

ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿ ಮೆರವಣಿಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಯಶಸ್ವಿಗೊಳಿಸಲು ಪೊಲೀಸರು ಕಣ್ಗಾವಲು ಇರಿಸಿದ್ದರು.
ಹತ್ತು ದಿನಗಳ ಕಾಲ ನಡೆದ ದಸರಾ ಮಹೋತ್ಸವದಲ್ಲಿ ಯಾವುದೇ ಸಣ್ಣ ಅಹಿತಕರ ಘಟನೆಯೂ ಆಗದಂತೆ ಕಟ್ಟೆಚ್ಚರ ವಹಿಸಿದ್ದಲ್ಲದೆ, ಹಗಲಿರುಳೆನ್ನದೆ ಶ್ರಮಿಸಿದ್ದರು.
ನಾಡಹಬ್ಬವನ್ನು ಕಣ್ತುಂಬಿಕೊಳ್ಳಲು ಗಣ್ಯಾತಿಗಣ್ಯರು, ಸ್ಥಳೀಯರು, ದೇಶ-ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರಿಂದ ಪೊಲೀಸರು ಹೈ ಅಲರ್ಟ್ ಆಗಿದ್ದರು. ಅಲ್ಲದೆ ಮೆರವಣಿಗೆ ಸಾಗುವ ಮಾರ್ಗದಲ್ಲಿ ಹೆಜ್ಜೆ ಹೆಜ್ಜೆಗೂ ಕ್ಯಾಮರಾಗಳ ಮೂಲಕ ಪರಿಶೀಲನೆ ನಡೆಸುತ್ತಿದ್ದರು.
ನಗರದ ವ್ಯಾಪ್ತಿಯ ನಾನಾ ಸ್ಥಳಗಳಲ್ಲಿ ಸಾರ್ವಜನಿಕರು ಅಳವಡಿಸಿಕೊಂಡಿರುವ 13,140 ಸಿಸಿ ಟಿವಿ ಕ್ಯಾಮರಾಗಳು ಸೇರಿದಂತೆ ಪೊಲೀಸ್ ಇಲಾಖೆಯ ಹಾಲಿ ಇರುವ 380 ಸಿಸಿ ಕ್ಯಾಮರಾ. ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಜಂಬೂಸವಾರಿ ಮೆರವಣಿಗೆ ಸಾಗುವ ಪ್ರಮುಖ ಸ್ಥಳಗಳಲ್ಲಿ 150 ಸಿಸಿ ಕ್ಯಾಮರಾಗಳ ಅಳವಡಿಸಲಾಗಿತ್ತು.
ಜಂಬೂಸವಾರಿ ದಿನ ನಗರ ಅಲ್ಲದೆ ಹೊರ ಜಿಲ್ಲೆಗಳಿಂದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ನಿಯೋಜಿಸಲಾಗಿತ್ತು. ಇಬ್ಬರು ಡಿಐಜಿ, 27ಎಸ್‌ಪಿ, 989 ಇತರ ಪೊಲೀಸ್ ಅಧಿಕಾರಿಗಳು, 3,981 ಸಿಬ್ಬಂದಿ ಸೇರಿ 4,999 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ಅಲ್ಲದೆ ಮೇಲುಸ್ತುವಾರಿಗಾಗಿ ಕೆಲವರನ್ನು ನಿಯುಕ್ತಿಗೊಳಿಸಲಾಗಿತ್ತು.
ಅಲ್ಲದೆ ನಗರ, ಜಿಲ್ಲೆ ಅಲ್ಲದೆ ಕೆಎಸ್‌ಆರ್‌ಪಿ ಸಶಸ್ತ್ರ ಪಡೆಗಳನ್ನು ಭದ್ರತೆಗಾಗಿ ಇರಿಸಲಾಗಿತ್ತು. 10 ನಗರ ಸಶಸ್ತ್ರ ಮೀಸಲು ಪಡೆ, 33 ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆ, 29 ತುಕಡಿ ಎಎಸ್‌ಸಿ, ಮೂರು ತುಕಡಿ ಜಿಡಿಡಿಎಸ್, ಒಂದು ಗರುಡ, ಒಂದು ಐಎಸ್‌ಡಿ, ಸಿಐಇಡಿ ತುಕಡಿಯನ್ನು ನೇಮಕ ಮಾಡಲಾಗಿತ್ತು. ವಿಧ್ವಂಸಕ ಕೃತ್ಯಪತ್ತೆ ದಳಗಳು, ಬಾಂಬ್ ನಿಷ್ಕ್ರಿಯ ದಳ, ವಿಶೇಷ ಗರುಡ ಪಡೆ ಕಾವಲು ಕಾಯುತ್ತಿತ್ತು.
ಅರಮನೆಯಿಂದ ಬನ್ನಿಮಂಟಪದವರೆಗೆ ಸಾಗುವ ಮೆರವಣಿಗೆ ಸಿಸಿಟಿವಿ ಕ್ಯಾಮರಾಗಳನ್ನು ಕಂಟ್ರೋಲ್ ರೂಂನಲ್ಲಿ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ನಿಗಾ ವಹಿಸಿದ್ದರು, ಅಂಬಾರಿ ಸಾಗುವಾಗ ಅದರ ಜತೆಯೇ ಗೂಗಲ್ ಕ್ಯಾಮರಾದ ಸಹಾಯದಿಂದ ಸೂಕ್ತ ನಿರ್ದೇಶನ, ಮಾರ್ಗದರ್ಶನ ಮಾಡಿ ಎಚ್ಚರಿಕೆ ವಹಿಸಲಾಗಿತ್ತು.
ಲಕ್ಷಾಂತರ ಮಂದಿ ಸೇರುವ ದಸರಾಕ್ಕೆ ಭಯೋತ್ಪಾದಕರ ಕರಿನೆರಳು ಇದೆ ಎನ್ನುವ ಮುನ್ನೆಚ್ಚರಿಕೆ ಕ್ರಮವಾಗಿ ಕಳೆದ ವರ್ಷ ಶೇ.30ರಷ್ಟು ಸಿಬ್ಬಂದಿ ಹೆಚ್ಚಿಸಲಾಗಿತ್ತು. ಈ ಬಾರಿಯೂ ಇಷ್ಟೇ ಪ್ರಮಾಣದ ಪೊಲೀಸರನ್ನು ನಿಯೋಜಿಸಲಾಗಿತ್ತು.
ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಅರಮನೆ ಒಳ ಪ್ರವೇಶಿಸುವ ಪ್ರತಿಯೊಬ್ಬರನ್ನು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿ ಒಳ ಬಿಡಲಾಯಿತು.
ಜಂಬೂಸವಾರಿ ಮೆರವಣಿಗೆ ವೀಕ್ಷಿಸಲು ಬರುವ ಪ್ರವಾಸಿಗರನ್ನು ವಂಚನೆ ಮಾಡುವುದನ್ನು ತಪ್ಪಿಸಲು ಪೊಲೀಸರು ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತಿದ್ದರು.