

ಮಡಿಕೇರಿ:
ಕುಶಾಲನಗರ ಹೊರವಲಯದಲ್ಲಿರುವ ವೀರಭೂಮಿ ಜನಪದ ಗ್ರಾಮದಲ್ಲಿ ಶನಿವಾರ ದಿನಪೂರ್ತಿ ಜನಪದ ಕಲಾವಿದರದ್ದೇ ಕಲರವ. ಜನಪದ ಸಿರಿ ಕನ್ನಡ ಸಂಘಟನೆಯಿAದ ಇಲ್ಲಿ ಆಯೋಜಿಸಿದ್ದ ಹಿ.ಚಿ. ಹಬ್ಬ ಮತ್ತು ಜನಪದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತದಿAದ ಆಗಮಿಸಿದ್ದ ನೆಲಮೂಲ ಸಂಸ್ಕೃತಿ ಬಿಂಬಿಸುವ ನೂರಾರು ಕಲಾವಿದರು ತಮ್ಮ ಶ್ರೀಮಂತ ಕಲೆಗಳನ್ನು ಇಲ್ಲಿ ಅದ್ಭುತವಾಗಿ ತೆರೆದಿಟ್ಟರು.
ಬೆಳಗ್ಗೆ ನಡೆದ ಕಾರ್ಯಕ್ರಮದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ನಗಾರಿ ಬಾರಿಸುವ ಮೂಲಕ ಜನಪದ ಸಿರಿ ಸಂಭ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ಜಾನಪದ ಕಲೆ ಮತ್ತು ಕಲಾವಿದರನ್ನು ಗುರುತಿಸಿ ಬೆಳಕಿಗೆ ತರುವ ಅಗತ್ಯತೆಯನ್ನು ಪ್ರತಿಪಾದಿಸಿದರು. ಇದಕ್ಕೂ ಮೊದಲು ಮಾತನಾಡಿದ ಕಾರ್ಯಕ್ರಮ ಸಂಘಟಕ ಜನಪದ ಸಿರಿ ತಂಡದ ಪ್ರಮುಖರಾದ ಜರಗನಹಳ್ಳಿ ಕಾಂತರಾಜು, ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳು, ಕರ್ನಾಟಕ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷರೂ ಆಗಿರುವ ಡಾ. ಹಿ.ಚಿ. ಬೋರಲಿಂಗಯ್ಯ ಅವರಿಗೆ 70 ವರ್ಷ ಸಂದಿರುವ ಹಿನ್ನೆಲೆಯಲ್ಲಿ ಈ ಆಚರಣೆ ಹಮ್ಮಿಕೊಳ್ಳಲಾಗಿದೆ. ಶಾಸ್ತ್ರೀಯ ಕಲಾವಿದರಿಗೆ ದೊರಕುವ ಎಲ್ಲ ರೀತಿಯ ಸೌಲಭ್ಯಗಳು ಜಾನಪದ ಕಲಾವಿದರಿಗೂ ಲಭಿಸಬೇಕು ಎನ್ನುವ ಉದ್ದೇಶದೊಂದಿಗೆ ಕಳೆದ ನಾಲ್ಕು ದಶಕಗಳಿಂದ ಪಶ್ಚಿಮ ಘಟ್ಟಗಳ ಅರಣ್ಯಗಳ ನಡುವೆ ಅಲೆದು ಬುಡಕಟ್ಟು ಜನರ ಸಂಪರ್ಕ ಮಾಡುವ ಮೂಲಕ ಅಜ್ಞಾತವಾಗಿದ್ದ ಹಲವು ಪ್ರಕಾರದ ಜಾನಪದ ಸಿರಿಸಂಪತ್ತನ್ನು ನಾಡಿಗೆ ಪರಿಚಯಿಸಿದ ಡಾ. ಬೋರಲಿಂಗಯ್ಯ ಎಲ್ಲರಿಗೂ ಮಾದರಿಯಾಗಿದ್ದಾರೆ.
ಇಂದಿನAತೆ ಸಾಮಾಜಿಕ ಮಾಧ್ಯಮಗಳು, ವಾಹನ ಸೌಕರ್ಯಗಳು ಇಲ್ಲದಿದ್ದ ದಿನಗಳಲ್ಲೇ ಬೆಟ್ಟ, ಗುಡ್ಡಗಳಲ್ಲಿ ಸುತ್ತಾಡಿ ಈ ನೆಲದÀ ಮೂಲ ಸಂಸ್ಕೃತಿ ಹೊಂದಿರುವ ಬುಡಕಟ್ಟು ಜನರ ಜಾನಪದವನ್ನು ಶ್ರಮವಹಿಸಿ ಸಂಗ್ರಹಿಸುವ ಕೆಲಸವನ್ನು ಬೋರಲಿಂಗಯ್ಯ ಮಾಡಿದ್ದರು. ಬೋರಲಿಂಗಯ್ಯ ಗುರುತಿಸಿದ್ದ ಬುಡಕಟ್ಟು ಜನಾಂಗದ ಪೈಕಿ 3 ಜನಾಂಗ ಈಗಾಗಲೇ ಅಳಿದು ಹೋಗಿದೆ. ವಿನಾಶದ ಅಂಚಿನಲ್ಲಿ ಇರುವ ಬುಡಕಟ್ಟು ಜನಾಂಗಗಳನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಕೊಡಗಿನ ಕಲಾವಿದೆ ರಾಣಿ ಮಾಚಯ್ಯ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೇಶವ ಕಾಮತ್, ಜಾನಪದ ತಜ್ಞ ಡಾ. ಕಾಳೇಗೌಡ ನಾಗವಾರ ಹಾಗೂ ವಿವಿಧೆಡೆಯ ಹಿರಿಯ ಕಲಾವಿದರು ಈ ಸಂದರ್ಭ ಇದ್ದರು.
ರಾಜ್ಯದ ಬೇರೆ ಬೇರೆ ಕಡೆಗಳಿಂದ ಆಗಮಿಸಿದ್ದ 10 ವಿವಿಧ ಬುಡಕಟ್ಟು ಜನಾಂಗದದ ಜಾನಪದ ಕಲಾವಿದರು ತಮ್ಮ ನೆಲದ ಜಾನಪದ ಕಲೆಗಳನ್ನು ಇಲ್ಲಿ ಪ್ರದರ್ಶಿಸಿದ್ದು ವಿಶೇಷವಾಗಿತ್ತು. ಕರ್ನಾಟಕ ಮತ್ತು ಹೊರ ರಾಜ್ಯದ ವಿವಿಧ ಕಲಾ ತಂಡಗಳ ಕಲಾವಿದರೂ ಪ್ರದರ್ಶನ ನೀಡಿದರು. ಸೋಬಾನೆ ಪದ, ಡೊಳ್ಳು ಕುಣಿತ, ಧ್ವಜ ನೃತ್ಯ, ಪೂಜಾ ಕುಣಿತ ಸೇರಿದಂತೆ ಹಲವು ಪ್ರಕಾರದ ಪ್ರದರ್ಶನಗಳು ಇದ್ದವು. ಇದೇ ವೇಳೆ ಬೆಂಗಳೂರಿನ ಯೋಗ ಸಾಧಕಿ ಎಸ್. ಹಿರೇಮಠ, ಜಾನಪದ ಕಲೆಗಳ ಪರಿಚಾರಕ ಹೆಚ್.ಆರ್. ನಾಗೇಂದ್ರ, ಜನಪದ ಗಾಯಕ ಆರ್. ಮಹೇಂದ್ರ, ಜಾನಪದ ಶೈಲಿಯ ಗೀತ ರಚನೆಕಾರ ಆರ್. ರವಿಕುಮಾರ್ ಸೇರಿದಂತೆ 30 ಜಾನಪದ ಸಾಧಕರನ್ನು 'ನೆಲ ಮೂಲ ಸಂಸ್ಕೃತಿಯ ಪ್ರತಿನಿಧಿಗಳು' ಎಂದು ಸನ್ಮಾನಿಸಿ ಗೌರವಿಸಲಾಯಿತು