

ಕುಮಟಾ: ಸಂಸ್ಕೃತವೆಂಬ ದೇವಭಾಷೆಗೆ ಸಂಗೀತವೆಂಬ ಭಾವ ಭಾಷೆ ಮೇಳೈಸಿದಾಗ ಸೌಜನ್ಯದ ಸಂಪತ್ತು ವರ್ಧಿಸುತ್ತದೆ ಎಂದು ಸಾಹಿತಿ ರೋಹಿದಾಸ ನಾಯ್ಕ ಹೇಳಿದರು.
ಕತಗಾಲದ ಕಲಾಶ್ರೀ ಸಾಂಸ್ಕೃತಿಕ ವೇದಿಕೆಯ ಸತ್ಸಂಗ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯ ಮಟ್ಟದ ಸಂಗೀತ ಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಮನಸು ಪರಿಶುದ್ಧವಾಗಿರುತ್ತದೆ. ಅವರಿಗೆ ಜನನಿಯೇ ಮೊದಲನೇ ಸಂಗೀತ ಗುರು. ಜಾತಿ, ಲಿಂಗ, ಮೇಲು- ಕೀಳು, ಭೇದ- ಭಾವ ಸಂಗೀತಕ್ಕಿಲ್ಲ. ಚಿಕ್ಕ ಗುರುಕುಲದಂತಿರುವ ಈ ಸಂಸ್ಕಾರ ಶಿಬಿರದಲ್ಲಿ ಮಕ್ಕಳ ಮುಗ್ಧತೆಯನ್ನು ಸವಿಯಲು ಅವಕಾಶವಿರುತ್ತದೆ ಎಂದರು.
ಹುಬ್ಬಳ್ಳಿಯ ಗಂಗೂಬಾಯಿ ಹಾನಗಲ್ಲ ವಿದ್ಯಾಲಯದ ಸಂಗೀತ ಶಿಕ್ಷಕಿ ವೈಷ್ಣವಿ ಹಾನಗಲ್ಲ ಮಾತನಾಡಿ, ಅಪರೂಪದ ಅವಕಾಶ ಈ ಶಿಬಿರದಲ್ಲಿದೆ. ಸೌಹಾರ್ದಯುತ ಜೀವನಕ್ಕಾಗಿ ಇಂತಹ ಶಿಬಿರ ಉಪಕಾರಿಯಾಗಲಿದೆ. ಪುಸ್ತಕ ಪ್ರಕಟಣೆ ಮತ್ತು ವಿಶೇಷ ಶಿಬಿರಗಳ ಮೂಲಕ ಕಲಾಶ್ರೀ ವೇದಿಕೆಯು ಕತಗಾಲ ಗ್ರಾಮವನ್ನು ಬೆಳಗಿಸಿದೆ ಎಂದರು.
ದೇವಿ ಭಟ್ಟ ಮಾತನಾಡಿದರು. ಆದಿತ್ಯ ಬಿರಜೇಕರ ವಂದಿಸಿದರು. ಶಾರದಾ ಗೋವಿಂದಯ್ಯ, ಶ್ರೀನಂದ ಷಡಕ್ಷರಿ, ಮಾರುತಿ ನಾಯ್ಕ, ಸುಮಂಗಲಾ ಭಟ್ಟ, ಭವಾನಿ ಗೋಂದಕರ, ಅಶೋಕ ಭಟ್ಟ ಇದ್ದರು. ಕಲಾಶ್ರೀ ಅಧ್ಯಕ್ಷ ಎಚ್.ಎನ್. ಅಂಬಿಗ ಸ್ವಾಗತಿಸಿದರು. ಶಿಬಿರ ಸಂಯೋಜಕ ಡಾ. ಕೆ. ಗಣಪತಿ ಭಟ್ಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುವರ್ಣಾ ಭಟ್ಟ ಕಡತೋಕಾ ನಿರೂಪಿಸಿದರು.