ಜ.೩೦ರಂದು ಹುತಾತ್ಮರ ದಿನಾಚರಣೆ

huthathma
Published on

ಮಡಿಕೇರಿ: ಹುತಾತ್ಮರ ದಿನಾಚರಣೆ ಜ.೩೦ ರಂದು ಶ್ರದ್ಧಾಭಕ್ತಿಯಿಂದ ಆಚರಿಸಲು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಕಳೆದ ಬಾರಿಯಂತೆ ಹುತಾತ್ಮರ ದಿನ ಪ್ರಯುಕ್ತ ಪೂಜ್ಯ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮವನ್ನು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗಿ ಮೆರವಣಿಗೆ ಮೂಲಕ ಗಾಂಧಿ ಮಂಟಪದಲ್ಲಿರಿಸಿ ಸರ್ವಧರ್ಮ ಪ್ರಾರ್ಥನೆ ಮೂಲಕ ಹುತಾತ್ಮರ ದಿನಾಚರಣೆ ಆಚರಿಸಬೇಕಿದೆ. ಜಿಲ್ಲಾ ಖಜಾನೆಯಿಂದ ಮಹಾತ್ಮ ಗಾಂಧೀಜಿಯವರ ಚಿತಾ ಭಸ್ಮವನ್ನು ಹೊರತೆಗೆದು ಪುಷ್ಪಾಲಂಕಾರ ಮೂಲಕ ವಿಶೇಷ ಗೌರವ ಸಲ್ಲಿಸಿ, ನಂತರ ಪೊಲೀಸ್ ಗೌರವದೊಂದಿಗೆ ಮೆರವಣಿಗೆ ಮೂಲಕ ಹೊರಟು ಮಂಗೇರಿರ ಮುತ್ತಣ್ಣ ವೃತ್ತ, ಜನರಲ್ ತಿಮ್ಮಯ್ಯ ವೃತ್ತ ಮೂಲಕ ಗಾಂಧಿ ಮಂಟಪಕ್ಕೆ ತೆರಳಿ ಅಲ್ಲಿ ಸರ್ವಧರ್ಮ ಪ್ರಾರ್ಥನೆ ನಡೆಯಲಿದೆ. ಬಳಿಕ ಪೊಲೀಸ್ ಗೌರವ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ಸರ್ವೋದಯ ಸಮಿತಿ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಗಾಂಧಿ ಮಂಟಪ ಆವರಣದಲ್ಲಿ ಸ್ವಚ್ಛಗೊಳಿಸಬೇಕು. ಪೊಲೀಸ್ ಬ್ಯಾಂಡ್ ನಿಯೋಜಿಸುವಂತಾಗಬೇಕು. ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಮಹಾತ್ಮ ಗಾಂಧೀಜಿ ಅವರ ಕುರಿತು ಪ್ರಿಯವಾದ ಹಾಡುಗಳನ್ನು ಹಾಡಲಿದ್ದಾರೆ. ಅಂದು ಬೆಳಗ್ಗೆ ೧೧ ಗಂಟೆಗೆ ಸೈರನ್ ಮೊಳಗುವಂತಾಗಬೇಕು ಎಂದು ಕೋರಿದರು.

ಸರ್ವೋದಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಮಾತನಾಡಿ, ಹುತಾತ್ಮರ ದಿನಾಚರಣೆಯಂದು ಸಂಜೆ ವೇಳೆಯಲ್ಲಿ ನಗರದ ಗಾಂಧಿಭವನದಲ್ಲಿ ಕೊಡಗು ಜಿಲ್ಲಾ ಜಾನಪದ ಪರಿಷತ್ತು ವತಿಯಿಂದ ಸರ್ವಧರ್ಮ ಪ್ರಾರ್ಥನಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸರ್ವೋದಯ ಸಮಿತಿ ಸದಸ್ಯ ತೆನ್ನಿರಾ ಮೈನಾ ಮಾತನಾಡಿ, ಹುತಾತ್ಮರ ದಿನಾಚರಣೆಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದು ಮನವಿ ಮಾಡಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ಸುಂದರರಾಜ್ ಮಾತನಾಡಿ, ಹುತಾತ್ಮರ ದಿನಾಚರಣೆಗೆ ಪೊಲೀಸ್ ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಪೊಲೀಸ್ ಬ್ಯಾಂಡ್ ನಿಯೋಜಿಸಲಾಗುವುದು ಎಂದರು.

ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ, ಸರ್ವೋದಯ ಸಮಿತಿಯ ಸದಸ್ಯ ಅಂಬೆಕಲ್ಲು ನವೀನ್, ಸದಸ್ಯರಾದ ಚಂದ್ರಶೇಖರ್, ತಹಶೀಲ್ದಾರ್ ಪ್ರವೀಣ್ ಕುಮಾರ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಮಂಜುಳ, ಜಿ.ಪಂ.ಇಇ ನಾಯಕ್, ಪೌರಾಯುಕ್ತ ಎಚ್.ಆರ್.ರಮೇಶ್, ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಪ್ರಸನ್ನ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಕವಿತಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net