ಜಂಬೂ ಸವಾರಿ: ಧಾರವಾಡ ಸ್ತಬ್ಧಚಿತ್ರಕ್ಕೆ ಪ್ರಥಮ ಬಹುಮಾನ

dasara Tamblo winner
Published on

ಮೈಸೂರು: ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಬಹುಮಾನ ಪಡೆದ ಸ್ತಬ್ಧಚಿತ್ರಗಳ ಪಟ್ಟಿಯನ್ನು ಶನಿವಾರ ಪ್ರಕಟಿಸಲಾಗಿದ್ದು, ರಾಜ್ಯದ 31 ಜಿಲ್ಲೆಗಳ ಸ್ತಬ್ಧಚಿತ್ರಗಳ ವಿಭಾಗದಲ್ಲಿ ಧಾರವಾಡ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ.


ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅ.24ರಂದು ನಡೆದ ಜಂಬೂಸವಾರಿ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧಚಿತ್ರಗಳು ಸಾಗಿದ್ದವು. ಅವುಗಳನ್ನು ಪರಿಶೀಲಿಸಿ ತೀರ್ಪುಗಾರರು ಬಹುಮಾನ ವಿಜೇತ ಸ್ತಬ್ಧಚಿತ್ರಗಳನ್ನು ಆಯ್ಕೆ ಮಾಡಿದ್ದಾರೆ.


ಧಾರವಾಡ ಜಿಲ್ಲೆ ಪ್ರಥಮ, ಚಿಕ್ಕಮಗಳೂರು ಜಿಲ್ಲೆ ದ್ವಿತೀಯ ಮತ್ತು ಚಾಮರಾಜನಗರ ಜಿಲ್ಲೆಯ ತೃತೀಯ ಸ್ಥಾನ ಪಡೆದಿವೆ. ಹಾಸನ ಜಿಲ್ಲೆ, ಮಂಡ್ಯ ಜಿಲ್ಲೆ, ಶಿವಮೊಗ್ಗ ಜಿಲ್ಲೆಯ ಸ್ತಬ್ಧಚಿತ್ರಗಳು ಪ್ರೋತ್ಸಾಹದಾಯಕ ಬಹುಮಾನ ಪಡೆದಿವೆ.


ವಿವಿಧ ಇಲಾಖೆಗಳು, ನಿಗಮಗಳ ವಿಭಾಗದಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಥಮ, ಕಾವೇರಿ ನೀರಾವರಿ ನಿಗಮ ದ್ವಿತೀಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತೃತೀಯ ಸ್ಥಾನ ಪಡೆದಿವೆ.

ಕರ್ನಾಟಕ ಸಹಕಾರ ಮತ್ತು ಹಾಲು ಉತ್ಪಾದಕರ ಮಹಾ ಮಂಡಳಿಯ ಸ್ತಬ್ಧಚಿತ್ರವು ಪ್ರೋತ್ಸಾಹದಾಯಕ ಬಹುಮಾನ ಗಳಿಸಿದೆ ಎಂದು ಸ್ತಬ್ಧಚಿತ್ರ ಉಪ ಸಮಿತಿಯ ವಿಶೇಷಾಧಿಕಾರಿಯೂ ಆದ ಜಿಪಂ ಸಿಇಒ ಕೆ.ಎಂ.ಗಾಯತ್ರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ವರ್ಷ ಜಂಬೂಸವಾರಿ ದಿನವೇ ಫಲಿತಾಂಶವನ್ನು ಪ್ರಕಟಿಸಲಾಗುತ್ತಿತ್ತು. ಆದರೆ, ಈ ಬಾರಿ ಜಂಬೂಸವಾರಿ ಮುಗಿದ ನಾಲ್ಕು ದಿನಗಳ ಬಳಿಕ ಆಯ್ಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net