ಕರ್ನಾಟಕದಲ್ಲಿ ಜಾನಪದ ಶ್ರೀಮಂತವಾಗಿದೆ

janapada
Published on

ಕುಶಾಲನಗರ:

ವಿಶ್ವದಲ್ಲೇ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ ಎಂದು ಶಿರಂಗಾಲ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಹಂಡ್ರAಗಿ ನಾಗರಾಜ್ ಹೇಳಿದರು. ಕುಶಾಲನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಗುರುವಾರ ಸಂಜೆ ಕುಶಾಲನಗರ ಸಮೀಪದ ಗುಮ್ಮನಕೊಲ್ಲಿಯ ಬೃಂದಾವನ ಬಡಾವಣೆಯಲ್ಲಿ ಆಯೋಜಿಸಿದ್ದ ಚೆರಿಯಮನೆ ಕೃಷ್ಣಪ್ಪ ಮರಗೋಡು ದತ್ತಿ ಕಾರ್ಯಕ್ರಮದಲ್ಲಿ ಜಾನಪದ ಕುರಿತು ಉಪನ್ಯಾಸ ನೀಡಿದರು.

ಜಾನಪದ ಗೀತೆಗಳನ್ನು ರಚಿಸಿದವರು ಯಾರೆಂದು ಎಲ್ಲೂ ಉಲ್ಲೇಖವಾಗಿಲ್ಲ. ಜಾನಪದವನ್ನು ಈಗಲೂ ಗ್ರಾಮೀಣ ಭಾಗಗಳಲ್ಲಿ ಕೇಳಬಹುದು. ಇದನ್ನು ಮನುಷ್ಯ ಜೀವನದ ಎಲ್ಲ ಘಟ್ಟಗಳಲ್ಲೂ ಬಳಸುತ್ತಾರೆ. ಸುಖ, ದುಃಖಗಳ ಸಂದರ್ಭಗಳ ಅನುಸಾರ ಸ್ಥಳದಲ್ಲೇ ಗೀತೆಗಳನ್ನು ರಚಿಸಿ ಹಾಡುವ ಅದ್ಬುತ ಜ್ಞಾನ ಹೊಂದಿರುವ ಜನರನ್ನು ಕಾಣಬಹುದು. ಜಾನಪದ ಗೀತೆಗಳನ್ನು ಹೆಚ್ಚಾಗಿ ಗ್ರಾಮೀಣ ಜನರು ಬಳಸಿ, ತಾನು ಮಾಡುವ ಕೆಲಸಗಳಲ್ಲಿ ತನ್ಮಯತೆ ಮತ್ತು ಶಕ್ತಿ ಪಡೆಯುತ್ತಾರೆ ಅಂತಹ ಶ್ರೇಷ್ಠ ಶಕ್ತಿಯಿದೆ ಎಂದರು.

ನಿವೃತ್ತ ಶಿಕ್ಷಕಿ ಉಮಾದೇವಿ ಸೋಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಜಾನಪದ ಸಂಸ್ಕೃತಿ ವಿಶ್ವದ ಅನೇಕ ಭಾಷೆಗಳಿಗೆ ಭಾಷಾಂತರವಾಗಿ ಎಲ್ಲರ ಗಮನ ಸೆಳೆಯುವ ಅಗಾಧ ಶಕ್ತಿಯಿದೆ. ಅನಕ್ಷಸ್ಥರೇ ರಚಿಸಿ, ಹಾಡುವ ಗೀತೆಗಳಲ್ಲಿ ಅನೇಕ ಅರ್ಥಗಳು ಇರುತ್ತವೆ. ಹುಟ್ಟಿನಿಂದ ಸಾವಿನ ತನಕ ಮನುಷ್ಯ ಜೀವನವನ್ನು ಕೇವಲ 2 ರಿಂದ 3 ಪದ್ಯಗಳಲ್ಲಿ ವಿವರಿಸುವ ತಾಕತ್ತು ಇರುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಸಾಪ ಅಧ್ಯಕ್ಷ ಕೆ.ಎಸ್. ನಾಗೇಶ್ ಮಾತನಾಡಿ, ಕನ್ನಡ ಸಾರಸತ್ವ ಲೋಕದಲ್ಲಿ ಜಾನಪದಕ್ಕೆ ವಿಶೇಷ ಸ್ಥಾನಮಾನವಿದೆ. ಇಲ್ಲಿಯ ಆಚಾರ ವಿಚಾರಗಳನ್ನು ವಿಶ್ವಕ್ಕೆ ಪರಿಚಯಿಸಿದ ಹೆಗ್ಗಳಿಕೆಯಿದೆ. ಕನ್ನಡ ಭಾಷೆಯ ಶ್ರೇಷ್ಠತೆಯನ್ನು ಗಮನಿಸಿದ ಹಲವು ವಿದೇಶಿಯರು ಅಧ್ಯಯನ ಮಾಡಿರುವ ಹಲವು ಉದಾಹರಣೆಗಳು ಇವೆ. ಇಲ್ಲಿಯ ಶ್ರೇಷ್ಠತೆಗಾಗಿ ಸಾಹಿತ್ಯ ಲೋಕದ ಅತ್ಯುನ್ನತ 8 ಜ್ಞಾನಪೀಠ ಪ್ರಶಸ್ತಿ ಲಾಭಿಸಿರುವುದೇ ಸಾಕ್ಷಿ ಎಂದರು.

ಕಾರ್ಯಕ್ರಮ ಅಂಗವಾಗಿ ಬಡಾವಣೆ ನಿವಾಸಿಗಳಾದ ಉಮಾವತಿ, ವನಿತಾ, ರಾಣಿ, ಲೀಲಾ ಜಾನಪದ ಗೀತೆಗಳನ್ನು ಪ್ರಸ್ತುತಪಡಿಸಿದರು. ಯುವ ಪೀಳಿಗೆಯ ಕೆಲವರು ಜಾನಪದ ನೃತ್ಯಗಳನ್ನು ಪ್ರದರ್ಶನ ನೀಡಿದರು. ಅನುಸೂಯ ಶಿವಣ್ಣ, ಮೀನಾಕ್ಷಿ, ಪೂವಯ್ಯ ಹಾಗೂ ಕಲ್ಲೂರು ನಾಣಯ್ಯ ತಮ್ಮ ಮನೆಯಲ್ಲಿ ಇದ್ದ ಪುರಾತನ ಕಾಲದ ಪರಿಕರಗಳ ಪ್ರದರ್ಶನ ಏರ್ಪಡಿಸಿದ್ದರು. ಭತ್ತ, ರಾಗಿ, ಸಗಣಿಯ ರಾಶಿ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿತು.

ಕಸಾಪ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್. ದೇವರಾಜ್, ಎಂ.ಎನ್. ಕಾಳಪ್ಪ, ಜಗನ್ನಾಥ್, ಮಹೇಂದ್ರ, ಆಕಾಶ್, ಕಸಾಪ ಪ್ರಧಾನ ಕಾರ್ಯದರ್ಶಿ ಶೈಲಾ, ಖಜಾಂಚಿ ಕೆ.ವಿ. ಉಮೇಶ್, ನಿರ್ದೇಶಕಿ ಬಿ.ಬಿ. ಹೇಮಲತಾ, ಹೆಬ್ಬಾಲೆ ಹೋಬಳಿ ಘಟಕದ ಅಧ್ಯಕ್ಷ ಎಂ.ಎನ್. ಮೂರ್ತಿ, ಕಾರ್ಯದರ್ಶಿ ಸುಬ್ರಮಣಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net