ಜಮೀರ್‌ಗೆ ಭಾರತವು ಪಾಕ್ ಆಗಲೆಂದು ಆಸೆ: ಈಶ್ವರಪ್ಪ

ex dcm eshwarappa
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಭಾರತದ ಅನ್ನ ತಿಂದು ಹಿಂದುಗಳ ಭೂಮಿ ಕಿತ್ತುಕೊಳ್ಳುವ ಮೂಲಕ ರಾಷ್ಟ್ರವಿರೋಧಿ ಚಟುವಟಿಕೆ ನಡೆಸಲಾಗುತ್ತಿದೆ. ಜಮೀರ್‌ನಂತಹ ರಾಷ್ಟ್ರದ್ರೋಹಿಗಳು ರಾಜ್ಯವನ್ನು ಇಸ್ಲಾಮೀಕರಣ ಮಾಡಲು ಹೊರಟಿದ್ದಾರೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ವಕ್ಫ್ ಬೋರ್ಡ್ ಹೆಸರಿಗೆ ಮಾಡಿಕೊಂಡಿರುವ ಸಾವಿರಾರು ಹೆಕ್ಟೇರ್ ಜಮೀನನ್ನು ಅನೇಕ ವರ್ಷಗಳಿಂದ ರೈತರು ಉಳುಮೆ ಮಾಡಿಕೊಂಡು ಬಂದಿದ್ದಾರೆ. ಆದರೆ ಇದ್ದಕ್ಕಿದ್ದಂತೆ ಕೋಟ್ಯಂತರ ರೂ. ಮೌಲ್ಯದ ಜಮೀನುಗಳನ್ನು ವಕ್ಫ್ ಬೋರ್ಡ್ ಆಸ್ತಿಯನ್ನಾಗಿಸಲು ರಾಜ್ಯ ಸರ್ಕಾರ ಹೊರಟಿದೆ ಎಂದು ದೂರಿದರು. ಸಚಿವ ಜಮೀರ್ ಮಾತ್ರವಲ್ಲ, ಮಹಮ್ಮದ್ ಅಲಿ ಜಿನ್ನಾ ಬಂದರೂ ಕರ್ನಾಟಕದಲ್ಲಿರುವ ರೈತರ ಒಂದಿಂಚೂ ಭೂಮಿಯನ್ನು ವಕ್ಫ್ ಬೋರ್ಡ್ ಕಿತ್ತುಕೊಳ್ಳುವುದಕ್ಕೆ ಬಿಡುವುದಿಲ್ಲ. ರಾಜ್ಯ ಸರ್ಕಾರದಲ್ಲಿ ಬೇರೆ ಮಂತ್ರಿಗಳು ಬದುಕಿದ್ದರೂ ಸತ್ತಂತೆ ಇದ್ದಾರೆ. ಹಾಗಾದರೆ ಅವರಿಗೆ ಉಪ ಚುನಾವಣೆಯಲ್ಲಿ ಹಿಂದುಗಳ ಮತ ಬೇಡವೇ ಎಂದು ಪ್ರಶ್ನಿಸಿದರು.

ಸಿಎಂ ಸುಳ್ಳಿನ ಸರದಾರ

ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳಿನ ಸರದಾರ. ಆರ್‌ಟಿಸಿಯಲ್ಲಿ ವಕ್ಫ್ ಹೆಸರು ತೆಗೆದುಹಾಕುವುದಾಗಿ ಹೇಳಿದ್ದರು. ಆದರೆ ಇನ್ನೂ ಆ ಕೆಲಸ ಮಾಡಿಲ್ಲ ಎಂದು ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಅವರು ಇತ್ತೀಚೆಗೆ ಸವದತ್ತಿ ಯಲ್ಲಮ್ಮ ಸೇರಿ ಹಲವು ಧಾರ್ಮಿಕ ಕೇಂದ್ರಗಳಿಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದಾರೆ. ಅದರ ಫಲ ಸಿಗಬೇಕಾದರೆ ಕಿತ್ತುಕೊಂಡಿರುವ ರೈತರ ಜಮೀನು ಮರಳಿಸಬೇಕು. ಹಾಗೆ ಮಾಡಿದರೆ ಮಾತ್ರ ಸಿಎಂ ಕಂಟಕದಿಂದ ಮುಕ್ತರಾಗಬಹುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net