಿಹ್ಯ. 10-15 ವೇಷಧಾರಿಗಳ ಸಹಿತ ನೂರಾರು ಮಂದಿ ಒಟ್ಟಾಗಿ ಊರಿನ ಗುತ್ತಿನ ಮನೆಯಿಂದ ಆರಂಭಿಸಿ ಮನೆ ಮನೆಗೆ ಕುಣಿತ ಮಾಡಿಕೊಂಡು ಹೋಗಿ ಪ್ರತಿಯೊಂದು ಮನೆಯಲ್ಲೂ ತಾವು ಧರಿಸಿದ ಪಾತ್ರದ ಪ್ರದರ್ಶನವನ್ನು ನೀಡುತ್ತಾರೆ. ನಾಥ ಪಂಥದ ಪ್ರಮುಖ ದೇವರು ಕದ್ರಿ ಮಂಜುನಾಥನನ್ನು ಮನೆಮನೆಗೆ ತಲುಪಿಸುವ ಕಾರ್ಯ ಇಲ್ಲಿ ನಡೆಯುತ್ತದೆ.

ಜಾನಪದ ಅಕಾಡೆಮಿ ಪ್ರಶಸ್ತಿ ಬಂದಿರುವುದು ತುಂಬಾ ಖುಷಿ ತಂದಿದೆ. ನಮ್ಮಂತಹ ಹಳ್ಳಿಯ ಕಲಾವಿದರಿಗೆ ಇಂತಹ ಪ್ರಶಸ್ತಿಯೊಂದು ಬರುತ್ತದೆ ಎನ್ನುವ ನಿರೀಕ್ಷೆಯೇ ಇರಲಿಲ್ಲ. ಸಣ್ಣವನಿದ್ದಾಗ ಅಜ್ಜನಿಂದ ನೋಡಿ ಕಲಿತ ಕಲೆಯನ್ನು ಇಂದು ನನ್ನಿಂದ ಮೊಮ್ಮಗ ಕಲಿತು ಮುಂದುವರಿಸುತ್ತಿದ್ದಾನೆ. - ರುಕ್ಮಯ್ಯ ಗೌಡ, ಸಿದ್ಧವೇಷ ಕಲಾವಿದ

ಸಂಸ್ಕೃತಿ ಪಾಠ ಹೇಳುವ ದೈವನರ್ತಕ ಉಡುಪಿ: 45 ವರ್ಷದಿಂದ ದೈವನರ್ತಕನಾಗಿ ಸೇವೆ ಸಲ್ಲಿಸುತ್ತಿರುವ ಅಲೆವೂರು ಮಂಚಿಕೆರೆಯ ಸಾಧು ಪಾಣಾರ (64) ಅವರಿಗೂ ಜಾನಪದ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಹಿರೇಬೆಟ್ಟುವಿನ ದೋಗು ಪಾಣಾರ ಮತ್ತು ಖರ್ಗಿ ಪಾಣಾರ ದಂಪತಿಯ 6 ಮಕ್ಕಳಲ್ಲಿ ಹಿರಿಯರಾದ ಸಾಧು ಪಾಣಾರ ವಂಶಪಾರಂಪರ‌್ಯವಾಗಿ ಬಂದ ಭೂತಕೋಲದ ವೃತ್ತಿಯನ್ನು ಮುಂದುವರಿಸಿಕೊಂಡು ಬಂದದ್ದು ಮಾತ್ರವಲ್ಲದೆ ಹಲವರಿಗೆ ಸಂಸ್ಕೃತಿ ಪರಿಚಯಿಸಿದವರು. ಅವಿಭಜಿತ ದ.ಕ. ಜಿಲ್ಲೆಯಲ್ಲಿ ಪ್ರಮುಖ ದೈವ ನರ್ತಕನಾಗಿರುವ ಸಾಧು ಅವರು ದೈವಸ್ಥಾನಗಳ ಪಾರಂಪರಿಕ ಮಾಹಿತಿಯನ್ನು ನಿಖರವಾಗಿ ತಿಳಿದವರು. ಚಂದ್ರೇಶ್ವರ, ಅನಂತೇಶ್ವರ ದೇವಸ್ಥಾನಕ್ಕೆ ಸಂಬಂಧಿಸಿದ ಕಲ್ಕುಡ ದೈವಸ್ಥಾನ, ಕಲ್ಮಾಡಿ ಬಗ್ಗು ಪಂಜುರ್ಲಿ ದೈವಸ್ಥಾನ, ಮಂಚಿ ದೈವಸ್ಥಾನ, ಇಂದ್ರಾಳಿ ಪಿಲಿಚಾಮುಂಡಿ ದೈವಸ್ಥಾನ, ಬನ್ನಂಜೆ ಕಲ್ಕುಡ ದೈವಸ್ಥಾನ, ಪುತ್ತಿಗೆ ಮಠದ ಆಡಳಿತಕ್ಕೆ ಒಳಪಟ್ಟ ಪಣಿಯಾಡಿ ದೈವಸ್ಥಾನಗಳಲ್ಲಿ ದೈವ ನರ್ತಕನಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಿಲ್ಲೆಯ ಪ್ರಮುಖ ದೈವಗಳ ನೆಲೆಬೀಡು (ಗಡಿಪಾಡಿ ಜಾಗ)ದಲ್ಲಿ ವಾರ್ಷಿಕ ನೇಮೋತ್ಸವಗಳು ಪಾಣಾರ ನೇತೃತ್ವದಲ್ಲೇ ನಡೆಯುತ್ತಿರುವುದು ವಿಶೇಷ. ಇವರು ಕೋರ್ದಬ್ಬು ದೈವ ಹೊರತು ಪಡಿಸಿ ಉಳಿದ ಎಲ್ಲ ದೈವಸ್ಥಾನಗಳಲ್ಲಿ ಭೂತಕೋಲದಲ್ಲಿ ಸೇವೆಗೈದಿದ್ದಾರೆ. ಪುತ್ರ ದಿನೇಶ್ ಪಾಣಾರ ಅಪ್ಪನ ಕಲಾಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಪತ್ನಿ ವಸಂತಿ ಪಾಣಾರ ಹಾಗೂ ಇಬ್ಬರು ಹೆಣ್ಮಕ್ಕಳು ಇದ್ದಾರೆ.

ದೈವಾರಾಧನೆಗೆ ಕರಾವಳಿಯ ಜಾನಪದ ಹಾಗೂ ಧಾರ್ಮಿಕ ವಲಯದಲ್ಲಿ ವಿಶಿಷ್ಟ ಸ್ಥಾನವಿದೆ. ದೈವ ನರ್ತಕರಿಗೆ ಹಲವು ಕಟ್ಟುಪಾಡುಗಳಿದ್ದು, ಚಾಚೂ ತಪ್ಪದೆ ಪಾಲಿಸಬೇಕು. ಈ ಸಂಸ್ಕೃತಿ ಮುಂದುವರಿಸಲು ಹೊಸ ಪೀಳಿಗೆಯನ್ನು ರೂಪಿಸುವ ಜವಾಬ್ದಾರಿಯೂ ಹಿರಿಯರ ಮೇಲಿದೆ. ನನಗೆ ವಯಸ್ಸಾಗುತ್ತಿದೆ. ಕೆಲಸವನ್ನು ಗುರುತಿಸಿ ಸರ್ಕಾರ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. - ಸಾಧು ಪಾಣಾರ, ಜಾನಪದ ಅಕಾಡೆಮಿ ಪ್ರಶಸ್ತಿ ಪುರಸ್ಕೃತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net