ಪ್ರಗತಿ ಪಥದತ್ತ ಜಮಖಂಡಿ ಬ್ಯಾಂಕ್

Jamkhandi Bank on the path to progress
ಜಮಖಂಡಿ ನಗರದ ಬಸವ ಭವನದಲ್ಲಿ ನಡೆದ ದಿ. ಜಮಖಂಡಿ ಅರ್ಬನ್ ಕೋ- ಅಪರೇಟಿವ್ ಬ್ಯಾಂಕ್ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ಹಿರಿಯ ನಿರ್ದೇಶಕ, ವಿ.ಪ. ಮಾಜಿ ಸದಸ್ಯ ಜಿ.ಎಸ್. ನ್ಯಾಮಗೌಡ ಉದ್ಘಾಟಿಸಿದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಮನಗೂಳಿ, ಉಪಾಧ್ಯಕ್ಷ ಮಾಮೂನ್ ಪಾರ್ಥನಳ್ಳಿ, ನಿರ್ದೇಶಕರಾದ ಎಫ್.ಎ. ಬಾಗವಾನ, ಉಮೇಶ ಮಹಾಬಳಶೆಟ್ಟಿ, ಎನ್.ಜಿ. ದಡ್ಡಿಮನಿ ಇತರರಿದ್ದಾರೆ.
Published on

ಜಮಖಂಡಿ: ಷೇರುದಾರರ ಸಹಕಾರ, ನಿರ್ದೇಶಕರ ಶ್ರಮ, ಸಿಬ್ಬಂದಿ ಪ್ರಾಮಾಣಿಕ ಕಾರ್ಯದಿಂದ ಮೂರು ವರ್ಷದಲ್ಲಿ ನೂರು ಕೋಟಿಗೂ ಅಧಿಕ ಠೇವಣಿ ಅಧಿಕವಾಗಿದೆ. ಇದರಿಂದ ಬ್ಯಾಂಕ್ ಸರ್ವತೋಮುಖ ಅಭಿವೃದ್ಧಿಪಡಿಸಲು ಸಾಧ್ಯವಾಗಿದೆ ಎಂದು ಅರ್ಬನ್ ಬ್ಯಾಂಕ್ ಅಧ್ಯಕ್ಷ ಅಪ್ಪಾಸಾಬ ಮನಗೂಳಿ ಹೇಳಿದರು.

ನಗರದ ಬಸವ ಭವನದಲ್ಲಿ ನಡೆದ ಸ್ಥಳೀಯ ಪ್ರತಿಷ್ಠಿತ ದಿ. ಜಮಖಂಡಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿ, ಮುಧೋಳ, ಲೋಕಾಪುರ, ತೊದಲಬಾಗಿ ಹಾಗೂ ಜಮಖಂಡಿಯಲ್ಲಿ ಮಹಿಳಾ ಶಾಖೆಗಳನ್ನು ಪ್ರಾರಂಭಿಸಿ ಗ್ರಾಹಕರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ ಎಂದರು.

ಪ್ರತಿಯೊಂದು ಶಾಖೆ ಪ್ರಾರಂಭಿಸಲು ಅಂದಾಜು 5 ಕೋಟಿ ರೂ. ಠೇವಣಿ ಇಡಲಾಗಿದೆ. ಜಮಖಂಡಿ ಎಪಿಎಂಸಿಯಲ್ಲಿ ನಿರ್ಮಿಸಿರುವ ಬ್ಯಾಂಕ್‌ನ ನೂತನ ಕಟ್ಟಡವನ್ನು ಶೀಘ್ರ ಲೋಕಾರ್ಪಣೆಗೊಳಿಸಲಾಗುವುದೆಂದರು. ಮುಂದಿನ ದಿನಗಳಲ್ಲಿ ಮತ್ತೆ ಐದು ಶಾಖೆಗಳನ್ನು ಆರಂಭಿಸುವ ಯೋಚನೆ ಹೊಂದಲಾಗಿದೆ. ಬ್ಯಾಂಕ್ ವಹಿವಾಟು 478.78 ಕೋಟಿಯಷ್ಟು ಆಗಿದೆ. ಪ್ರಸಕ್ತ ಸಾಲಿನಲ್ಲಿ ಶೇ. 15.09 ರಷ್ಟು ವಹಿವಾಟಿನಲ್ಲಿ ಅಭಿವೃದ್ಧಿ ಹೊಂದಿದೆ ಎಂದರು.

ನಿರ್ದೇಶಕ ಡಾ. ಉಮೇಶ ಮಹಾಬಳಶೆಟ್ಟಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲೂ ಜಮಖಂಡಿ ಅರ್ಬನ್ ಬ್ಯಾಂಕ್‌ನ ಎಲ್ಲ ಸೌಲಭ್ಯಗಳನ್ನು ನೀಡಿ ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿ ಸಮಾನವಾಗಿ ಕಾರ್ಯನಿರ್ವಹಿಸುತ್ತಿದೆ. ಅಂದಾಜು 340 ಕೋಟಿ ರೂ. ಅಧಿಕ ಠೇವಣಿ ಹೊಂದಿದೆ. ಇದು ವಿಶ್ವಾಸಾರ್ಹಕ್ಕೆ ಪಾತ್ರವಾಗಿದೆ ಎಂದರು.

ಸ್ವಂತ ಬಂಡವಾಳದಿಂದ ನೂತನ ಕಟ್ಟಡ ನಿರ್ಮಾಣ ಕಾರ್ಯ ನಡೆದಿದೆ. ಆರ್‌ಟಿಜಿಎಸ್ ನೆಫ್ಟ್ ಸೇರಿ ವಿವಿಧ ಸೌಲಭ್ಯ ನೀಡಲಾಗುತ್ತಿದೆ. ಒಟ್ಟು 8 ಎಟಿಎಂ ಕೇಂದ್ರ ಆರಂಭಿಸಲಾಗಿದೆ. ಇದರಿಂದ ಅಂದಾಜು 35.40 ಲಕ್ಷ ರೂ. ಕಮಿಷನ್ ಪಡೆಯಲಾಗುತ್ತಿದೆ ಎಂದರು. ಎಲ್ಲ ಸದಸ್ಯರಿಗೆ ಆರೋಗ್ಯ ಬಿಮಾ ಯೋಜನೆ ಆರಂಭಿಸುವ ಯೋಜನೆ ಹೊಂದಲಾಗಿದೆ. ಹೆಲ್ತ್ ಕೇರ್ ನಾನ್ ಬೇಸಡ್ ಇನ್ಶುರನ್ಸ್ ಸೌಲಭ್ಯ ನೀಡುವ ಯೋಚನೆ ಹೊಂದಲಾಗಿದೆ. ನಿರ್ವಾಹಕ ಮಂಡಳಿ ಸಮಿತಿ ರಚಿಸಲಾಗಿದೆ ಎಂದರು.

ಹಿರಿಯ ನಿರ್ದೇಶಕ ಜಿ.ಎಸ್. ನ್ಯಾಮಗೌಡ ಮಾತನಾಡಿ, ಹಿರಿಯರ ಸಹಾಯ ಸಹಕಾರದಿಂದ ಜಮಖಂಡಿ ಅರ್ಬನ್ ಬ್ಯಾಂಕ್ ರಾಜ್ಯದಲ್ಲಿ ತನ್ನದೇ ಆದ ಹೆಸರನ್ನು ಗಳಿಸಿದೆ. ಉತ್ತರ ಕರ್ನಾಟಕದಲ್ಲೇ ಅರ್ಬನ್ ಬ್ಯಾಂಕ್ ಎಲ್ಲರ ಪ್ರೀತಿಗೆ ಪಾತ್ರವಾಗಿದೆ ಎಂದರು.

ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ವಿಶೇಷ ಸಾಧನೆಗೈದ ಸಾಧಕರನ್ನು ಗೌರವಿಸಲಾಯಿತು.

ಉಪಾಧ್ಯಕ್ಷ ಮಾಮೂನ್ ಪಾರ್ಥನಳ್ಳಿ, ನಿರ್ದೇಶಕರಾದ ಎಫ್.ಎ. ಬಾಗವಾನ, ಎನ್.ಜಿ. ದಡ್ಡಿಮನಿ, ವಿ.ಐ. ಕಂಬಿ, ಐ.ಬಿ. ಬಂಡಿಗಣಿ, ಆರ್. ಎಸ್. ಕರಡಿ, ಡಿ.ಆರ್. ತೇಲಿ, ಪಿ.ಎಸ್. ಮಹಾಲಿಂಗಪುರ, ರಾಹುಲ್ ಕಲೂತಿ, ಬಿ.ಎಸ್. ಕಲೂತಿ, ಎಸ್.ಎಚ್. ಕುಳ್ಳೊಳ್ಳಿ, ಎ.ಎಸ್. ಆನಿಖಿಂಡಿ, ಶೋಭಾ ಅರಕೇರಿ, ವೃತ್ತಿಪರ ನಿರ್ದೇಶಕರಾದ ಜಿ.ಬಿ. ಕಟಗಿ, ಆರ್.ಎಸ್. ಕಲ್ಕೇರಿ, ನಿರ್ವಹಣಾ ಮಂಡಳಿ ಸದಸ್ಯರಾದ ಎ.ಆರ್. ಶಿಂಧೆ, ಐ. ಎಂ. ಚೌಧರಿ, ಪಿ.ಎಂ. ಜುಲ್ಫಿ, ಪ್ರಧಾನ ವ್ಯವಸ್ಥಾಪಕ ಎಸ್.ಆರ್. ತುಪ್ಪದ, ವ್ಯವಸ್ಥಾಪಕ ಎಸ್.ಎಸ್. ಹಲ್ಯಾಳ ಇದ್ದರು.

ಸರಸ್ವತಿ ಸಬರದ ಪ್ರಾರ್ಥಿಸಿದರು. ನಿರ್ದೇಶಕಿ ವೈಶಾಲಿ ಗೊಂದಿ ಸ್ವಾಗತಿಸಿದರು. ಶಾಖಾ ವ್ಯವಸ್ಥಾಪಕ ರಮೇಶ ಮರನೂರ ನಿರೂಪಿಸಿ, ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net