ಜನಹಿತ ಮುಖ್ಯ ಎಂದಿದ್ದ ಕೆಂಗಲ್ ಹನುಮಂತಯ್ಯ: ಎಂಎಲ್‌ಸಿ ಲಿಂಗಪ್ಪ ಸ್ಮರಣೆ

14-02-rama-hindu
Published on

ರಾಮನಗರ: ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರು ರಾಜನೀತಿಗಿಂತ ಜನರ ಹಿತ ಮುಖ್ಯ ಎಂದು ನಂಬಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಎಂ.ಲಿಂಗಪ್ಪ ಹೇಳಿದರು.

ನಗರದ ಸ್ಫೂರ್ತಿ ಭವನದಲ್ಲಿ ಕೆಂಗಲ್ ಹನುಮಂತಯ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಕೆಂಗಲ್ ಹನುಮಂತಯ್ಯ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಜೀವನದಲ್ಲಿ ದಕ್ಷ ಹಾಗೂ ಪ್ರಾಮಾಣಿಕರಾಗಿದ್ದವರು ಕೆಂಗಲ್ ಹನುಮಂತಯ್ಯ. ಬಡ ಕುಟುಂಬದಲ್ಲಿ ಜನಿಸಿ, ಅತ್ಯಂತ ಕಷ್ಟದಿಂದ ವಿದ್ಯಾಭ್ಯಾಸ ಮಾಡಿದವರು. ಜೀವನದಲ್ಲಿ ಶಿಸ್ತನ್ನು ಬೆಳೆಸಿಕೊಂಡವರು. ಗಾಂಧೀಜಿ ಅವರ ಪ್ರಭಾವಕ್ಕೊಳಗಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದವರು. ಜನರ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ ದೊರೆಯುವಂತಹ ದಕ್ಷ ಆಡಳಿತ ನೀಡಬೇಕೆಂಬುದು ಅವರ ಆಶಯವಾಗಿತ್ತು. ಅದೇ ರೀತಿಯ ಆಡಳಿತವನ್ನೂ ಮುಖ್ಯಮಂತ್ರಿಯಾಗಿ ನೀಡಿದರು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಸಿಂ.ಲಿಂ.ನಾಗರಾಜ್ ಮಾತನಾಡಿ, ಕುರ್ಚಿಗಾಗಿ ಎಂದೂ ಆಸೆಪಡದ ಹನುಮಂತಯ್ಯನವರು ಚಿಂತಿಸಿದ್ದು ರಾಜ್ಯದ ಅಭಿವೃದ್ಧಿಯನ್ನು ಮಾತ್ರ. ಏಕೀಕರಣದ ಪರವಾಗಿ ನಿಲ್ಲದಂತೆ ಹನುಮಂತಯ್ಯ ಅವರ ಮೇಲೆ ಬಹಳಷ್ಟು ಮಂದಿ ಒತ್ತಡ ಹೇರಿದ್ದರು. ಕರ್ನಾಟಕದ ಏಕೀಕರಣವಾದರೆ ನಿಮ್ಮ ಅಧಿಕಾರಕ್ಕೆ ಕುತ್ತು ಬರುತ್ತದೆ ಎಂಬ ಎಚ್ಚರಿಕೆಯನ್ನೂ ಅವರ ಆಪ್ತರು ನೀಡಿದ್ದರು. ಆದರೆ ಇದನ್ನೆಲ್ಲ ಲೆಕ್ಕಿಸದೆ ನಾಡಿನ ಏಕೀಕರಣದ ಪರವಾಗಿ ನಿಂತವರು ಅವರು ಎಂದರು.

ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವೆಂಕಟಾಚಲಯ್ಯ, ಟ್ರಸ್ಟ್‌ನ ಉಪಾಧ್ಯಕ್ಷ ಚೂಡಯ್ಯ, ಸಾಂಸ್ಕೃತಿಕ ಸಂಘಟಕಿ ಕವಿತಾರಾವ್ ಇದ್ದರು. ವಿದ್ಯಾರ್ಥಿನಿ ಕಾವ್ಯಾ ಪ್ರಾರ್ಥಿಸಿದರು. ಟ್ರಸ್ಟಿ ತ್ಯಾಗರಾಜ ಸ್ವಾಗತಿಸಿದರು. ಗಾಯಕಿ ಚಿತ್ರಾರಾವ್ ಗೀತಗಾಯನ ನಡೆಸಿಕೊಟ್ಟರು. ಸಿ. ರಮೇಶ್ ಹೊಸದೊಡ್ಡಿ ನಿರೂಪಿಸಿದರು.

ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಎ.ಎಸ್. ಸಾವಿತ್ರಮ್ಮ ಮಾತನಾಡಿ,

ಸದಾ ನಾಡು ಮತ್ತು ಜನರ ಅಭಿವೃದ್ಧಿಗಾಗಿ ಶ್ರಮಿಸಿದ ಕೆಂಗಲ್ ಹನುಮಂತಯ್ಯ ಎಂದೂ ಸ್ವಾರ್ಥಕ್ಕಾಗಿ ಬದುಕಲಿಲ್ಲ. ಸ್ವಾಭಿಮಾನದಿಂದ ಬಾಳಿದವರು. ಈಗೇನಿದ್ದರೂ ಆಡಳಿತ ಸುಧಾರಣೆ ಬಗ್ಗೆ ಭಾಷಣಗಳಲ್ಲಿ ಮಾತ್ರ ಕೇಳುತ್ತಿದ್ದೇವೆ.

ಆದರೆ, ಹನುಮಂತಯ್ಯನವರು ಆಡಳಿತ ಸುಧಾರಣೆ ವರದಿಯನ್ನೇ ಸಿದ್ಧಪಡಿಸಿದ್ದರು. ಅದನ್ನು ಈಗಿನ ಆಡಳಿತಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಮ್ಮೆ ಓದಬೇಕು ಎಂದು ಸಲಹೆ ನೀಡಿದರು.

ಪ್ರತಿಮೆ, ಗೋಪುರ ಸ್ಥಾಪನೆ ನಿರ್ಮಾಣ ವಿಳಂಬ: ಕೆಂಗಲ್ ಹನುಮಂತಯ್ಯ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಎಂ. ಶಿವನಂಜಯ್ಯ ಮಾತನಾಡಿ, ಹಳೆಯ ಬಸ್ ನಿಲ್ದಾಣದಲ್ಲಿ ಸದ್ಯದಲ್ಲಿಯೇ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಹಾಗೂ ಗೋಪುರ ಸ್ಥಾಪಿಸಲಾಗುವುದು. ಹಲವು ಕಾರಣಗಳಿಂದ ವಿಳಂಬವಾಗಿದೆ ಎಂದು ತಿಳಿಸಿದರು.

ಅಧಿಕಾರ ಹೋದರೂ ಪರವಾಗಿಲ್ಲ: ಅಧಿಕಾರ ಹೋದರೂ ಚಿಂತೆ ಇಲ್ಲ. ಕನ್ನಡಿಗರೆಲ್ಲ ಒಂದೇ ರಾಜ್ಯದ ಆಡಳಿತಕ್ಕೆ ಒಳಪಡಬೇಕು ಎಂಬ ಆಸೆಯಿಂದ ಏಕೀಕರಣಕ್ಕೆ ಶ್ರಮಿಸಿದ ಕೆಂಗಲ್ ಹನುಮಂತಯ್ಯ ಅವರು ಇಂದಿನ ರಾಜಕಾರಣಿಗಳಿಗೆ ಮಾದರಿ ಎಂದರು. ಈಗಿನ ತಲೆಮಾರಿನವರಿಗೆ ವಿಧಾನಸೌಧ ನಿರ್ಮಿಸಿದ ಕೆಂಗಲ್ ಹನುಮಂತಯ್ಯ ರಾಮನಗರ ತಾಲೂಕಿನವರು ಎಂಬುದೇ ಗೊತ್ತಿಲ್ಲ. ಶಾಲಾ-ಕಾಲೇಜುಗಳಲ್ಲಿ ಹನುಮಂತಯ್ಯ ಅವರನ್ನು ಕುರಿತ ಕಾರ್ಯಕ್ರಮಗಳನ್ನು ಆಯೋಜಿಸಿದರೆ ಅನುಕೂಲ ವಾಗುತ್ತದೆ. ಇಂತಹ ಕಾರ್ಯಕ್ರಮಗಳಿಗೆ ತಗಲುವ ವೆಚ್ಚ ಭರಿಸುವುದಾಗಿ ಲಿಂಗಪ್ಪ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net