

ಜಮಖಂಡಿ: ಸರ್ಕಾರಿ ಶಾಲೆಗಳು ಸುಧಾರಿಸಿದರೂ ಪಾಲಕರಿಗೆ ಖಾಸಗಿ ಶಾಲೆಗಳ ಮೇಲಿನ ವ್ಯಾಮೋಹ ಕಡಿಮೆಯಾಗುತ್ತಿಲ್ಲ. ಆದರೆ , ಖಾಸಗಿ ಶಾಲೆಗೆ ಪೈಪೋಟಿ ನೀಡಿರುವ ನಗರದ ಸರ್ಕಾರಿ ಶಾಲೆಯೊಂದು ಶಿಕ್ಷಣ ವ್ಯವಸ್ಥೆಯ ಬದಲಾವಣೆ ದಿಕ್ಸೂಚಿಯಂತೆ ಕಾಣುತ್ತಿರುವುದು ಶಿಕ್ಷಣ ಪ್ರೇಮಿಗಳ ಹುಬ್ಬೇರುವಂತೆ ಮಾಡಿದೆ.
ಕೂಲಿ ಕಾರ್ಮಿಕರೇ ತುಂಬಿರುವ ಜಯನಗರದಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಕಲ ಸೌಲಭ್ಯಗಳನ್ನು ಹೊಂದಿ ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡಿ ಗುಣಮಟ್ಟ ಶಿಕ್ಷಣಕ್ಕೆ ಹೆಸರಾಗಿದೆ.
ಶಾಲೆಯಲ್ಲಿ 1ರಿಂದ 7ನೇ ತರಗತಿವರೆಗೆ ಇರುವ ಶಾಲೆಯಲ್ಲಿ 269 ವಿದ್ಯಾರ್ಥಿಗಳಿದ್ದಾರೆ. ಶೇ.100 ರಷ್ಟು ವಿದ್ಯಾರ್ಥಿಗಳು ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಶಾಲೆ ಶಿಕ್ಷಕರು ಮಕ್ಕಳ ಕಲಿಕೆಗೆ ಅನುಕೂಲವಾಗುವಂತೆ ಮೂಲ ಸೌಲಭ್ಯಗಳನ್ನು ದಾನಿಗಳ ನೆರವಿನಿಂದ ಒದಗಿಸಿ ಸುಂದರ ಶಾಲೆಯಾಗಿ ರೂಪಿಸಿದ್ದಾರೆ.
ಶಾಲೆಗೆ ಕಾಯಕಲ್ಪ: ಜಮಖಂಡಿ ನಗರದ ಗುಡ್ಡದ ಪ್ರದೇಶದಲ್ಲಿಯ ಶಾಲೆಯಲ್ಲಿ ಸೇವೆ ಸಲ್ಲಿಸಲು ಶಿಕ್ಷಕರು ಹಿಂದೇಟು ಹಾಕುತ್ತಿದ್ದರು. ಎಸ್.ಎಸ್.ಹಿರೇಮಠ ಅವರು ಮುಖ್ಯಶಿಕ್ಷಕರಾಗಿ ಆಗಮಿಸಿದ ಬಳಿಕ ಕಲಿಕಾ ಪರಿಕರಗಳು ಇಲ್ಲದೆ ಹಾಳು ಕೊಂಪೆಯಂತಿದ್ದ ಶಾಲೆಗೆ ರೋಟರಿ ಸಂಸ್ಥೆ ಸೇರಿ ವಿವಿಧ ಸಂಸ್ಥೆಗಳು ಹಾಗೂ ದಾನಿಗಳಿಂದ ಕಲಿಕಾ ಪರಿಕರಗಳನ್ನು ಸಂಗ್ರಹಿಸಿ ಅವುಗಳ ಮೂಲಕ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಗುಣಮಟ್ಟ ಹೆಚ್ಚಳವಾಗುವಂತೆ ಮಾಡಿದ್ದನ್ನು ಪಾಲಕರು ಮುಕ್ತ ಕಂಠದಿಂದ ಹೊಗಳುತ್ತಿದ್ದಾರೆ. ಹಿಂದಿನ ಎಸ್‌ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಭಜಂತ್ರಿ ಅವರು ಶಾಲೆಯ ಕೊಠಡಿ ನಿರ್ಮಿಸಲು ತಮ್ಮ ಹಮ್ಮು ಬಿಟ್ಟು ತಾವೇ ಸ್ವತಃ ಪಾಯಾ ಅಗೆಯುವ ಮೂಲಕ ಶ್ರಮದಾನ ಮಾಡಿ ಶಿಕ್ಷಣಪ್ರೇಮ ಮೆರೆದಿದ್ದನ್ನು ಪಾಲಕರು ಸ್ಮರಿಸುತ್ತಾರೆ.
ಮಕ್ಕಳಲ್ಲಿ ಶಿಸ್ತು ಮೂಡಿಸುವ ಉಡುಪು : ಸರ್ಕಾರ ನೀಡಿದ ಸಮವಸದ ಬಟ್ಟೆಯಿಂದ ಟೈಲರ್ ಒಬ್ಬರನ್ನು ಕರೆಯಿಸಿ ಕಡಿಮೆ ದರದಲ್ಲಿ ಮಕ್ಕಳಿಗೆ ಕೋಟ್, ಶರ್ಟ್, ಪ್ಯಾಂಟ್, ಚೂಡಿದಾರ ಹೊಲಿಸಿದ್ದಾರೆ. ಮಕ್ಕಳು ಸೋಮವಾರ ಮತ್ತು ಗುರುವಾರ ಸರ್ಕಾರ ನೀಡಿದ ಕೋಟ್ ಧರಿಸಿದರೆ, ಮಂಗಳವಾರ ಮತ್ತು ಶುಕ್ರವಾರ ಕೆಂಪು ಬಿಳಿ ಮಿಶ್ರಿತ ಬಟ್ಟೆ, ಬುಧವಾರ ತಮಗಿಸ್ಟವಾದ ಉಡುಪು, ಶನಿವಾರ ಬಿಳಿ ಬಟ್ಟೆ, ಸ್ವೆಟರ್ ಧರಿಸುತ್ತಾರೆ. ಇದು ಮಕ್ಕಳಲ್ಲಿ ಶಿಸ್ತು ಬೆಳೆಸಲು ಸಹಕಾರಿಯಾಗಿದೆ.
ಶಾಲೆಯಲ್ಲಿ ಗ್ರಂಥಾಲಯ: ಶಾಲಾ ಆವರಣದಲ್ಲಿರುವ ಸಣ್ಣ ಕೊಠಡಿಯಲ್ಲಿ ಡಿಕ್ಷನರಿ, ಕನ್ನಡ, ಹಿಂದಿ, ಇಂಗ್ಲಿಷ್ ಗ್ರಾಮರ್ ಬುಕ್ಸ್, ವಿಜ್ಞಾನ, ಇಂಗ್ಲಿಷ್ ಪುಸ್ತಕಗಳು, ಮಹಾನ್ ವ್ಯಕ್ತಿಗಳ ಜೀವನ ಚರಿತ್ರೆ, ಹೆಸರಾಂತ ಕವಿಗಳ ಗ್ರಂಥಗಳನ್ನು ಸಂಗ್ರಹಿಸಿ ಒಂದು ಗ್ರಂಥಾಲಯ ರೂಪಿಸಲಾಗಿದೆ. ಮಕ್ಕಳ ಓದುವ ಹವ್ಯಾಸಕ್ಕೆ ಗ್ರಂಥಾಲಯ ಅನುಕೂಲ ಕಲ್ಪಿಸಿದೆ.
ಪ್ರತಿಯೊಂದು ಕೊಠಡಿ ಸ್ಮಾರ್ಟ್ ಕ್ಲಾಸ್: ಶಾಲೆಯ ಎಲ್ಲ 7 ಕೊಠಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಮಾಡಲಾಗಿದೆ. ಸ್ಮಾರ್ಟ್ ಟಿವಿ, ಗ್ರೀನ್ ಬೋರ್ಡ್ ಅಳವಡಿಸಿದ್ದಾರೆ. ಮಕ್ಕಳ ಸುಲಭ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ಫೋಸಿಸ್, ರೋಟರಿ ಸೇರಿ ವಿವಿಧ ಸಂಘ ಸಂಸ್ಥೆಯವರು 5 ಕಂಪ್ಯೂಟರ್‌ಗಳನ್ನು ನೀಡಿದ್ದಾರೆ. ಮಕ್ಕಳ ಕಂಪ್ಯೂಟರ್ ಕಲಿಕೆಗೆ ಈ ಶಾಲೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳ ನಲಿಕಲಿಗಾಗಿ ರೌಂಡ್ ತಟ್ಟೆ ಬದಲು ರೌಂಡ್ ಟೇಬಲ್‌ಗಳನ್ನು ಅಳವಡಿಸಲಾಗಿದೆ.
ಉತಾರ ನೀಡಿ ಪುಣ್ಯ ಕಟ್ಟಿಕೊಳ್ಳಿ: ಶಾಲೆ ಜಾಗಕ್ಕೆ ಸಂಬಂಧಿಸಿದಂತೆ ಕೈ ಬರಹ ಉತಾರ ಇದೆ. ಆದರೆ ಕಂಪ್ಯೂಟರ್ ಉತಾರ ಇಲ್ಲದಿರುವುದು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಶಿಕ್ಷಕರಿಗೆ ಕಷ್ಟವಾಗುತ್ತಿದೆ. ಈ ನಿಟ್ಟಿನಲ್ಲಿ ಹಿರಿಯ ಅಧಿಕಾರಿಗಳು ಉತಾರ ಕೊಡಿಸಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಎಸ್‌ಡಿಎಂಸಿ ಉಪಾಧ್ಯಕ್ಷೆ ಸವಿತಾ ಗೋಟಡಕಿ ಹೇಳುತ್ತಾರೆ.
ಹೈಟೆನ್ಷನ್ ವೈರ್ ಸ್ಥಳಾಂತರಿಸಿ: ಶಾಲೆ ಮೇಲೆ ಹಾಯ್ದು ಹೋಗಿರುವ ವಿದ್ಯುತ್ ಹೈಟೆನ್ಷನ್ ತಂತಿಯಿಂದ ಯಾವಾಗ ಏನಾಗುತ್ತದೆ ಎಂಬ ಆತಂಕದಲ್ಲೇ ಮಕ್ಕಳು ಕಲಿಕೆಯಲ್ಲಿ ತೊಡಗಿದ್ದಾರೆ. ತಂತಿಯನ್ನು ಸ್ಥಳಾಂತರ ಮಾಡಿ ಮಕ್ಕಳಿಗೆ ರಕ್ಷಣೆ ನೀಡಬೇಕು ಎಂದು ಪಾಲಕರು ಒತ್ತಾಯಿಸಿದ್ದಾರೆ.
ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಬೇಕು ಎಂದು ಇಲ್ಲಿನ ಎಲ್ಲ ಶಿಕ್ಷಕರು ಬಹಳಷ್ಟು ಶ್ರಮಿಸುತಿದ್ದಾರೆ. ಅವರ ಜೊತೆ ಪಾಲಕರು ಕೈಜೋಡಿಸುತ್ತಿದ್ದಾರೆ. ಶಾಲೆಗೆ ತುರ್ತಾಗಿ ಕಂಪ್ಯೂಟರ್ ಉತಾರ ಕೊಡಿಸಿದರೆ ಸರ್ಕಾರದಿಂದ ಸೌಲಭ್ಯಗಳನ್ನು ಪಡೆಯಲು ಅನುಕೂಲವಾಗುತ್ತದೆ. ಎಸ್.ಎಸ್.ಹಿರೇಮಠ. ಮುಖ್ಯಶಿಕ್ಷಕ