

ಮಂಡ್ಯ: ಪ್ರತಿ ಮನುಷ್ಯನಿಗೂ ವಿಮೆ ಅವಶ್ಯಕತೆ ಇದೆ. ಇದರಿಂದ ಕುಟುಂಬದ ಆರ್ಥಿಕ ಹೊರೆ ತಗ್ಗಿಸುವುದು ಅಥವಾ ಆರ್ಥಿಕ ಸಹಾಯ ಮಾಡಲು ಸಾಧ್ಯವಾಗುತ್ತದೆ ಎಂದು ಆರ್ಥಿಕ ಸಾಕ್ಷರತಾ ಸಮಾಲೋಚಕಿ ಕೆ.ಪಿ.ಅರುಣಕುಮಾರಿ ಸಲಹೆ ನೀಡಿದರು.
ತಾಲೂಕಿನ ಉಪ್ಪರಕನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಬ್ಯಾಂಕ್ ಆಫ್ ಬರೋಡ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಹಯೋಗದಲ್ಲಿ ಆಯೋಜಿಸಿದ್ದ ಜನ ಸುರಕ್ಷಾ ಯೋಜನೆಗಳ ಅಭಿಯಾನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಜಾರಿಗೊಳಿಸಿದೆ. ವಾರ್ಷಿಕ 436 ರೂ ಪಾವತಿಸಿದರೆ 18 ರಿಂದ 50 ವರ್ಷದೊಳಗಿರುವವರು ಎರಡು ಲಕ್ಷ ರೂ ಜೀವ ವಿಮೆ ಪಡೆಯಬಹುದಾಗಿದೆ. ಸಹಜ ಅಥವಾ ಅಪಘಾತದಲ್ಲಿ ಮರಣ ಹೊಂದಿದಾಗ ನಾಮಿನಿದಾರರು ಹಣ ಪಡೆಯಬಹುದಾಗಿದೆ ಎಂದು ವಿವರಿಸಿದರು.
ಅದೇ ರೀತಿ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆ ಮೂಲಕ ವಾರ್ಷಿಕ 20 ರೂ ಪಾವತಿಸಿ 18 ರಿಂದ 70 ವರ್ಷದೊಳಗಿನ ಸಾರ್ವಜನಿಕರು ಎರಡು ಲಕ್ಷ ರೂ ಅಪಘಾತ ವಿಮೆ ಪಡೆಯಲು ಅರ್ಹರಿರುತ್ತಾರೆ. ಇಂತಹ ಯೋಜನೆಗಳನ್ನು ತಿಳಿದು ಫಲಾನುಭವಿಗಳಾಗಿ ಎಂದು ಕರೆ ನೀಡಿದರು.
ಗ್ರಾಪಂ ಸದಸ್ಯ ನಾಗೇಶ್ ಮಾತನಾಡಿ, ಜನರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕೆಲಸ ಮಾಡೋಣ ಎಂದರು.
ಪಿಡಿಒ ಶಿವರಾಮು, ಬ್ಯಾಂಕ್ ಆಫ್ ಬರೋಡದ ಕೃಷ್ಣೇಗೌಡ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಬಿಳಿದೇಗಲು ಬ್ರಾೃಂಚ್ ವ್ಯವಸ್ಥಾಪಕ ರಾಮಚಂದ್ರಪ್ಪ, ಗ್ರಾಪಂ ಕಾರ್ಯದರ್ಶಿ ಶಂಕರೇಗೌಡ, ಮುಖಂಡರಾದ ಕೆಂಪೇಗೌಡ, ಮದನ್, ಬ್ಯಾಂಕ್ ಮಿತ್ರರ ಮೇಲ್ವಿಚಾರಕರಾದ ಚಂದನ್ ಇದ್ದರು. ಇದೇ ವೇಳೆ ಬ್ಯಾಂಕ್ ಮಿತ್ರರ ಮೂಲಕ ಜನಸುರಕ್ಷಾ ಯೋಜನೆಗಳ ನೋಂದಣಿ ಮಾಡಲಾಯಿತು.