

ಜಮಖಂಡಿ: ಅಮರ ಶಿಲ್ಪಿ ಜಕಣಾಚಾರಿ 8ನೇ ಶತಮಾನದಲ್ಲಿ ನಿರ್ಮಿಸಿದ ಐತಿಹಾಸಿಕ ಜಂಬುಕೇಶ್ವರ ದೇವಸ್ಥಾನದ ಜೀರ್ಣೋದ್ದಾರಕ್ಕಾಗಿ ಶಾಸಕರ ನಿಧಿಯಲ್ಲಿ 13 ಲಕ್ಷ ರೂ. ಅನುದಾನದಲ್ಲಿ ಮೇಲ್ಚಾವಣಿ, ದೇವಸ್ಥಾನದ ತಡೆಗೋಡೆ ವಿವಿಧ ರಿಪೇರಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ನಾಡೋಜ ಜಗದೀಶ ಗುಡಗುಂಟಿ ಹೇಳಿದರು.
ನಗರದ ಜಂಬುಕೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿ ವಿಕ್ಷೀಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಖಂಡಿಗೆ ಹೆಸರು ಬರಲು ಕಾರಣವಾದ ಈ ಜಂಬುಕೇಶ್ವರ ದೇವಸ್ಥಾನ ಎಲ್ಲ ಧರ್ಮಿಯರಿಗೂ ಆರಾಧ್ಯ ದೇವಸ್ಥಾನವಾಗಿದೆ. ಹಲವು ವರ್ಷಗಳಿಂದ ದೇವಸ್ಥಾನ ಶಿಥಿಲಗೊಂಡಿತ್ತು. ಆದ್ದರಿಂದ ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.
ಐತಿಹಾಸಿಕ ಈ ದೇವಸ್ಥಾನಕ್ಕೆ ಪಕ್ಷಾತೀತ, ಜಾತ್ಯತೀತವಾಗಿ ಸಾವಿರಾರು ಭಕ್ತರು ಭಕ್ತಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ಜಂಬುಕೇಶ್ವರ ಗಾರ್ಮೆಂಟ್ಸ್‌ನ ರಾಜೇಶ್ವರಿ ಹಿರೇಮಠ ಮಾತನಾಡಿ, ಇಲ್ಲಿ ಮಳೆಯ ನೀರು ಸಂಗ್ರಹಕ್ಕಾಗಿ ಬೃಹದಾಕಾರದ ಟ್ಯಾಂಕ್ ನಿರ್ಮಿಸಿ ಅಲ್ಲಿಂದ ಲಕ್ಕನ ಕೆರೆಗೆ ನೀರು ಸರಬರಾಜು ಮಾಡುವ ಯೋಜನೆ ಹೊಂದಲಾಗಿದೆ. ಬರುವ ಶಿವರಾತ್ರಿ ದಿನದಂದು ಕಾಮಗಾರಿ ಪೂರ್ಣಗೊಳಿಸಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಜೇಯ ಕಡಪಟ್ಟಿ, ಗಣೇಶ ಶಿರಗಣ್ಣವರ, ಶಂಕರ ಕಾಳೆ, ಗುರುರಾಜ ಸಾಲಿಮಠ, ಲಕ್ಷ್ಮಣ ಸಿಂಧೂರ, ಹಣಮಂತ ಬಿಳ್ಳೂರ, ಸುರೇಶ ಸೊನ್ನದ, ಆನಂದ ಜೋಶಿ, ಲಕ್ಷ್ಮಣ ಚಿನಗುಂಡಿ, ಲಕ್ಷ್ಮಣ ಬೀಳಗಿ, ಪಾಪಣ್ಣ ಶಿರೋಳ, ಅರವಿಂದ ಬೀಳಗಿ, ಆನಂದ ದೇಸಾಯಿ, ಶ್ರೀಧರ ಕಂಬಿ, ಮಂಜು ಭೋವಿ, ಶಶಿ ಜಗದಾಳ ಇತರರಿದ್ದರು.