

ಮೈಸೂರು: ದಸರಾ ಉತ್ಸವದ ಆಕರ್ಷಣೆಯ ಕೇಂದ್ರಬಿಂದು ಜಂಬೂಸವಾರಿ ವೀಕ್ಷಿಸಲು ಬುಧವಾರ ಸಾಂಸ್ಕೃತಿಕ ನಗರಿಯತ್ತ ಜನಸಾಗರವೇ ಹರಿದು ಬಂತು. ಜನರು ಜೀವದ ಹಂಗನ್ನು ತೊರೆದು ಪಾರಂಪರಿಕ ಕಟ್ಟಡಗಳನ್ನು ಏರುವ ಮೂಲಕ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಂಡರು.
ಅರಮನೆಯಿಂದ ಬನ್ನಿಮಂಟಪದವರೆಗಿನ ಮಾರ್ಗದಲ್ಲಿ ಲಕ್ಷಾಂತರ ಜನರು ಜಮಾಯಿಸಿದ್ದರು. ಎಲ್ಲಿ ಕಣ್ಣಾಡಿಸಿದರೂ ಜನಜಂಗುಳಿ ಯೇ ಕಂಡುಬರುತಿತ್ತು. ಸಾಕಷ್ಟು ಜನರು ಜೀವದ ಹಂಗು ತೊರೆದು ಪಾರಂಪರಿಕ ಕಟ್ಟಡಗಳು ಹಾಗೂ ಮರಗಳ ಮೇಲೆ ಏರಿ ಕಲಾತಂಡಗಳು, ಸ್ತಬ್ಧಚಿತ್ರ ಮೆರವಣಿಗೆ ಹಾಗೂ ಜಂಬೂಸವಾರಿಯನ್ನು ವೀಕ್ಷಿಸಿದರು.
ಮರಗಳು ಹಾಗೂ ಪಾರಂಪರಿಕ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ವೀಕ್ಷಿಸಬಾರದು ಎಂದು ಅಧಿಕಾರಿಗಳು ಸೂಚನೆ ನೀಡಿದರೂ ಸೂಚನೆಯನ್ನು ಲೆಕ್ಕಿಸದ ಜನರು ಮೆರವಣಿಗೆ ವೀಕ್ಷಿಸಲು ಕಟ್ಟಡಗಳು ಹಾಗೂ ಮರಗಳನ್ನು ಏರಿದರು. ಕುಸಿತದ ಭೀತಿ ಎದುರಿಸುತ್ತಿರುವ ಲ್ಯಾನ್ಸ್‌ಡೌನ್ ಕಟ್ಟಡ, ದೇವರಾಜ ಮಾರುಕಟ್ಟೆಯನ್ನು ಜನರು ಏರಿದರು.
ಕೆ.ಆರ್.ವೃತ್ತದ ಪಾಲಿಕೆ ಕಟ್ಟಡಗಳ ಉದ್ದಕ್ಕೂ ಜನ ಸೇರಿದ್ದರು. ವಿಶ್ವೇಶ್ವರಯ್ಯ ಭವನ ಮತ್ತು ಕೆಎಸ್‌ಆರ್‌ಟಿಸಿ ಕಟ್ಟಡ ಬಿಟ್ಟರೆ ಉಳಿದ ಎಲ್ಲ ಪಾರಂಪರಿಕ ಕಟ್ಟಡಗಳ ಮೇಲೆ ಜನಜಾತ್ರೆ ಕಂಡು ಬಂತು. ಈ ಎಲ್ಲ ಪಾರಂಪರಿಕ ಕಟ್ಟಡಗಳು ದುಸ್ಥಿತಿಯಲ್ಲಿವೆ. ಸುರಕ್ಷತೆ ದೃಷ್ಟಿಯಿಂದ ಪಾರಂಪರಿಕ ಕಟ್ಟಡಗಳ ಮೇಲೆ ಕುಳಿತು ಜಂಬೂಸವಾರಿ ವೀಕ್ಷಿಸುವುದನ್ನು ನಿಷೇಧಿಸಲಾಗಿದೆ. ಆದರೆ, ಹೇಗಾದರು ಮಾಡಿ ಜಂಬೂಸವಾರಿಯನ್ನು ವೀಕ್ಷಿಸಲೇಬೇಕೆಂದು ಹಠಕ್ಕೆ ಬಿದ್ದ ಜನರು ಜೀವದ ಹಂಗು ತೊರೆದು ದುಸ್ಥಿತಿಯಲ್ಲಿದ್ದ ಪಾರಂಪರಿಕ ಕಟ್ಟಡಗಳನ್ನು ಏರಿದರು.
ಕಟ್ಟಡವೇರಿದ್ದ ಜನರನ್ನು ಕೆಳಗಿಳಿಸಲು ಪೊಲೀಸರು ಹರಸಾಹಸ ಪಟ್ಟರು. ನಗರ ಬಸ್ ನಿಲ್ದಾಣದ ಮೇಲೆ ಹತ್ತಿದ ಯುವಕರನ್ನು ಕೆಳಗಿಳಿಸಲು ಪೊಲೀಸರು ಲಾಠಿ ರುಚಿ ತೋರಿಸಿದರು. ಆದರೂ ಯುವಕರು ಮಾತ್ರ ಜಗ್ಗಲಿಲ್ಲ. ಆಯುರ್ವೇದ ವೃತ್ತದಿಂದ ಬನ್ನಿಮಂಟಪ ವೃತ್ತದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ನೆರೆದಿದ್ದರು. ರಸ್ತೆ ಬದಿಯಲ್ಲಿ, ಕಟ್ಟಡಗಳ ಮೇಲೆ, ಮರಗಳು ಹಾಗೂ ವಾಹನಗಳ ಮೇಲೆ ಕುಳಿತು ಜಂಬೂಸವಾರಿಯನ್ನು ವೀಕ್ಷಿಸಿದರು.
ನೀರೆರೆಚಾಟ!
ಚಿಕ್ಕಗಡಿಯಾರ ವೃತ್ತ ಸಮೀಪ ರಸ್ತೆಬದಿಯಲ್ಲಿ ಜಂಬೂಸವಾರಿ ವೀಕ್ಷಿಸಲು ಕುಳಿತಿದ್ದ ಜನರು ನೀರೆರೆಚಾಟ ನಡೆಸಿದರು. ನಂದಿಧ್ವಜ ಕುಣಿತ ಬರುತ್ತಿದ್ದಂತೆ ಮೊದಲ ಸಾಲಿನಲ್ಲಿ ಕುಳಿತಿದ್ದ ಕೆಲವರು ಮೇಲೆದ್ದರು. ತಕ್ಷಣ ಕಡೇ ಸಾಲಿನಲ್ಲಿದ್ದವರು ನಮಗೆ ಕಾಣುತ್ತಿಲ್ಲ ಎಂದು ಅವರ ಮೇಲೆ ನೀರು ಎರೆಚಿದರು. ಇದರಿಂದ ಸಿಟ್ಟಾದ ಮೊದಲ ಸಾಲಿನವರೂ ಹಿಂದಿನ ಸಾಲಿನವರ ಮೇಲೆ ನೀರು ಎರಚಿದರು. ಅಷ್ಟರಲ್ಲಿ ಪೊಲೀಸರು ಮಧ್ಯೆ ಪ್ರವೇಶಿಸಿ ಎಲ್ಲರನ್ನು ಸುಮ್ಮನಿರಿಸಿದರು.
ಜಂಬೂಸವಾರಿ ಮಾರ್ಗದಲ್ಲಿ ತಳ್ಳಾಟ- ನೂಕಾಟ
ಜಂಬೂಸವಾರಿ ಮಾರ್ಗದಲ್ಲಿ ಸಾಕಷ್ಟು ಜನರು ನೆರೆದಿದ್ದ ಹಿನ್ನೆಲೆಯಲ್ಲಿ ಅಲ್ಲಲ್ಲಿ ತಳ್ಳಾಟ ನೂಕಾಟ ಕಂಡು ಬಂತು. ಕೆ.ಆರ್.ವೃತ್ತ, ಚಿಕ್ಕಗಡಿಯಾರ, ಚಾಮುಂಡೇಶ್ವರಿ ಚಿತ್ರ, ಹಸಿರು ಚಪ್ಪರ, ಆಯುರ್ವೇದ ವೃತ್ತ, ಭಾರತೀಯ ವೈದ್ಯಕೀಯ ಸಂಘ, ಪಂಚಮುಖಿ ಗಣಪತಿ ವೃತ್ತ, ಬೊಂಬುಬಜಾರ್, ಹೈವೇ ವೃತ್ತ ಸೇರಿದಂತೆ ಎಲ್ಲ ಕಡೆಯೂ ನೂಕುನುಗ್ಗಲು ಕಂಡುಬಂತು. ಕೆಲವು ಕಡೆ ಪೊಲೀಸರು ಲಾಠಿ ಬೀಸಿ ಜನರನ್ನು ನಿಯಂತ್ರಣ ಮಾಡಿದರು. ಕೆ.ಆರ್.ವೃತ್ತದಲ್ಲಿ ತಳ್ಳಾಟ ಹೆಚ್ಚಾಗಿ ಕಂಡು ಬಂತು.
ಜನ ದಟ್ಟನೆಯ ಜಾಗದಲ್ಲಿ ಮಹಿಳೆಯರು ಮತ್ತು ಮಕ್ಕಳು ಸಿಲುಕಿ ಸಮಸ್ಯೆ ಎದುರಿಸಿದರು. ಕೆಲವು ಕಡೆ ನೂಕಾಟದಿಂದ ಮಹಿಳೆಯರು ಮತ್ತು ಮಕ್ಕಳು ಅಸ್ವಸ್ಥರಾದರು. ಈ ರೀತಿ ತೊಂದರೆ ಅನುಭವಿಸುತ್ತಿದ್ದ ಮಕ್ಕಳು ಮತ್ತು ಮಹಿಳೆಯರನ್ನು ಪೊಲೀಸರು ಜನರ ಗುಂಪುಗಳಿಂದ ಹೊರ ತಂದು ಮುಂದೆ ಕೂರಿಸುತ್ತಿದ್ದ ದೃಶ್ಯ ಕಂಡು ಬಂತು.
ಜಂಬೂಸವಾರಿಯಲ್ಲಿ ಭದ್ರತಾ ವೈಫಲ್ಯ
ಜಂಬೂಸವಾರಿ ಮೆರವಣಿಗೆಯಲ್ಲಿ ಭದ್ರತಾ ವೈಫಲ್ಯ ಎದ್ದು ಕಂಡಿತು. ಅಂಬಾರಿ ಮೆರವಣಿಗೆ ಅಗಮಿಸುವ ಮುನ್ನವೇ ಸಯ್ಯಜಿರಾವ್ ರಸ್ತೆಯಲ್ಲಿ ಜನರು ಓಡಾಡಲು ಪ್ರಾರಂಭಿಸಿದರು. ರಸ್ತೆಗೆ ಓಡಿ ಬರುತ್ತಿದ್ದ ಕೆಲವರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜಿಸಿದರು ಸಾರ್ವಜನಿಕರು ರಸ್ತೆಗೆ ಬರುವುದನ್ನು ತಡೆಯಲು ಸಾಧ್ಯವಾಗಲಿಲ್ಲ. ಅಂಬಾರಿ ಮೆರವಣಿಗೆ ಕೆ.ಆರ್. ವೃತ್ತ ದಾಟಿದ ನಂತರ ಸಾರ್ವಜನಿಕರು ರಸ್ತೆಗೆ ಬರುತ್ತಿರುವುದು ಹೆಚ್ಚಾಯಿತು. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಯಿತು.