

ಬಾಗಲಕೋಟೆ:ವಾಹನ ಅಪಘಾತದಲ್ಲಿ ಸಾವನ್ನಪ್ಪಿದ್ದಾನೆ ಎನ್ನಲಾದ ಪ್ರಕರಣ ತಿರುವು ಪಡೆದುಕೊಂಡಿದ್ದು, ಅದು ಅಪಘಾತವಲ್ಲ, ಕೊಲೆ ಎನ್ನುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕೊಲೆಯ ಹಿಂದೆ ಪಡಿತರ ಅಕ್ಕಿ ಅಕ್ರಮ ದಂಧೆಯ ಕರಾಳ ಮುಖ ಕಾಣಿಸಿಕೊಂಡಿದೆ.
ರಬಕವಿ&ಬನಹಟ್ಟಿ ತಾಲೂಕಿನ ಮಧುರಖಂಡಿ ಬಳಿ ಬುಧವಾರ ಸಂಜೆ ಬೈಕ್ನಲ್ಲಿ ತೆರಳುತ್ತಿದ್ದ ಜಮಖಂಡಿ ತಾಲೂಕಿನ ಆಲಗೂರ ಗ್ರಾಮದ ಬಸವರಾಜ ಕಾನಗೊಂಡ (40) ಅವರು ಅಪಘಾತದಲ್ಲಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ಶವ ಕಂಡು ಬಂದಿತ್ತು.
ಆದರೆ, ಅಪಘಾತ ಹೇಗಾಯಿತು? ಎನ್ನುವ ಮಾಹಿತಿ ಇರಲಿಲ್ಲ. ಇದು ಸಹಜ ಅಪಘಾತವಲ್ಲ, ಕೊಲೆ ಎನ್ನುವ ಶಂಕೆಯೂ ವ್ಯಕ್ತವಾಗಿತ್ತು. ರಾತ್ರಿಯೇ ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಪ್ರಕರಣ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದು, ವಾಹನ ಹಾಯಿಸಿ ಕೊಲೆಗೆ ಸಂಬಂಧಪಟ್ಟಂತೆ ಸಂಶಯ ಇರುವ ನಾಲ್ವರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಎಸ್ಪಿ ಸಿದ್ಧಾರ್ಥ ಗೋಯಲ್ ತಿಳಿಸಿದ್ದಾರೆ.
* ಏನಿದು ಪ್ರಕರಣ...?
ಜಮಖಂಡಿ ಭಾಗದಲ್ಲಿ ಹಲವು ವರ್ಷಗಳಿಂದ ಅಕ್ರಮ ಅಕ್ಕಿ ದಂಧೆ ದೊಡ್ಡಮಟ್ಟದಲ್ಲಿ ನಡೆಯುತ್ತಾ ಬಂದಿದೆ. ರಬಕವಿ ಮೂಲಕ ಅಷ್ಪಕ್ ಎನ್ನುವ ವ್ಯಕ್ತಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹ, ಮಾರಾಟ ಮಾಡುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಬಸವರಾಜ ಕಾನಗೊಂಡ ಅವರಿಂದ ಪ್ರತಿ ತಿಂಗಳು ಮಾಮೂಲಿ ವಸೂಲಿ ಮಾಡುತ್ತಿದ್ದನಂತೆ. ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ದುಡ್ಡುಕೊಡುತ್ತ ಬಂದಿದ್ದು, ಇದೀಗ ಹೆಚ್ಚು ದುಡ್ಡಿಗಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದರಂತೆ. ಇದರಿಂದ ಇಬ್ಬರ ನಡುವೆ ವೈಮನಸ್ಸು ಉಂಟಾಗಿತ್ತು.
ಇದೇ ಕಾರಣಕ್ಕೆ ಇವರಿಬ್ಬರ ನಡುವೆ ಸಂಧಾನ ಮಾಡಿಸಲೆಂದು ಮತ್ತೊಮ್ಮೆ ಅಕ್ರಮ ಅಕ್ಕಿ ವಹಿವಾಟು ನಡೆಸುವ ಆರೋಪ ಇರುವ ವ್ಯಕ್ತಿ ಬುಧವಾರ ಬಸವರಾಜನನ್ನು ಕರೆಯಿಸಿದ್ದು, ಮಾತುಕತೆ ವಿಫಲವಾಗಿ ಅಷ್ಪಕ್ ಅಲ್ಲಿಂದ ಹೊರಟು ಹೋಗಿ ಬಳಿಕ ತನ್ನ ವಾಹನ ಚಾಲಕ ನಂದು ಎನ್ನುವವರಿಗೆ ಬಸವರಾಜನ ಚಲನವಲನದ ಮೇಲೆ ಕಣ್ಣಿಡಲು ಹೇಳಿದ್ದನಂತೆ.ಬಳಿಕ ಬಸವರಾಜ ಹಾಗೂ ರಾಜೀ ಸಂಧಾನಕ್ಕೆ ಕರೆದಿದ್ದ ವ್ಯಕ್ತಿ ಊಟ ಮಾಡಿದ್ದಾರೆ. ಅಲ್ಲಿಂದ ಬಸವರಾಜ ಒಬ್ಬರೇ ಬೈಕ್ನಲ್ಲಿ ಹೋಗುತ್ತಿದ್ದು, ಪ್ರತಿ ಹಂತದ ಮಾಹಿತಿಯನ್ನು ನಂದು ಅಷ್ಪಕ್ಗೆ ಕೊಡುತ್ತಿದ್ದ. ನಂದು ತನ್ನ ಸ್ನೇಹಿತ ಮಹೇಶ ಎನ್ನುವವರ ಸಹಾಯ ಪಡೆದುಕೊಂಡು ಅವರನ್ನು ಬೆನ್ನಟ್ಟಿದ್ದರು.
ಅತ್ತ ಅಷ್ಪಕ್ ತನ್ನ ಮಿನಿಗೂಡ್ಸ್ ವಾಹನದಲ್ಲಿ ಕಾಯ್ದು ನಿಂತಿದ್ದು, ಬಳಿಕ ಆ ವಾಹನವನ್ನು ನಂದು ಸೇರಿಕೊಂಡಿದ್ದಾನೆ. ಬೈಕ್ನಲ್ಲಿ ಮಹೇಶ ಬೆನ್ನಟ್ಟಿದ್ದಾನೆ. ಮಧುರಖಂಡಿ ಬಳಿ ಬಸವರಾಜ್ ಬೈಕ್ಗೆ ಮಿನಿ ಗೂಡ್ಸ್ ವಾಹನ ಗುದ್ದಿ ಅಲ್ಲಿಂದ ಪರಾರಿಯಾಗಿದ್ದಾರೆ. ಈ ವೇಳೆ ಅಷ್ಪಕ್ ಸಹೋದರನೊಬ್ಬ ಟನೆ ಮುಚ್ಚಿಡಲು ನೆರವು ಆಗಿದ್ದನಂತೆ. ಇದೆಲ್ಲವೂ ಪೊಲೀಸರು ಮಾಹಿತಿ ಕಲೆಹಾಕಿದಾಗ ಮತ್ತು ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ.ಅಷ್ಪಕ್ ಹಾಗೂ ಇತರ ಮೂವರನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ಗೋಯಲ್ ಮಾಹಿತಿ ನೀಡಿದರು.
* ಕೋಟ್
ಅಕ್ರಮ ಅಕ್ಕಿ ದಂಧೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ನಡೆದಿರುವ ಹಣದ ವರ್ಗಾವಣೆ ಬಗ್ಗೆ ದಾಖಲೆಗಳು ಲಭ್ಯವಾಗಿವೆ. ಜೊತೆಗೆ ಆಡಿಯೋಗಳು ದೊರೆತಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು.
> ಸಿದ್ಧಾರ್ಥ ಗೋಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಬಾಗಲಕೋಟೆ
* ಚಿತ್ರ : ಬಿಕೆಟಿ&ಬಸವರಾಜ ಕಾನಗೊಂಡ
ಬಸವರಾಜ ಕಾನಗೊಂಡ