ಜಮ್ಮಾ ಹಿಡುವಳಿದಾರರ ಜನ್ಮ ಸಿದ್ಧ ಹಕ್ಕು

399617_257036391032638_120723087997303_644717_569056809_n
Published on

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಜಮ್ಮಾ ಜಾಗದ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಜಮ್ಮಾ ಜಾಗ ನಮ್ಮ ಜನ್ಮ ಸಿದ್ಧ ಹಕ್ಕು ಎಂದು ಜಮ್ಮಾ ಹಿಡುವಳಿದಾರರು ಹೆಮ್ಮೆಯಿಂದ ಹೇಳುತ್ತಾರೆ. ಯಾವುದೇ ಕಷ್ಟ ಬಂದರೂ ಜಮ್ಮಾ ಜಾಗ ಮಾರಾಟ ಮಾಡಲು ಮುಂದಾಗುವುದಿಲ್ಲ. ಅಷ್ಟೊಂದು ಬಾಂಧವ್ಯ ಜಮ್ಮಾ ಜಾಗದ ಮೇಲೆ ಹೊಂದಿದ್ದಾರೆ.

ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಬೆಳೆ ಬೆಳೆದಿರುವ ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ಕಂದಾಯ ಸಚಿವ ಆರ್. ಅಶೋಕ್ ಹೇಳಿಕೆ ನೀಡುವ ಸಂದರ್ಭ ಕೊಡಗಿನ ಜಮ್ಮಾ ಜಾಗವನ್ನೂ ಸೇರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಜಮ್ಮಾ ಜಾಗ ಅನುಭವ ಸ್ವಾಧೀನದಲ್ಲಿರುವ ಹಿಡುವಳಿದಾರರಿಗೆ ಸೇರಿದ್ದು. ಇದನ್ನು ಗುತ್ತಿಗೆ ಆಧಾರದಲ್ಲಿ ನೀಡುವುದು ಮಾಲೀಕತ್ವವನ್ನು ಪ್ರಶ್ನಿಸಿದ್ದಂತೆ ಮಾಡಿದೆ. ಚೆಕ್ಕೇರ ಪೂವಯ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಹೈಕೋರ್ಟ್ ನೀಡಿದ ಮಹತ್ವದ ತೀರ್ಪಿನಲ್ಲಿ ಜಮ್ಮಾ ಜಾಗ ಹಿಡುವಳಿದಾರರಿಗೆ ಸೇರಿದ್ದೆಂದು ಸ್ಪಷ್ಟ ಪಡಿಸಲಾಗಿದೆ. ಎ.ಕೆ. ಸುಬ್ಬಯ್ಯ ಹೈಕೋರ್ಟ್‌ನಲ್ಲಿ ವಾದಿಸುವುದರ ಮೂಲಕ ಜಮ್ಮಾ ಜಾಗದ ಅನುಭವ ಸ್ವಾಧೀನದಾರರಿಗೆ ಮಾಲೀಕತ್ವ ಸಿಗುವಂತೆ ಮಾಡಿದ್ದಾರೆ.

ಭತ್ತ ಬೆಳೆಯುತ್ತಿದ್ದ ಗದ್ದೆ ಜಮ್ಮಾ ಜಾಗಕ್ಕೆ ಹೊಂದಿಕೊಂಡಿರುವ ಬಾಣೆ ಜಾಗವನ್ನು ಕೃಷಿಕರಿಗೆ ಸೀಮಿತ ಹಕ್ಕಿನೊಂದಿಗೆ ನೀಡಲಾಗಿತ್ತು. ಈ ಹಿನ್ನೆಲೆ ಜಮ್ಮಾಬಾಣೆ ಅರಣ್ಯ ಇಲಾಖೆಗೆ ಸೇರಿದ್ದೆಂದು ನ್ಯಾಯಾಲಯದಲ್ಲಿ ಇಲಾಖೆಯವರು ವಾದಿಸಿದ್ದರು. ಹಲವು ವರ್ಷದಿಂದ ಹಿಡುವಳಿದಾರರ ಅನುಭವ ಸ್ವಾಧೀನದಲ್ಲಿರುವ ಜಮ್ಮಾಬಾಣೆ ಜಾಗದ ಮಾಲೀಕತ್ವ ಹಿಡುವಳಿದಾರನಿಗೆ ಸೇರಿದ್ದೆಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿತ್ತು.

ಜಮ್ಮಾಬಾಣೆ ಜಾಗದಲ್ಲಿ ಬೆಳೆ ಬೆಳೆದಿದ್ದಲ್ಲಿ ಕಂದಾಯ ನಿಗದಿ ಪಡಿಸುವುದರೊಂದಿಗೆ ಮಾಲೀಕತ್ವ ನೀಡಲಾಗುತ್ತಿತ್ತು. ಬೆಳೆ ಬೆಳೆಯದ ಖಾಲಿ ಜಾಗಕ್ಕೂ ಕಂದಾಯ ನಿಗದಿ ಪಡಿಸಲು ಕರ್ನಾಟಕ ಭೂ ಕಂದಾಯ ಕಾಯ್ದೆ ೧೯೬೪ಕ್ಕೆ ಮಹತ್ವದ ತಿದ್ದುಪಡಿ ತರಲಾಗಿದೆ. ಈ ಹಿನ್ನೆಲೆಯಲ್ಲಿ ಒಟ್ಟಾರೆಯಾಗಿ ಜಮ್ಮಾಬಾಣೆ ಜಾಗದ ಸಂಪೂರ್ಣ ಮಾಲೀಕತ್ವ ಅನುಭವ ಸ್ವಾಧೀನದಲ್ಲಿರುವ ಹಿಡುವಳಿದಾರರಿಗೆ ಸೇರಿ ದ್ದಾಗಿದೆ. ಆದರೆ, ಕಂದಾಯ ಸಚಿವರು ಗುತ್ತಿಗೆ ಆಧಾರದಲ್ಲಿ ನೀಡುವ ಹೇಳಿಕೆ ನೀಡುವುದರ ಮೂಲಕ ಗೊಂದಲ ಮತ್ತು ಆತಂಕಕ್ಕೆ ನಾಂದಿ ಹಾಡಿದ್ದಾರೆ. ಜಮ್ಮಾಬಾಣೆ ಜಾಗಕ್ಕೆ ಸಂಬಂಧಿಸಿದ್ದಂತೆ ಕಂದಾಯ ಸಚಿವ ಆರ್. ಅಶೋಕ್ ನೀಡಿರುವ ಹೇಳಿಕೆಗೆ ಸಂಬಂಧಿಸಿ ದ್ದಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

**
ಜಮ್ಮಾಬಾಣೆ ಜಾಗ ಗುತ್ತಿಗೆ ಆಧಾರದಲ್ಲಿ ನೀಡುವ ವಿಚಾರ ಸರ್ಕಾರದ ಮುಂದಿಲ್ಲ. ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡಿಲ್ಲ. ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡು ಕೃಷಿ ಮಾಡಿದ್ದಲ್ಲಿ ೩೦ ವರ್ಷ ಗುತ್ತಿಗೆ ಆಧಾರದಲ್ಲಿ ನೀಡಲು ನಿರ್ಧಾರ ವಾಗಿದೆ. ರಾಜ್ಯದ ವಿವಿಧೆಡೆ ವಿಶೇಷ ಹಕ್ಕಿನ ಜಾಗ (ದಾಖಲೆಯಲ್ಲಿ ಸರ್ಕಾರ ಎಂದಿರುವುದು) ಗುತ್ತಿಗೆ ನೀಡುವ ಸಂಬಂಧ ಚೆರ್ಚೆ ನಡೆದಿದೆ. ರಾಜಕೀಯ ವಾಗಿ ಗೊಂದಲ ಸೃಷ್ಟಿಸುವ ಕೆಲಸ ನಡೆದಿದೆ. ಜಮ್ಮಾ ಹಿಡುವಳಿದಾರರು ಗಾಬರಿಯಾಗುವ ಅವಶ್ಯಕತೆ ಇಲ್ಲ. ಕೆ.ಜಿ. ಬೋಪಯ್ಯ, ಅಧ್ಯಕ್ಷರು, ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ.

**
ಚೆಕ್ಕೇರ ಪೂವಯ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಹೈಕೋಟರ್ ಮಹತ್ವದ ತೀರ್ಪು ನೀಡುವುದರ ಮೂಲಕ ಅನುಭವ ಸ್ವಾಧೀನದಲ್ಲಿ ರುವ ಹಿಡುವಳಿದಾರರಿಗೆ ಮಾಲೀಕತ್ವ ಖಾತ್ರಿ ಪಡಿಸಲಾಗಿದೆ. ಹೀಗಿರುವಾಗ, ಕಂದಾಯ ಸಚಿವ ಆರ್. ಅಶೋಕ್ ಜಮ್ಮಾ ಜಾಗವನ್ನು ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ರಾಜಕೀಯ ದುರುದ್ದೇಶದಿಂದ ಹೇಳಿಕೆ ನೀಡಿದ್ದಾರೆ. ಸಚಿವರು ತಕ್ಷಣ ಕೊಡಗಿನವರ ಕ್ಷಮೆಯಾಚಿಸಬೇಕು. ಎ.ಎಸ್. ಪೊನ್ನಣ್ಣ, ಅಧ್ಯಕ್ಷರು, ಕೆಪಿಸಿಸಿ ಕಾನೂನು ಘಟಕ.

**
ಜಮ್ಮಾಬಾಣೆ ಜಾಗ ಗುತ್ತಿಗೆ ಆಧಾರದಲ್ಲಿ ಒತ್ತುವರಿದಾರರಿಗೆ ನೀಡಲು ಸರ್ಕಾರಕ್ಕೆ ಅಧಿಕಾರವಿಲ್ಲ. ಕಂದಾಯಕ್ಕೆ ಒಳಪಟ್ಟ ಬಳಿಕ ಜಮ್ಮಾಬಾಣೆ ಜಾಗ ಪರಾಧೀನ ಜಾಗವಾಗಲಿದ್ದು, ಮಾರಾಟ ಮಾಡುವ ಹಕ್ಕು ಇರುತ್ತದೆ. ಖಾಸಗಿ ಮಾಲೀಕತ್ವದಲ್ಲಿರುವ ಜಮ್ಮಾಬಾಣೆ ಜಾಗವನ್ನು ಒತ್ತುವರಿದಾರರಿಗೆ ಗುತ್ತಿಗೆ ಆಧಾರದಲ್ಲಿ ನೀಡಲು ಹೇಗೆ ಸಾಧ್ಯವಾಗುತ್ತದೆ. ಕಂದಾಯ ನಿಗದಿ ಪಡಿಸಲು ಬಾಕಿ ಇರುವ ಜಮ್ಮಾಬಾಣೆ ಜಾಗಕ್ಕೂ ತಕ್ಷಣ ಕಂದಾಯ ನಿಗದಿ ಪಡಿಸಬೇಕು. ಕೆ.ಎಂ. ಗಣೇಶ್, ಜೆಡಿಎಸ್ ಜಿಲ್ಲಾಧ್ಯಕ್ಷರು.

**
ಜಮ್ಮಾಬಾಣೆ ಜಾಗದ ಸಂಪೂರ್ಣ ಮಾಲೀಕತ್ವದ ಅನುಭವ ಸ್ವಾಧೀನದಲ್ಲಿರುವ ಹಿಡುವಳಿದಾರರದ್ದು. ಈ ಜಾಗವನ್ನು ಒತ್ತುವರಿದಾರ ರಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಅಧಿಕಾರ ಸರ್ಕಾರಕ್ಕಿಲ್ಲ. ರಾಜಕೀಯ ದುರುದ್ದೇಶದಿಂದ ಕಂದಾಯ ಸಚಿವ ಆರ್. ಅಶೋಕ್ ಈ ರೀತಿಯ ಹೇಳಿಕೆ ನೀಡಿರುವ ಸಾಧ್ಯತೆ ಇದೆ. ಇದನ್ನು ಕೊಡಗಿನ ಜನತೆ ಪ್ರಶ್ನಿಸದಿದ್ದಲ್ಲಿ ಭವಿಷ್ಯದಲ್ಲಿ ತೊಂದರೆ ಆಗಲಿದೆ. ಪುತ್ತರಿರ ಪಪ್ಪು ತಿಮ್ಮಯ್ಯ, ಬೆಳೆಗಾರರು, ಚೆಟ್ಟಳ್ಳಿ.

**
ಜಮ್ಮಾ ಹಿಡುವಳಿ ಬಗ್ಗೆ ಸಚಿವರಿಗೆ ಮಾಹಿತಿ ಕೊರತೆ ಇದೆ. ಅನಾದಿ ಕಾಲದಿಂದ ಅನುಭವ ಸ್ವಾಧೀನದಲ್ಲಿರುವ ಜಮ್ಮಾ ಹಿಡುವಳಿದಾರ ರು ಹೈಕೋರ್ಟ್ ತೀರ್ಪಿನ ಬಳಿಕ ಸಂಪೂರ್ಣ ಮಾಲೀಕತ್ವ ಹೊಂದಿದ್ದೇವೆ. ಜಮ್ಮಾ ಜಾಗ ಗುತ್ತಿಗೆಗೆ ನೀಡುವ ಹೇಳಿಕೆ ಕೊಡಗಿನ ಜನರನ್ನು ಗೊಂದಲಕ್ಕಿಡು ಮಾಡಿದೆ. ಕೊಡಗಿನ ಜನರಿಗೆ ಮಾರಕವಾಗುವ ಹೊಸ ಯೋಜನೆಗೆ ಪೂರಕ ಅಡಿಪಾಯವೇ ಎಂಬುದನ್ನು ಸೂಕ್ಷ್ಮವಾಗಿ ಅವಲೋಕಿಸ ಬೇಕಿದೆ. ಅಚ್ಚಾಂಡಿರ ಪವನ್ ಪೆಮ್ಮಯ್ಯ, ಅಧ್ಯಕ್ಷರು, ಕೊಡಗು ರಕ್ಷಣಾ ವೇದಿಕೆ.

**
ಚೆಕ್ಕೇರ ಪೂವಯ್ಯ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ನ್ಯಾಯಾಲಯ ತೀರ್ಪು ನೀಡಿದ ಬಳಿಕ ಇತ್ಯರ್ಥವಾಗಿದೆ. ಸುಮ್ಮನೆ ಸರ್ಕಾರವೇ ಗೊಂದಲ ಸೃಷ್ಟಿಸಿದೆ. ಗೊಂದಲ ಸೃಷ್ಟಿಸುವುದರಿಂದ ಇವರಿಗೆ ಏನೋ ಪ್ರಯೋಜನವಾಗುತ್ತದೆ. ಕಂದಾಯ ಸಚಿವರಿಗೆ ಜಮ್ಮಾಬಾಣೆ ಜಾಗದ ಬಗ್ಗೆ ಸ್ಪಷ್ಟತೆ ಇಲ್ಲ. ರಾಜ್ಯದ ವಿವಿಧೆಡೆಯಲ್ಲಿರುವ ವಿಶೇಷ ಹಕ್ಕಿನ ಜಾಗದೊಂದಿಗೆ ಸೇರಿಸಿದ್ದಾರೆ. ಕೊಡಗಿನ ಶಾಸಕರು ಜಮ್ಮಾಬಾಣೆ ಬಗ್ಗೆ ಸಚಿವರಿಗೆ ಮನವರಿಕೆ ಮಾಡಿಕೊಡಬೇಕು. ಆಪಟ್ಟೀರ ಟಾಟು ಮೊಣ್ಣಪ್ಪ, ಜಿಲ್ಲಾ ವಕ್ತಾರು, ಕಾಂಗ್ರೆಸ್.

**
ಈಗಾಗಲೇ ನ್ಯಾಯಾಲಯದಲ್ಲಿ ಇತ್ಯರ್ಥವಾಗಿರುವ ಜಮ್ಮಾ ಜಾಗದ ವಿಚಾರವನ್ನು ಸರ್ಕಾರ ಮತ್ತೆ ಕೆದಕಿ ಕೊಡಗಿನ ಜನರಲ್ಲಿ ಗೊಂದಲ ಸೃಷ್ಟಿಸುವುದನ್ನು ಬಿಡಬೇಕು. ವನ್ಯಜೀವಿಗಳ ಉಪಟಳ ತಡೆ ಮತ್ತು ಅವುಗಳ ಆಹಾರ ಕೊರತೆ ಕುರಿತು ಗಂಭೀರ ಚಿಂತನೆ ಮಾಡಬೇಕು. ಗುತ್ತಿಗೆ ಆಧಾರದಲ್ಲಿ ಜಮ್ಮಾ ಜಾಗ ನೀಡುತ್ತೇವೆ ಎನ್ನುವ ಅರ್ಥಹೀನ ಹೇಳಿಕೆ ನೀಡುವುದನ್ನು ಜವಾಬ್ದಾರಿಯುತ ಸ್ಥಾನ ದಲ್ಲಿರುವ ಕಂದಾಯ ಸಚಿವರು ನಿಲ್ಲಿಸಬೇಕು. ಬ್ರಿಜೇಶ್ ಕಾಳಪ್ಪ, ಹಿರಿಯ ವಕೀಲರು.

**
ಕಂದಾಯ ಇಲಾಖೆಯಲ್ಲಿರುವ ಮೂಲಸಮಸ್ಯೆ ಬಗೆಹರಿಸಬೇಕಾದ ಕಂದಾಯ ಸಚಿವರು, ವಿನಾಕಾರಣ ಕೊಡಗಿನ ಜಮ್ಮಾ ಜಾಗದ ವಿಚಾರದಲ್ಲಿ ಹೊಸ ಸಮಸ್ಯೆ ಸೃಷ್ಟಿಸಲು ಮುಂದಾಗಿದ್ದಾರೆ. ಜಮ್ಮಾ ಜಾಗ ಗುತ್ತಿಗೆ ಆಧಾರದಲ್ಲಿ ನೀಡುವುದಾಗಿ ಹೇಳುವ ಮೂಲಕ ಕೊಡಗಿನ ಬೆಳೆಗಾರರಲ್ಲಿ ಆತಂಕ ಮತ್ತು ಗೊಂದಲ ಮೂಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕಂದಾಯ ಇಲಾಖೆ ಕಾಡುತ್ತಿರುವ ಸಮಸ್ಯೆ ಬಗೆಹರಿಸದೆ ಜಮ್ಮಾ ವಿಚಾರದಲ್ಲಿ ಮತ್ತೊಂದು ಸಮಸ್ಯೆ ಸೃಷ್ಟಿಸಲು ಮುಂದಾಗಿರುವುದು ಖಂಡನೀಯ. ಭೋಜಣ್ಣ
ಸೋಮಯ್ಯ, ಜಿಲ್ಲಾಧ್ಯಕ್ಷರು, ಆಮ್ ಆದ್ಮಿ ಪಾರ್ಟಿ.

**
ಜಮ್ಮಾ ನಮ್ಮ ಪಿತ್ರಾರ್ಜಿತ ಆಸ್ತಿ. ಜಮ್ಮಾ ಮಾರಾಟ ಮಾಡಬಾರದೆಂಬ ನಿರ್ಧಾರ ಪ್ರತಿಯೊಬ್ಬ ಕೊಡವರದ್ದು. ನಮ್ಮ ಹಕ್ಕು ಕಸಿದು ಕೊಳ್ಳುವ ಪ್ರಯತ್ನ ಯಾರೇ ಮಾಡಿದ್ದರೂ ಅದನ್ನು ಬೆಂಬಲಿಸಲಾಗದು. ಜಮ್ಮಾ ಜಾಗದ ಸಂಪೂರ್ಣ ಮಾಲೀಕತ್ವ ಹಿಡುವಳಿದಾರದ್ದು. ಇದನ್ನು ಉಳಿಸಿಕೊಳ್ಳಲು ರಾಜಕೀಯ ರಹಿತವಾಗಿ ಜನ ಒಂದಾಗಬೇಕು. ಕೊಡವರ ಅಸ್ತಿತ್ವಕ್ಕೆ ಧಕ್ಕೆ ಮಾಡುವುದನ್ನು ಸಹಿಸಲಾಗದು. ಮನೆಯಪಂಡ ಕಾಂತಿ ಸತೀಶ್, ಅಧ್ಯಕ್ಷರು, ವಿರಾಜಪೇಟೆ ಕೊಡವ ಸಮಾಜ ಪೊಮ್ಮಕ್ಕಡ ಒಕ್ಕೂಟ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net