ತಾಯಿ ಚಾಮುಂಡೇಶ್ವರಿ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ: ಬಿ.ಎಸ್.ಯಡಿಯೂರಪ್ಪ

69
Published on

ಮೈಸೂರು: ಕೋವಿಡ್-19, ಅತಿವೃಷ್ಟಿಯಿಂದ ನಾಡಿನ ಜನತೆ ಸಂಕಷ್ಟದಲ್ಲಿ ಇದ್ದಾರೆ. ಆದರೆ, ಇದರ ವಿರುದ್ಧ ನಾವು ವಿಜಯ ಸಾಧಿಸುತ್ತೇವೆ ಎಂಬ ಆತ್ಮವಿಶ್ವಾಸ ಇದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೋಮವಾರ ವಿಜಯದಶಮಿ ದಿನದಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ನಗರದ ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಿ ನಾಡಿನ ಜನತೆಗೆ ಸಂದೇಶ ನೀಡಿದ ಅವರು, ಕೋವಿಡ್-19 ಮತ್ತು ಅತಿವೃಷ್ಟಿಯನ್ನು ಸಮರ್ಥವಾಗಿ ಎದುರಿಸಲು ರಾಜ್ಯ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ರಾಜ್ಯದ ಜನತೆ ಕೂಡ ಸರ್ಕಾರದೊಂದಿಗೆ ಸಹಕರಿಸಬೇಕು. ಕೋವಿಡ್-19 ಹಾಗೂ ಪ್ರವಾಹದಿಂದ ಸಂಕಷ್ಟದಿಂದ ನಾಡಿನ ಜನತೆಯನ್ನು ಪಾರು ಮಾಡಿ ನಾಡಿನಲ್ಲಿ ಶಾಂತಿ, ಸೌಹಾರ್ದತೆಯ ಜತೆಗೆ ಆರೋಗ್ಯ ನೆಲೆಸುವಂತೆ ಮಾಡಲು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ. ಅದೇ ರೀತಿ ನಾಡಿನ ಜನತೆಗೆ ದೇವಿ ಸನ್ಮಂಗಳ ಉಂಟು ಮಾಡಲಿ. ಎಲ್ಲ ಸಂಕಷ್ಟಗಳು ದೂರವಾಗಿ ಜನರು ನೆಮ್ಮದಿ ಯಿಂದ ಬದುಕುವ ಕಾಲವನ್ನು ತಾಯಿ ಚಾಮುಂಡೇಶ್ವರಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದರು.

ತಾಯಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಅಂಬಾರಿ ಮೆರವಣಿಗೆಗೆ ಚಾಲನೆ ನೀಡಿದ್ದೇನೆ. ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡಿದ ಹಿನ್ನೆಲೆ ಹೊಂದಿರುವ ನಾಡಹಬ್ಬ ಇದಾಗಿದೆ. ಈ ಹಬ್ಬ ನಮಗೆ ಹೊಸ ಚೈತನ್ಯ, ಹೊಸ ಉತ್ಸವ, ಆತ್ಮವಿಶ್ವಾಸ ಮೂಡಿಸಲು ಮುನ್ನುಡಿ ಬರೆಯುತ್ತದೆ. ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸಾಕಷ್ಟು ಆಚರಣೆಗಳನ್ನು ಕೈ ಬಿಟ್ಟು ಅತ್ಯಂತ ಸರಳವಾಗಿ ದಸರಾ ಉತ್ಸವ ಆಚರಿಸಲಾಗಿದೆ ಎಂದರು.

ನಾಡಹಬ್ಬ ದಸರಾ ಉತ್ಸವಕ್ಕೆ ಅದರದೇ ಆದ ಐತಿಹಾಸಿಕ ಪರಂಪರೆ, ಸಾಂಸ್ಕೃತಿ ಹಿನ್ನೆಲೆ ಇದೆ. ಭಾರತ ಸಾಂಸ್ಕೃತಿ ಚರಿತ್ರೆಯಲ್ಲಿ ಇಷ್ಟೊಂದು ಸುದೀರ್ಘವಾಗಿ ನಡೆದುಕೊಂಡು ಬಂದಿರುವ ಉತ್ಸವ ಕಾಣುವುದು ಅಪರೂಪ. ಕನ್ನಡ ನಾಡಿನ ಕಲೆ, ಸಂಸ್ಕೃತಿ ಬಿಂಬಿಸುವ ಹಾಗೂ ದೇಶ, ವಿದೇಶಿಗರನ್ನು ಆಕರ್ಷಿಸುವ ದಸರಾ ಉತ್ಸವವನ್ನು ಕರೊನಾ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಆಚರಿಸಿದ್ದೇವೆ. ಮುಂದಿನ ಬಾರಿ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net