ಕಾವೇರಿಗೆ ಮಧ್ಯವರ್ತಿಗಳ ಸಂಪರ್ಕ ಬೇಡ

mla
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು 

ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳಿಗೆ ಕಾವೇರಿ ನೀರಿನ ಸಂಪರ್ಕ ಕಾಮಗಾರಿ ಅಂತಿಮಘಟ್ಟದಲ್ಲಿದ್ದು, ಕಾವೇರಿ ಸಂಪರ್ಕಕ್ಕೆ ಯಾವುದೇ ಮಧ್ಯವರ್ತಿಗಳನ್ನು ಸಂಪರ್ಕ ಮಾಡಬೇಡಿ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.

ಯಶವಂತಪುರ ಕ್ಷೇತ್ರ ಲಿಂಗಧೀರನಹಳ್ಳಿ ವಾರ್ಡ್‌ನಲ್ಲಿ ಹಮ್ಮಿಕೊಂಡಿದ್ದ ಕಾವೇರಿ ನೀರಿನ ಜನಸಂಪರ್ಕ ಸಭೆಯಲ್ಲಿ ಮಾತನಾಡಿದರು. ಕಾವೇರಿ ಸಂಪರ್ಕ ಪಡೆಯಲು ಜಲಮಂಡಳಿ ಅಧಿಕಾರಿಗಳನ್ನು ಸಂಪರ್ಕಿಸಬೇಕು ಜತೆಗೆ ಇಲಾಖೆಯಲ್ಲಿ ನೋಂದಾಯಿತ ಗುತ್ತಿಗೆದಾರರ ಮೂಲಕ ಕೆಲಸ ಮಾಡಿಸಿಕೊಳ್ಳಬೇಕು ವಿನಾಕಾರಣ ಮಧ್ಯವರ್ತಿಗಳನ್ನು ನಂಬಿ ಹಣ ಕಳೆದುಕೊಳ್ಳಬಾರದು ಎಂದು ಸಾರ್ವಜನಿಕರಿಗೆ ಸಲಹೆ ನೀಡಿದರು. ಹಲವು ಕಡೆಗಳಲ್ಲಿ ಮಧ್ಯವರ್ತಿಗಳು ಜನರ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ರೂ.ವೆಚ್ಚವಾಗುತ್ತದೆ ಎಂದು ಹೆದರಿಸುತ್ತಿದ್ದಾರೆ. ಈ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದು ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕಿದೆ ಹಾಗೂ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದರು. ಕಾವೇರಿ ನೀರಿನ 5 ನೇ ಹಂತದ ಕಾಮಗಾರಿ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ಯೋಜನೆಯಿಂದ 775 ದಶಲಕ್ಷ ಲೀಟರ್ ಹೆಚ್ಚುವರಿಯಾಗಿ ಕುಡಿವ ನೀರು ನಗರಕ್ಕೆ ದೊರೆಯಲಿದೆ. ಇದರಿಂದ ಬಿಬಿಎಂಪಿಗೆ ಸೇರ್ಪಡೆಯಾದ 110 ಹಳ್ಳಿಗಳ ಸುಮಾರು 225 ಚ.ಕಿ.ಮೀ ವ್ಯಾಪ್ತಿಯಲ್ಲಿ ಬರುವ 50 ಲಕ್ಷಕ್ಕೂ ಹೆಚ್ಚಿನ ಜನರಿಗೆ ಕುಡಿಯುವ ನೀರು ಲಭ್ಯವಾಗಲಿದೆ ಎಂದರು.

ಎಲ್ಲ ಸಮಸ್ಯೆಗಳು ಬಗೆಹರಿದಿವೆ:

ಈ ಲಿಂಗಧೀರನಹಳ್ಳಿ ಹಾಗೂ ದೊಡ್ಡಬಿದರಕಲ್ಲು ವಾರ್ಡ್ ವ್ಯಾಪ್ತಿಯಲ್ಲಿ ಕಾವೇರಿ ನೀರಿನ ಸಂಪರ್ಕ ಕಾಮಗಾರಿ ವೇಳೆ ಅರಣ್ಯ ಇಲಾಖೆ, ಬೆಸ್ಕಾಂ ಹಾಗೂ ಬಿಬಿಎಂಪಿ ವತಿಯಿಂದ ಹಲವು ಸಮಸ್ಯೆ ಎದುರಾಗಿತ್ತು. ಪ್ರಸ್ತುತ ಇದೆಲ್ಲ ಬಗೆಹರಿದಿದ್ದು ಶೀಘ್ರದಲ್ಲೇ ಮೀಟರ್ ಸಹಿತ ಕಾವೇರಿ ನೀರು ಮನೆಮನೆಗೆ ತಲುಪಲಿದೆ ಎಂದು ಜಲಮಂಡಳಿ ಅಧಿಕಾರಿ ಹರಿನಾಥ್ ತಿಳಿಸಿದರು.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು, ಹಣ ಪಾವತಿಗೆ 90 ದಿನದ ಕಾಲಾವಕಾಶವಿದೆ. ಯಾವುದೇ ಸಮಸ್ಯೆ ಇದ್ದರೂ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದು ಎಂದು ತಿಳಿಸಿದರು.

ಬೇಗ ಅರ್ಜಿ ಹಾಕಿ ನೀರು ಪಡೆಯಿರಿ:

ಕಾವೇರಿ ನೀರಿನ ಸಂಪರ್ಕ ಕಾಮಗಾರಿ ಶೇ.80 ಭಾಗ ಮುಗಿದಿದೆ, ಬಡಾವಣೆಗಳಲ್ಲಿ ಶೇ.70 ಮಂದಿ ಅರ್ಜಿ ಸಲ್ಲಿಸಿ ಪ್ರಕ್ರಿಯೆ ಮುಗಿಸಿದರೆ ಶೀಘ್ರದಲ್ಲೇ ನೀರು ಮನೆಮನೆಗಳಿಗೆ ತಲುಪಲಿದೆ ಎಂದು ಅಧಿಕಾರಿಗಳು ತಿಳಿಸಿದರು. ಪ್ರಾಯೋಗಿಕವಾಗಿ ನೀರು ಹರಿಸುತ್ತಿದ್ದು ಎಲ್ಲೆಲ್ಲಿ ನೀರು ಪೋಲಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚುವ ಕೆಲಸ ನಡೆಯುತ್ತಿದೆ ಈಗಾಗಲೇ ಶೇ.90 ಭಾಗ ಲಿಕೇಜ್‌ಗಳನ್ನು ಸರಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.

------------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net