ಮೈಸೂರಿನಲ್ಲಿ ಫೆಬ್ರವರಿ 7 ರಂದು ‘ಜಾನಕಿ ನಮನ’ ಕಾರ್ಯಕ್ರಮ

janaki
ಗಾಯಕಿ ಎಸ್. ಜಾನಕಿ
Published on: 

ಮೈಸೂರು: ತಮ್ಮ ಮಧುರ ಕಂಠದಿಂದ ಕೋಟ್ಯಾಂತರ ಸಂಗೀತ ಪ್ರೇಮಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದ ಗಾನಕೋಗಿಲೆ ಎಸ್. ಜಾನಕಿ ಅವರ ಸ್ಮಾರಕ ನಿರ್ಮಿಸುವ ಸಲುವಾಗಿ ಎಸ್. ಜಾನಕಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಫೆ.7 ರಂದು ಸಂಜೆ 5ಕ್ಕೆ ನಗರದ ಮಾನಸಗಂ ಗೋತ್ರಿಯ ಬಯಲು ರಂಗಮಂದಿರದಲ್ಲಿ ‘ಎಸ್.ಜಾನಕಿ ನಮನ’ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ನವೀನ್ ಹೇಳಿದರು.

ಸ್ಮಾರಕ ನಿರ್ಮಾಣಕ್ಕೆ ಧನ ಸಂಗ್ರಹಿಸುವುದು ಹಾಗೂ ಜಾನಕಿ ಅವರಿಗೆ ಗಾಯನದ ಮೂಲಕ ನಮನ ಸಲ್ಲಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಜಾನಕಿ ಅವರು ಹಾಡಿರುವ ಕನ್ನಡ ಗೀತೆಗಳನ್ನು ದೇಶದ ಖ್ಯಾತ ಗಾಯಕ, ಗಾಯಕಿಯರು ಈ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಎಲ್ಲರ ಮನವನ್ನು ರಂಜಿಸಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಚಿತ್ರಾ, ರಾಜೇಶ್ ಕೃಷ್ಣನ್, ವಿಜಯ ಪ್ರಕಾಶ್, ಶ್ವೇತಾ ಮೋಹನ್, ಎಸ್.ಪಿ. ಶೈಲಜಾ, ಮಂಜುಳಾ ಗುರುರಾಜ್ ಸೇರಿದಂತೆ ಹಲವು ಖ್ಯಾತ ಗಾಯಕರು ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಖ್ಯಾತ ಗಾಯಕಿ ಉಷಾ ಉತ್ತುಪ್ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಆಸಕ್ತಿ ತೋರಿದ್ದಾರೆ. ಆದರೆ, ಅವರು ಬರುವುದು ಇನ್ನೂ ಖಚಿತವಾಗಿಲ್ಲ. ಸಂಗೀತ ನಿರ್ದೇಶಕ ಹಂಸಲೇಖ, ನಟಿ ವಿನಯ ಪ್ರಸಾದ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದರು.

ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ 12 ಸಾವಿರ ಜನರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಇದ್ದು, ಅಷ್ಟೂ ಜನರನ್ನು ಸೇರಿಸುವ ಗುರಿ ಹೊಂದಿದ್ದೇವೆ. ಬಯಲು ರಂಗಮಂದಿರದಲ್ಲಿ ಡಿ.5 ರಂದು ಸಂಗೀತ ಕಾರ್ಯಕ್ರಮ ನಡೆಸಲು ಎಸ್. ಜಾನಕಿ ಅವರು ಚಿಂತನೆ ನಡೆಸಿದ್ದರು. ಆದರೆ, ಅಷ್ಟರೊಳಗೆ ಅವರು ವಿಧಿವಶರಾದರು. ಇದೀಗ ಅವರ ನೆನಪಿನಲ್ಲಿ ನಾವು ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಹೇಳಿದರು.

ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ನೆರವು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಭರವಸೆ ನೀಡಿದೆ. ಆದರೆ, ಇದುವರೆಗೆ ಯಾವುದೇ ರೀತಿಯ ಅನುದಾನ ಬಂದಿಲ್ಲ. ಸರ್ಕಾರದ ನೆರವು ಪಡೆಯುವ ಜತೆಗೆ ಜನರಿಂದ ಹಣ ಸಂಗ್ರಹಿಸುವ ಮೂಲಕ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.

ಈ ಸಂದರ್ಭ ಕಾರ್ಯಕ್ರಮದ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಸಾ.ರಾ. ಮಹೇಶ್, ಗಾಯಕಿ ಜಾನಕಿ ಅವರ ಸ್ಮಾರಕ ನಿರ್ಮಾಣ ಮಾಡಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಪಿಆರ್ ತಯಾರಿಸಲು ಸೂಚನೆ ನೀಡಿದ್ದಾರೆ. ಸ್ಮಾರಕಕ್ಕೆ ಕೇಂದ್ರ ಸರ್ಕಾರ ಅಥವಾ ಸಿಎಸ್‌ಆರ್ ನಿಧಿ ಕೊಡಿಸಲು ಕ್ರಮ ವಹಿಸಲಾಗುವುದು ಎಂದರು.

ಈ ಸಂದರ್ಭ ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ, ನಂಜನಗೂಡು ಶ್ರೀಕಂಠೇಶ್ವರ ದೇವಸ್ಥಾನ ಅರ್ಚಕ ವಿಶ್ವನಾಥ್ ದೀಕ್ಷಿತ್ ಹಾಗೂ ಇತರರು ಇದ್ದರು.