

ಜಮಖಂಡಿ: ಬೇಕು ಬೇಡಿಕೆಗಳಿಗೆ ಸ್ಪಂದಿಸಿದರೆ ಮಾತ್ರ ಸಹಕಾರ ಕ್ಷೇತ್ರ ಬಲವರ್ಧನೆಗೊಳುವುದು. ಸಹಕಾರ ಕ್ಷೇತ್ರದಲ್ಲಿ ಜಾತಿ ಪಕ್ಷ ಸೇರಿದರೆ ಈ ಕ್ಷೇತ್ರಕ್ಕೆ ಹಾನಿಯಾಗುವುದು ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.
ನಗರದ ಬಸವ ಭವನದಲ್ಲಿ ಸಹಕಾರ ಇಲಾಖೆ, ಸಹಕಾರ ಮಹಾಮಂಡಳ ನಿ. ಬೆಂಗಳೂರು, ಜಿಲ್ಲಾ ಸಹಕಾರ ಯೂನಿಯನ್, ಜಮಖಂಡಿ ತಾಲೂಕಿನ ಎಲ್ಲ ಸಹಕಾರ ಸಂಘಗಳ ಸಹಯೋಗದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಸಹಕಾರ ಸಂಸ್ಥೆಗಳ ನಡುವೆ ಸಹಕಾರವನ್ನು ಬಲಪಡಿಸುವ ಕಾರ್ಯಕ್ರಮ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚೆಗೆ ನಡೆದ ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಹಣದ ಹೊಳೆ ಹರಿದಿರುವುದು ವಿಪರ್ಯಾಸದ ಸಂಗತಿ. ಇದರಿಂದ ಸಹಕಾರಿ ಸಂಘಗಳು ಅಭಿವೃದ್ಧಿಯಾಗದೆ ಕುಂಠಿತಗೊಳ್ಳಲಿವೆ ಎಂದರು.
ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಒಕ್ಕೂಟದ ಅಧ್ಯಕ್ಷ ನಿಂಗಪ್ಪ ಕಡಪಟ್ಟಿ ಮಾತನಾಡಿ, ಆರ್ಥಿಕತೆಯಿಂದ ಸದೃಢರಾಗಬೇಕಾದರೆ ಪ್ರತಿ ಗ್ರಾಮದಲ್ಲಿ ಸಂಘ, ಸಂಸ್ಥೆ, ಶಾಲೆ, ಗ್ರಾಮ ಪಂಚಾಯಿತಿ ಸ್ಥಾಪನೆಯಾದರೆ ಮಾತ್ರ ದೇಶ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಏಗಪ್ಪ ಸವದಿ ಮಾತನಾಡಿ, ನಬಾರ್ಡ್ ಯೋಜನೆಯಿಂದ ಆರ್ಥಿಕ ಸಹಾಯ ಪಡೆದು ಸಂಘ ಸಂಸ್ಥೆಗಳನ್ನು ಬಲವರ್ಧನೆಗೊಳಿಸಲು ಸಾಧ್ಯವಾಗುವುದು ಎಂದರು.
ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಕಾಶಿನಾಥ ಹುಡೇದ ಅಧ್ಯಕ್ಷತೆ ವಹಿಸಿ ಮಾತನಾಡಿ, ಉತ್ತರ ಕರ್ನಾಟಕದಲ್ಲೇ ಬಾಗಲಕೋಟೆ ಜಿಲ್ಲೆ ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಜಿಲ್ಲೆಯ ಬಿಡಿಸಿಸಿ ಬ್ಯಾಂಕ್ 5 ಸಾವಿರ ಕೋಟಿ ರೂ. ವ್ಯವಹಾರ ಹೊಂದಿದೆ ಎಂದರು.
ಜಿಲ್ಲೆಯ ಪ್ರಕಾಶ ತಪಶೆಟ್ಟಿ, ಎಸ್.ಆರ್. ಪಾಟೀಲ ಹಾಗೂ ರಂಗನಗೌಡ ಪಾಟೀಲ ಅವರಿಗೆ ಸಹಕಾರ ರತ್ನ ಪ್ರಶಸ್ತಿ ದೊರಕಿರುವುದು ನಮ್ಮೆಲ್ಲರಿಗೆ ಹೆಮ್ಮೆ ಎಂದರು.
ಬಿಎಲ್‌ಡಿಇ ಕಾಲೇಜಿನ ಹಿರಿಯ ಪ್ರಾಧ್ಯಾಪಕ ಡಾ.ಬಿ.ಬಿ. ಶಿರಡೋಣಿ ಮಾತನಾಡಿದರು. ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೀರಸಾಬ ಬಾಗವಾನ, ಧರೆಪ್ಪ ಆಲಗೂರ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ಅಡಿವೆಪ್ಪ ಬಾರಿಕಾಯಿ, ಶಿವಾಜಿ ಪತ್ತಿನ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ರಾಜು ಪಿಸಾಳ, ತಾಪಂ ಅಧ್ಯಕ್ಷೆ ಸವಿತಾ ಕಲ್ಯಾಣಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಡಿ.ಆರ್. ಪಾಟೀಲ, ಜಿಲ್ಲಾ ಜಂಟಿ ನಿರ್ದೇಶಕ ಭೀಮನಗೌಡ ಹೊಸಮನಿ, ಸಹಕಾರಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ಸಾರವಾಡ, ಡಿಸಿಸಿ ಬ್ಯಾಂಕ್ ಹಿರಿಯ ನಿರೀಕ್ಷಕ ಎಸ್.ಆರ್. ಗಡೆಪ್ಪನವರ, ಅರ್ಬನ್ ಬ್ಯಾಂಕ್ ನಿರ್ದೇಶಕ ರುದ್ರಯ್ಯ ಕರಡಿ, ಎಸ್.ಎಸ್. ಲಾಯನ್ನವರ, ಎಸ್.ಬಿ. ಮಾಳಿ, ಸಿದ್ದಪ್ಪ ಬಿಳ್ಳೂರ ಇತರರು ಇದ್ದರು. ಎಂ.ಜಿ. ಕೊಟಗಿ ಸ್ವಾಗತಿಸಿದರು, ಜೆ.ಕೆ. ಚವಾಣ್ ಸಹಕಾರ ಪ್ರತಿಜ್ಞಾ ವಿಧಿ ಬೋಧಿಸಿದರು, ಎಂ.ಎಸ್. ನಾಗರಾಳ ವಂದಿಸಿದರು.
EndFragment