

ಮಂಡ್ಯ: ಮಳವಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಹಾಗೂ ಜನಜಾಗೃತಿ ವೇದಿಕೆ ಸಹಯೋಗದಲ್ಲಿ ಅ.5ರಂದು ಗಾಂಧಿ ಸ್ಮತಿ ಹಾಗೂ ಪಾನಮುಕ್ತರ ಸಮಾವೇಶ ಆಯೋಜಿಸಲಾಗಿದೆ ಎಂದು ವೇದಿಕೆ ಜಿಲ್ಲಾಧ್ಯಕ್ಷ ಕೆ.ಹನುಮಂತಯ್ಯ ತಿಳಿಸಿದರು.
ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕಾರ್ಯಕ್ರಮದ ಸಾನಿಧ್ಯವನ್ನು ಮದ್ದೂರು ತಾಲೂಕು ಕೀಲಾರಕೊಪ್ಪಲು ವೇದವ್ಯಾಸ ಆಶ್ರಮದ ಬಸವಾನಂದ ಸ್ವಾಮೀಜಿ ವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕಾರ್ಯಕ್ರಮ ಉದ್ಘಾಟಿಸಲಿದ್ದು, ವೇದಿಕೆ ಅಧ್ಯಕ್ಷ ಕೆ.ಹನುಮಂತಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ನವಜೀವನ ಸಮಿತಿ ಸದಸ್ಯರನ್ನು ಜಿಲ್ಲಾ ಎಸ್ಪಿ ಎನ್.ಯತೀಶ್ ಅಭಿನಂದಿಸಲಿದ್ದಾರೆ. ಇದಕ್ಕೂ ಮುನ್ನ ಹಿರಿಯ ಸಿವಿಲ್ ನ್ಯಾಯಾಧೀಶ ಮಾದೇಶ ಜಾಥಕ್ಕೆ ಚಾಲನೆ ನೀಡಲಿದ್ದಾರೆಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಜಿಲ್ಲೆಯಲ್ಲಿ ಈವರೆಗೆ 26ಕ್ಕೂ ಹೆಚ್ಚು ಮದ್ಯವರ್ಜನ ಶಿಬಿರ ಆಯೋಜಿಸಿದ್ದು, 1800ಕ್ಕೂ ಹೆಚ್ಚು ಜನರು ಮದ್ಯವ್ಯಸನವನ್ನು ತ್ಯಜಿಸಿದ್ದಾರೆ. ಇವರು ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಅನುಕೂಲವಾಗುವಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೆರವು ನೀಡಲಾಗಿದೆ ಎಂದ ಅವರು, ರಾಜ್ಯದಲ್ಲಿ ಮದ್ಯ ಮಾರಾಟವನ್ನು ಸರ್ಕಾರ ಸಂಪೂರ್ಣ ನಿಷೇಧಿಸಬೇಕು. ಅಬಕಾರಿ ಟಾರ್ಗೆಟ್ ಪದ್ಧತಿಯನ್ನು ಕೈಬಿಡಬೇಕು. ಶಾಲಾಮಟ್ಟದಲ್ಲಿಯೇ ಮದ್ಯಪಾನ ಸೇರಿದಂತೆ ವ್ಯಸನ ಬಗ್ಗೆ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ. ಈ ನಿಟ್ಟಿನಲ್ಲಿ ಪಠ್ಯಪುಸ್ತಕದಲ್ಲಿ ಪಠ್ಯ ಸೇರಿಸಬೇಕೆಂದು ಆಗ್ರಹಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಜಿಲ್ಲಾ ನಿರ್ದೇಶಕಿ ಚೇತನಾ, ವೇದಿಕೆಯ ಲಿಂಗೇಗೌಡ, ಶಿವಕುಮಾರ್, ಪಾಂಡ್ಯನ್ ಇತರರಿದ್ದರು.