

ಜಮಖಂಡಿ: ಭೂಸ್ವಾಧೀನದ ಪರಿಹಾರದ ಹಣ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಜಮಖಂಡಿ ಉಪವಿಭಾಗಾಧಿಕಾರಿಯ ಸರ್ಕಾರಿ ವಾಹನ ಸೋಮವಾರ ಜಪ್ತಿ ಮಾಡಿದ್ದಾರೆ.
ಕೆರೆ ನಿರ್ಮಾಣಕ್ಕೆ ಸರ್ಕಾರ ಮುಧೋಳ ತಾಲೂಕಿನ ಬೆಳಗಲಿ ಗ್ರಾಮದ ಬಾಳಪ್ಪ ನಿಂಗಪ್ಪ ಕಪ್ಪಲಗುದ್ದಿ, ದರೆಪ್ಪ ಮುತ್ತಪ್ಪ ಕಪ್ಪಲಗುದ್ದಿ ಎಂಬ ರೈತರ 4 ಎಕರೆ 28 ಗುಂಟೆ ಜಮೀನು ಭೂಸ್ವಾಧೀನ ಮಾಡಿಕೊಂಡಿತ್ತು. ಅದಕ್ಕೆ ಪರಿಹಾರ ನೀಡದೆ ಇರುವದರಿಂದ ಸಂತ್ರಸ್ತ ರೈತರು ಕಚೇರಿಗೆ ಅಲೆದು ಸುಸ್ತಾಗಿ ನ್ಯಾಯಾಲಯದ ಮೊರೆ ಹೋಗಿದ್ದರು.
ನ್ಯಾಯಾಲಯವು 43.33,306 ಲಕ್ಷ ರೂ.ಪರಿಹಾರ ನೀಡುವಂತೆ ಜಮಖಂಡಿ ಹಿರಿಯ ದಿವಾಣಿ ನ್ಯಾಯಾಲಯ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದ ಬಳಿಕವೂ ಪರಿಹಾರವನ್ನು ಅಧಿಕಾರಿಗಳು ನೀಡಿರಲಿಲ್ಲ. ಹೀಗಾಗಿ ಅಧಿಕಾರಿಗಳ ವಾಹನ, ಕಚೆರಿಯ ಪೀಠೋಪಕರಣ ಸೇರಿದಂತೆ ಚರಾಸ್ತಿ ಮುಟ್ಟುಗೋಲಿಗೆ ಕೋರ್ಟ್ ಆದೇಶ ಮಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ವಾಹನವನ್ನು ನ್ಯಾಯವಾದಿ ಹಾಗೂ ರೈತರ ಸಮ್ಮುಖದಲ್ಲಿ ಜಪ್ತಿ ಮಾಡಲಾಯಿತು.