

ಜಮಖಂಡಿ: ಬಾಗಲಕೋಟೆ-ವಿಜಯಪುರ ಅವಳಿ ಜಿಲ್ಲೆಯಲ್ಲಿ ಅರ್ಬನ್ ಬ್ಯಾಂಕ್ ಆರ್ಥಿಕ ಕೇಂದ್ರವಾಗಿ ಗುರುತಿಸಿಕೊಂಡಿದೆ ಎಂದು ಜಮಖಂಡಿ ಅರ್ಬನ್ ಬ್ಯಾಂಕಿನ ಅಧ್ಯಕ್ಷ ರಾಹುಲ್ ಕಲೂತಿ ಹೇಳಿದರು.
ನಗರದ ಅರ್ಬನ್ ಬ್ಯಾಂಕ್ ಸಭಾ ಗೃಹದಲ್ಲಿ ಆಯೋಜಿಸಿದ್ದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಅಖಂಡ ಜಿಲ್ಲೆಯ ಜೀವನಾಡಿಯಾಗಿರುವ ಈ ಬ್ಯಾಕ್ 4 ಜಿಲ್ಲೆಯ ವಿವಿಧೆಡೆ ಶಾಖೆಗಳನ್ನು ಹೊಂದಿದೆ ಎಂದರು.
ನೂತನ ಕಟ್ಟಡದ ಉದ್ಘಾಟನೆ ಸಮಾರಂಭವನ್ನು ಏ.2ರಂದು ಆಯೋಜಿಸಲಾಗಿದೆ. ಪ್ರತಿ ಒಬ್ಬ ಸದಸ್ಯರಿಗೂ ಆಮಂತ್ರಣ ಪತ್ರಿಕೆ ನೀಡಲಾಗಿದೆ. ಸುಮಾರು 40 ರಿಂದ 45 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು.
ಹಿರಿಯ ನಿರ್ದೇಶಕ, ವಿಧಾನ ಪರಿಷತ್ ಮಾಜಿ ಸದಸ್ಯ ಜಿ.ಎಸ್.ನ್ಯಾಮಗೌಡ ಮಾತನಾಡಿ, 1940ರಲ್ಲಿ ಅಪ್ಪಾರಾವ ಶಿಂಧೆ ನೇತೃತ್ವದಲ್ಲಿ ಪ್ರಾರಂಭವಾದ ಈ ಆರ್ಥಿಕ ಸಂಸ್ಥೆ ಹೆಮ್ಮರವಾಗಿ ಬೆಳೆದು ಹೆಸರನ್ನು ಉಳಿಸಿಕೊಂಡಿದೆ ಎಂದರು.
ನಿರ್ದೇಶಕ ಎ.ಆರ್. ಶಿಂಧೆ ಮಾತನಾಡಿ, 128 ಸದಸ್ಯರಿಂದ ಪ್ರಾರಂಭವಾದ ಸಂಸ್ಥೆ ಇಂದು 28 ಸಾವಿರ ಸದಸ್ಯರನ್ನು ಹೊಂದಿದೆ ಎಂದರು.
ನಿರ್ದೇಶಕ ಕಾಡು ಮಾಳಿ ಮಾತನಾಡಿ, ಒಮ್ಮೆಯೂ ಸಂಸ್ಥೆ ನಷ್ಟ ಅನುಭವಿಸಿಲ್ಲ. ಇದಕ್ಕೆ ಸದಸ್ಯರ ಹಾಗೂ ಗ್ರಾಹಕರ ವಿಶ್ವಾಸವೇ ಕಾರಣ ಎಂದರು.
ಪಕೀರಸಾಬ ಬಾಗವಾನ, ಅಪ್ಪಾಸಾಬ ಮನಗೂಳಿ, ನಂದೇಪ್ಪ ತಳವಾರ, ದರೇಪ್ಪ ತೇಲಿ, ಬಸವರಾಜ ಕಲೂತಿ, ಪ್ರಭು ಜನವಾಡ, ವೈಶಾಲಿ ಗೊಂದಿ, ಶೋಭಾ ಅರಕೇರಿ, ಹಾಗೂ ಈಶ್ವರ ಚೌಧರಿ, ಗಿರೀಶ ಬಾಂಗಿ, ಪಾರೀಸ್ ನಂದಗಾಂವ, ಪಿ.ಎಂ. ಜುಲ್ಪಿ, ಸಂದೀಪ ಹುಲ್ಯಾಳಕರ ಇತರರು ಇದ್ದರು.
ಕಿರಣ ಪಿಸಾಳ ಸ್ವಾಗತಿಸಿದರು. ರಾಮಣ್ಣ ಮರನೂರ ನಿರೂಪಿಸಿದರು. ಪ್ರಧಾನ ವ್ಯವಸ್ಥಾಪಕ ಎಸ್.ಆರ್.ತುಪ್ಪದ ವಂದಿಸಿದರು.
ಗಣ್ಯರು ಭಾಗಿ: ಜಮಖಂಡಿ ಅರ್ಬನ್ ಕೋ ಆಪ್ ಬ್ಯಾಂಕಿನ ನೂತನ ಪ್ರಧಾನ ಕಚೇರಿಯ ಕಟ್ಟಡದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯವನ್ನು ಕೋಲ್ಹಾಪುರದ ಅದೃಶ್ಯ ಕಾಡಸಿದ್ಧೇಶ್ವರ ಶ್ರೀ, ಮುತ್ತಿನಕಂತಿ ಹಿರೇಮಠದ ಶ್ರೀ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಶ್ರೀ, ಕಲ್ಯಾಣಮಠದ ಗೌರಿಶಂಕರ ಶಿವಾಚಾರ್ಯ ಶ್ರೀ, ಹುಲ್ಯಾಳ ಗುರುದೇವಾಶ್ರಮದ ಹರ್ಷಾನಂದ ಶ್ರೀ ವಹಿಸುವರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೂತನ ಕಟ್ಟಡ ಉದ್ಘಾಟಿಸುವರು. ಸಚಿವ ಎಚ್.ಕೆ. ಪಾಟೀಲ ಅಪ್ಪಾರಾವ ಶಿಂಧೆ ಅವರ ಪುತ್ಥಳಿ ಅನಾವರಣಗೊಳಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರ ಸಭಾ ಭವನ ಉದ್ಘಾಟಿಸುವರು. ಶಾಸಕ ಲಕ್ಷ್ಮಣ ಸವದಿ ಸಹಕಾರ ಧ್ವಜಾರೋಹಣ ಮಾಡುವವರು. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಆಡಳಿತ ಕಚೇರಿ ಉದ್ಘಾಟಿಸುವರು. ಸಚಿವ ಶಿವಾನಂದ ಪಾಟೀಲ ಶಾಖೆಯನ್ನು ಉದ್ಘಾಟಿಸುವರು. ರಾಹುಲ್ ಕಲೂತಿ ಅಧ್ಯಕ್ಷತೆ ವಹಿಸುವರು. ಸಂಸದ ಪಿ.ಸಿ. ಗದ್ದಿಗೌಡರ ನಾಮಲಕ ಅನಾವರಣಗೊಳಿಸುವರು. ರಮೇಶ ಜಿಗಜಿಣಗಿ ಸೇಪ್ ಲಾಕರ್ ಉದ್ಘಾಟಿಸುವರು. ರಾಧಾಕೃಷ್ಣ ದೊಡಮನಿ ಆಡಳಿತ ಮಂಡಳಿ ಸದಸ್ಯರ ಸಭಾಭವನ ಉದ್ಘಾಟಿಸುವರು. ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ನಿರ್ವಹಣಾ ಮಂಡಳಿ ಸದಸ್ಯರ ಸಭಾಭವನ ಉದ್ಘಾಟಿಸುವರು.