

ಮೈಸೂರು: ದಸರಾ ಜಂಬೂಸವಾರಿ ಮೆರವಣಿಗೆ ಈ ಬಾರಿ ಅಚ್ಚುಕಟ್ಟಾಗಿ ನಡೆದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಹಲವು ವರ್ಷಗಳಿಂದ ಅರಮನೆ ಅಂಗಳದಲ್ಲಿ ಮೆರವಣಿಗೆ ಸಾಗುವ ದಾರಿಯಲ್ಲಿ ದಸರೆಗೆ ನಾನಾ ಸಮಿತಿ ಸದಸ್ಯರು, ಛಾಯಾಗ್ರಾಹಕರು, ವಿಡಿಯೋಗ್ರಾಫರ್, ಅಧಿಕಾರಿಗಳು ತುಂಬಿ ಮೆರವಣಿಗೆ ಅಧ್ವಾನದಂತೆ ಭಾಸವಾಗಿಗುತ್ತಿತ್ತು. ಇದರಿಂದ ಹಿಂದೆ ಕುಳಿತವರಿಗೆ ಮೆರವಣಿಗೆ ಸರಿಯಾಗಿ ಕಾಣದೆ ಕೂಗಾಟ, ಜಗಳ ನಡೆಯುವುದು ಮಾಮೂಲಿ ಎನ್ನುವಂತಾಗಿತ್ತು.
ಇದಕ್ಕೆ ಈ ಬಾರಿ ಕಡಿವಾಣ ಹಾಕಿದ ದಸರಾ ವಿಶೇಷಾಧಿಕಾರಿಯಾದ ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ, ನಗರ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು ಮೆರವಣಿಗೆ ಸಾಗುವ ದಾರಿಯಲ್ಲಿ ಯಾರು ಅಡ್ಡದಿಡ್ಡಿ ಓಡಾಡಬಾರದು, ಕುರ್ಚಿಯಲ್ಲಿ ಕೂತ ಜನರು ಮೇಲೇಳದೆ ಕುಳಿತುಕೊಳ್ಳಬೇಕು ಎನ್ನುವ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದರು.
ಅದಕ್ಕಾಗಿ ಆಯಕಟ್ಟಿನ ಜಾಗದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಅಂಬಾರಿಗೆ ಪುಷ್ಪಾರ್ಚನೆ ಮಾಡುವವರೆಗೂ ಇದರ ಬಗ್ಗೆ ಎಚ್ಚರ ವಹಿಸಿದ್ದರು. ಅಲ್ಲದೆ ಕಲಾತಂಡ, ಸ್ತಬ್ಧಚಿತ್ರದ ಜತೆಯಲ್ಲಿಯೂ ಹೆಚ್ಚುವರಿಯಾಗಿ ಯಾರೂ ತೆರಳದಂತೆ ಕ್ರಮಕೈಗೊಳ್ಳಲಾಗಿತ್ತು. ಜಿಲ್ಲಾಡಳಿತ, ಪೊಲೀಸರ ಈ ಕ್ರಮ ಪ್ರಶಂಸೆಗೆ ಪಾತ್ರವಾಯಿತು.
ಪೊಲೀಸ್ ಬಿಗಿ ಬಂದೋಬಸ್ತ್:
ನಾಡಹಬ್ಬ ದಸರಾ ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿ ಮೆರವಣಿಗೆ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಎಚ್ಚರ ವಹಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಬೆಂಗಳೂರಿನಲ್ಲಿ ನಡೆದ ಆರ್‌ಸಿಬಿ ಸಂಭ್ರಮಾಚರಣೆ, ತಮಿಳುನಾಡಿನಲ್ಲಿ ನಟ ವಿಜಯ್ ರ‌್ಯಾಲಿ ಸಮಯದಲ್ಲಿ ಉಂಟಾಗಿದ್ದ ಕಾಲ್ತುಳಿತದಿಂದ ಎಚ್ಚೆತ್ತು ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿತ್ತು.
ಹೊರಗೆ ಹಾಗೂ ಅರಮನೆ ಒಳ ಆವರಣದಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸುವ ಮೂಲಕ ಸರ್ಪಗಾವಲಿನಲ್ಲಿ ಜಂಬೂಸವಾರಿ ನಡೆಸಲಾಯಿತು. ಅರಮನೆ ಪ್ರವೇಶಿಸುವ ಎಲ್ಲ ದ್ವಾರಗಳಲ್ಲಿಯೂ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿತ್ತು. ಜಂಬೂಸವಾರಿ ಮೆರವಣಿಗೆ ಪಾಸ್, ಟಿಕೆಟ್ ಇದ್ದವರು ಬ್ಯಾರಿಕೇಡ್‌ಗಳ ಮೂಲಕ ನೇರ ನಿಗದಿತ ಜಾಗಕ್ಕೆ ತೆರಳಿ ಕೂರಬೇಕಿತ್ತು. ಇದಕ್ಕಾಗಿ ಅರಮನೆ ಹೊರಗಿನಿಂದಲೇ ಮರದ ಪೋಲ್‌ಗಳನ್ನು ಕಟ್ಟಿ ನೂಕುನುಗ್ಗಲು ಉಂಟಾಗದಂತೆ ಕ್ರಮಕೈಗೊಳ್ಳಲಾಯಿತು.
ಭದ್ರತೆಗಾಗಿ ಸಿವಿಲ್, ಟ್ರಾಫಿಕ್ ಸಿಬ್ಬಂದಿ ಸೇರಿ ಒಟ್ಟು 6384 ಪೊಲೀಸರನ್ನು ಭದ್ರತೆ ಹಾಗೂ ಸಂಚಾರ ನಿಯಂತ್ರಣಕ್ಕೆ ನಿಯೋಜಿಸಲಾಗಿತ್ತು. 5 ಎಸ್‌ಪಿ, 35 ಡಿವೈಎಸ್ಪಿ, 140 ಸರ್ಕಲ್ ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 6384 ಪೊಲೀಸ್ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದಾರೆ. 35 ಕೆಎಸ್‌ಆರ್‌ಪಿ, 15 ಸಿಎಆರ್, ಡಿಎಆರ್, 29 ಎಎಸ್‌ಸಿ ತಂಡ, 1 ಗರುಡ ಪೊಲೀಸ್, 1 ಆರ್‌ಎಎಫ್, 1200 ಹೋಂ ಗಾರ್ಡ್‌ಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.
ಎಲ್ಲೆಡೆ ಚಲನವಲನಗಳ ಮೇಲೆ ನಿಗಾ ಇಡಲು ನಗರದಲ್ಲಿ ಈಗಾಗಲೇ ಇರುವ 30,614 ಸಿಸಿ ಕ್ಯಾಮರಾಗಳ ಜತೆಗೆ ಹೆಚ್ಚುವರಿಯಾಗಿ ಅರಮನೆ, ಬನ್ನಿಮಂಟಪ ಮೈದಾನ, ಮೆರವಣಿಗೆ ಮಾರ್ಗ, ಇತರ ಪ್ರಮುಖ ಸ್ಥಳಗಳಲ್ಲಿ 200 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. 32 ಅಗ್ನಿಶಾಮಕ ದಳ, 26 ಆಂಬುಲೆನ್ಸ್‌ಗಳನ್ನು ನಿಯೋಜನೆ ಮಾಡಲಾಗಿತ್ತು.
ಜನಸಂದಣಿ ನಿಯಂತ್ರಣ ಹಾಗೂ ಸಾರ್ವಜನಿಕರಿಗೆ ಸೂಚನೆ ನೀಡಲು ಅರಮನೆಯ ಎಲ್ಲ ದ್ವಾರಗಳು, ಜಂಬೂಸವಾರಿ ಮಾರ್ಗದ ಕೆ.ಆರ್. ವೃತ್ತ, ಆಯುರ್ವೇದ ವೃತ್ತ, ಆರ್‌ಎಂಸಿ ವೃತ್ತ, ಹೈವೇ ಸರ್ಕಲ್, ಬನ್ನಿಮಂಟಪ ಮೈದಾನದ ಎಲ್ಲ ದ್ವಾರಗಳು ಹಾಗೂ ಇತರ ಸ್ಥಳಗಳಲ್ಲಿ ಒಟ್ಟು 33 ‘ಪಬ್ಲಿಕ್ ಅಡ್ರೆಸ್ ಸಿಸ್ಟಮ್’ ನೊಂದಿಗೆ ಸಿವಿಲ್ ಪೊಲೀಸ್ ಸಿಬ್ಬಂದಿ ಕಾರ್ಯನಿರ್ವಹಿಸಿದರು.
ಟಿಕೆಟ್ ಇದ್ದವರಿಗೂ ಪ್ರವೇಶವಿಲ್ಲ
ಜಂಬೂಸವಾರಿ ಮೆರವಣಿಗೆಯಲ್ಲಿ ಟಿಕೆಟ್, ಪಾಸ್ ಇದ್ದವರಿಗೂ ಒಳ ಬಿಡಲಿಲ್ಲ ಎಂದು ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆಯಿತು. ಅರಮನೆಯ ವರಹಾ ದ್ವಾರದಲ್ಲಿ 6500 ರೂ. ಮುಖ ಬೆಲೆಯ ಗೋಲ್ಡ್ ಕಾರ್ಡ್ ಟಿಕೆಟ್ ಇದ್ದವರನ್ನು ಒಳ ಬಿಡಲಿಲ್ಲ ಎನ್ನುವ ದೂರು ಕೇಳಿಬಂದಿತು. ಟಿಕೆಟ್ ಅಥವಾ ಪಾಸ್‌ನಲ್ಲಿ ಈ ಮೊದಲೇ ಯಾವ ದ್ವಾರ, ಯಾವ ಜಾಗ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಲಾಗಿತ್ತು. ಆದರೆ ಅವಧಿ ಮೀರಿ ಬಂದವರು, ಟಿಕೆಟ್‌ನಲ್ಲಿ ನಮೂದಿಸಿದ್ದ ದ್ವಾರಕ್ಕೆ ಬದಲಾಗಿ ಬೇರೆ ದ್ವಾರದಲ್ಲಿ ಪ್ರವೇಶಕ್ಕಾಗಿ ಹೋದವರನ್ನು ಪೊಲೀಸರು ತಡೆದರು. ಈ ವೇಳೆ ಮಾತಿನ ಚಕಮಕಿ ನಡೆಯಿತು. ಇದು ಬನ್ನಿಮಂಟಪದಲ್ಲಿಯೂ ಪುನಾವರ್ತನೆಗೊಂಡಿತು.
ಲಘು ಲಾಠಿ ಪ್ರಹಾರ
ಜಂಬೂಸವಾರಿ ಮೆರವಣಿಗೆ ಸಾಗಿ ಅಂತಿಮವಾಗಿ ಚಿನ್ನದ ಅಂಬಾರಿ ಅರಮನೆ ಬಿಟ್ಟು ಹೊರ ಬರುತ್ತಿದ್ದಂತೆಯೇ ಚಾಮರಾಜ ಒಡೆಯರ್ ವೃತ್ತದಲ್ಲಿ ಜನರು ಹತ್ತಿರ ಬಂದು ಸೆಲ್ಫಿಗಾಗಿ ಮುಗಿಬಿದ್ದರು. ಈ ವೇಳೆ ಪೊಲೀಸರು ಜನರನ್ನು ನಿಯಂತ್ರಿಸಲು ಪರದಾಡಿದರು. ಜನರು ಚದುರದೆ ಇದ್ದಾಗ ಲಘುಲಾಠಿ ಪ್ರಹಾರ ನಡೆಸಿ ಜನರನ್ನು ನಿಯಂತ್ರಿಸಿದರು.