ದಲಿತರಿಗೆ ಮಕ್ಮಲ್​ ಟೋಪಿ ಹಾಕಿದ 'ಕೈ' ಸರ್ಕಾರ...

BJP Lead
Published on

ವಿಪ ಸದಸ್ಯ ಎನ್​.ರವಿಕುಮಾರ್​ ಆಕ್ರೋಶ

ಉಡುಪಿ ಡಿಸಿ ಕಚೇರಿ ಬಳಿ ಬಿಜೆಪಿ ಜನಾಂದೋಲನ

ವಿಜಯವಾಣಿ ಸುದ್ದಿಜಾಲ ಉಡುಪಿ

ದಲಿತ ವಿರೋಧಿ ಧೋರಣೆ ಕಾಂಗ್ರೆಸಿನ ಪರಂಪರಾಗತ ಸಂಪ್ರದಾಯವಾಗಿದೆ. ಆ ಗುಣ ಎಂದೂ ಬದಲಾಗದು. ರಾಜ್ಯ ಕಾಂಗ್ರೆಸ್​ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ಕಲ್ಯಾಣಕ್ಕಾಗಿ 2024-25ನೇ ಸಾಲಿನ ಬಜೆಟ್​ನಲ್ಲಿ 39 ಸಾವಿರ ಕೋಟಿ ರೂ. ಮೀಸಲಿಟ್ಟ ಹೆಗ್ಗಳಿಕೆ ಇದೆ. ಆದರೆ, ಇನ್ನೂ 19 ಸಾವಿರ ಕೋಟಿ ರೂ. ಅನುದಾನ ಖರ್ಚೇ ಮಾಡಿಲ್ಲ. ಇದೀಗ ಖಜಾನೆ ಖಾಲಿಯಾಗಿದ್ದು, ದಲಿತರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಮಕ್ಮಲ್​ ಟೋಪಿ ಹಾಕಿದೆ ಎಂದು ಬಿಜೆಪಿಯ ವಿಪ ಸದಸ್ಯ ಎನ್​.ರವಿಕುಮಾರ್​ ಆಕ್ರೋಶ ವ್ಯಕ್ತಪಡಿಸಿದರು.

BJP 2
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದ್ದು, ತನ್ನಿಮಿತ್ತ ಉಡುಪಿ ಜಿಲ್ಲಾಧಿಕಾರಿ ಕಚೇರಿ ಬಳಿ ಜಿಲ್ಲಾ ಬಿಜೆಪಿ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಗ್ಯಾರಂಟಿ ಹೆಸರಲ್ಲಿ ದಲಿತರಿಗೆ ಮೋಸ, ದಲಿತರ ಮೀಸಲು ನಿಧಿಗೆ ಕನ್ನ' ಎಂಬ ಜನಾಂದೋಲನದಲ್ಲಿ ಮಾತನಾಡಿದರು.

ರ್ಖಚಾಗಿದ್ದು ಶೇ.25-30 ಮಾತ್ರ

BJP 3
ದಲಿತರಿಗೆ ಮೀಸಲಿಟ್ಟ ಅನುದಾನ 11 ತಿಂಗಳಾದರೂ ರ್ಖಚಾಗಿಲ್ಲ. ಇನ್ನೊಂದು ತಿಂಗಳಲ್ಲಿ ಪೂರ್ಣ ಖರ್ಚು ಸಾಧ್ಯವೇ? ಅಂಬೇಡ್ಕರ್​ ನಿಗಮ, ತಾಂಡಾ ಅಭಿವೃದ್ಧಿ ನಿಗಮ, ಭೋವಿ, ಆದಿ ಜಾಂಬವ ಹೀಗೆ ವಿವಿಧ ಅಭಿವೃದ್ಧಿ ನಿಗಮಗಳಿಗೆ ನೂರಾರು ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ರ್ಖಚಾಗಿದ್ದು ಶೇ. 25-30ಮಾತ್ರ. ದಲಿತರ ಕಲ್ಯಾಣದ ಹೊರತು ಈ ದೇಶದ ಕಲ್ಯಾಣವಾಗದು ಎಂದರು.

ಮನವಿ ಸ್ವೀಕರಿಸಿದ ಡಿಸಿ

BJP Manavi
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಬಿಜೆಪಿ ನಾಯಕರಿಂದ ಮನವಿ ಸ್ವೀಕರಿಸಿದರು.

ಉಡುಪಿ ಶಾಸಕ ಯಶಪಾಲ್​ ಸುವರ್ಣ, ಕುಂದಾಪುರ ಶಾಸಕ ಕಿರಣಕುಮಾರ್​ ಕೊಡ್ಗಿ, ದಿನಕರ ಬಾಬು, ಮಾಜಿ ಶಾಸಕ ಹರ್ಷವರ್ಧನ್​ ನಂಜನಗೂಡು, ಕುಯಿಲಾಡಿ ಸುರೇಶ್​ ನಾಯಕ್​, ಕೆ. ಉದಯಕುಮಾರ್​ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರಕುಮಾರ್​ ಕುಂದಾಪುರ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ್​ ಪೂಜಾರಿ, ದಿನಕರ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.

ಹುಡುಗಾಟಿಕೆ ಆಡ್​ಬ್ಯಾಡ್ರೀ ಸಿದ್ದರಾಮಯ್ಯ

BJP Box
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವಿಜಯಪುರ ಸಂಸದ ರಮೇಶ್​ ಜಿಗಜಿಣಗಿ ಉತ್ತರ ಕರ್ನಾಟಕ ಶೈಲಿಯಲ್ಲೇ ಮಾತನಾಡಿ ಹಾಸ್ಯ ಚಟಾಕಿ ಸಿಡಿಸಿದರು. ಸಿದ್ದರಾಮಯ್ಯ ನೀನ್ಯಾಕಯ್ಯಾ ಎಸ್​ಸಿ ಎಸ್​ಟಿ ಹಣ ಮುಟ್ಟಿದಿ? ಯಾಕ ತಗೀಬೇಕಿತ್ತದು? ಹುಡುಗಾಟಿಕೆ ಆಡ್​ಬ್ಯಾಡ್ರೀ. ಯಾರೂ ಕೇಳೋರಿಲ್ಲಂತ ತಿಳಿದಿರಿ? ನಿಮ್ಮನ್ನೀಗ ದಲಿತ್ರೂ ನೋಡ್ತಿಲ್ಲ, ಖರ್ಗೆ, ಮಹದೇವಪ್ಪನೂ ಸುಮ್​ನದಾರ. ಅಂಬೇಡ್ಕರ್​, ಜಗಜೀವನ್​ರಾಮ್​ಗೆ ಕಾಂಗ್ರೆಸ್​ನವು ಮಾಡಿದ ಅನ್ಯಾಯ ಎಲ್ರಿಗೂ ತಿಳಿದದ. ನಿಮ್ಮ ಬಜೆಟ್​ನ್ಯಾಗೂ ದಲಿತರಿಗೆ ಅನ್ಯಾಯ ಮುಂದುವರಿದದ. ಉತ್ತರ, ದಕ್ಷಿಣದ ದಲಿತ್ರನೆಲ್ಲ ಸೇರ್ಸಿ ನಾವ್​ ಹೋರಾಟ ಮಾಡಿ ತಕ್​ಪಾಠ ಕಲಿಸ್ತೀವಿ ಎಂದು ಎಚ್ಚರಿಕೆ ನೀಡಿದರು.

ಅನುದಾನ ಬಳಕೆ ಶಾಸನಬದ್ಧ ಜವಾಬ್ದಾರಿ. ಮಾ. 7ರಂದು ಮಂಡಿಸುವ ರಾಜ್ಯ ಬಜೆಟ್​ನಲ್ಲಿ ಎಸ್​ಸಿಎಸ್​ಟಿ ಅಭಿವೃದ್ಧಿಗೆ ಮೀಸಲಿಟ್ಟ ಅನುದಾನ ಅನ್ಯ ಉದ್ದೇಶಕ್ಕೆ ಬಳಸಿದರೆ ಸದನದ ಒಳ&ಹೊರಗೆ ಬಿಜೆಪಿ ಹೋರಾಟ ನಡೆಸಲಿದೆ. ವಸತಿ ಶಾಲೆಗಳ ಸ್ಥಿತಿ ಹದಗೆಟ್ಟಿದೆ. ಭೂ ಒಡೆತನದ ಕನಸು, ನಡೆವ ದಾರಿ, ಕುಡಿಯುವ ನೀರು, ಆರೋಗ್ಯಕ್ಕೆ ಮೀಸಲಿಟ್ಟ ಹಣ ಖರ್ಚು ಮಾಡಬೇಕು. ಅನ್ಯ ಉದ್ದೇಶಕ್ಕೆ ಬಳಸುವುದು ಅಕ್ಷಮ್ಯ. | ಕೋಟ ಶ್ರೀನಿವಾಸ್​ ಪೂಜಾರಿ. ಉಡುಪಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net